×
Ad

ನಕಲಿ ಡಿಗ್ರಿ ತೋರಿಸಿ ಪಾಸ್ಪೋರ್ಟ್ ಪಡೆದ ಬಿಲಿಯಾಧೀಶ?

Update: 2016-09-18 23:42 IST

ಭಾರತೀಯ ಪೌರತ್ವ ಹಾಗೂ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ್ದೂ ಸೇರಿದಂತೆ ಬಾಲಕೃಷ್ಣ ಜೊತೆ ಹಲವಾರು ವಿವಾದಗಳು ಥಳಕು ಹಾಕಿಕೊಂಡಿವೆ. ಅವರ ‘ಪೂರ್ವ ಮಾಧ್ಯಮ’ ಹೈಸ್ಕೂಲ್ ಪದವಿ ಹಾಗೂ ಸಂಪೂರ್ಣಾನಂದ ಸಂಸ್ಕೃತ ವಿವಿಯ ‘ಶಾಸ್ತ್ರಿ’ ಸಂಸ್ಕೃತ ಪದವಿ ದಾಖಲೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಭಾರತೀಯ ಪಾಸ್‌ಪೋರ್ಟ್ ಪಡೆಯುವುದಕ್ಕಾಗಿ ನಕಲಿ ಡಿಗ್ರಿಗಳನ್ನು ಸಂಪಾದಿಸಲು ವಂಚನೆ ಹಾಗೂ ಕ್ರಿಮಿನಲ್ ಸಂಚು ಎಸಗಿದ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿತ್ತು.

ತ್ವರಿತವಾಗಿ ಬೆಳೆಯುತ್ತಿರುವ ಗ್ರಾಹಕ ವಸ್ತುಗಳ ಮಾರಾಟ ಸಂಸ್ಥೆ (ಎಫ್‌ಎಂಸಿಜಿ)ಯಾದ ಬಾಬಾ ರಾಮ್‌ದೇವ್ ಅವರ ‘ಪತಂಜಲಿ ಆಯುರ್ವೇದ’ ಉತ್ಪನ್ನಗಳ ಒಟ್ಟು ಮಾರಾಟವು 2015-16ರ ಸಾಲಿನಲ್ಲಿ 5 ಸಾವಿರ ಕೋಟಿ ರೂ.ಗೆ ತಲುಪಿತ್ತು. ಈಗ ಪತಂಜಲಿ ಭಾರತದಲ್ಲಿ ಎಲ್ಲರ ಮನೆಮಾತಾಗಿದೆ. ಅಸಲಿ ವಿಷಯವೇನೆಂದರೆ, ರಾಮ್‌ದೇವ್ ಈ ಗ್ರಾಹಕ ಉತ್ಪನ್ನಗಳ ದಿಗ್ಗಜ ಸಂಸ್ಥೆಯ ಮುಖವಾಡ ಮಾತ್ರವೇ ಆಗಿದ್ದಾರೆ. ಈ ಯೋಗ ಗುರುವಿನ ನಿಕಟವರ್ತಿ, ಆಚಾರ್ಯ ಬಾಲಕೃಷ್ಣ ಎಂದೇ ಕರೆಯಲ್ಪಡುವ ಬಾಲಕೃಷ್ಣ ಸುವೇದಿ, ಈ ಬೃಹತ್ ಉದ್ಯಮ ಸಂಸ್ಥೆಯ ಹಿಂದಿರುವ ವ್ಯಕ್ತಿಯಾಗಿದ್ದಾರೆ.

43 ವರ್ಷ ವಯಸ್ಸಿನ ಈ ವಿವಾದಾಸ್ಪದ ವ್ಯಕ್ತಿ, ಪತಂಜಲಿ ಆಯುರ್ವೇದ ಸಂಸ್ಥೆಯ ಬಹುಪಾಲು ಶೇರು (ಶೇ.94)ಗಳನ್ನು ಹೊಂದಿದ್ದು, ಅವರೀಗ, 25,600 ಕೋಟಿ ರೂ. ಸಂಪತ್ತಿನ ಒಡೆಯರಾಗಿದ್ದು, 2016ನೆ ಸಾಲಿನ ಹರೂನ್ ಇಂಡಿಯಾದ ಬಿಲಿಯಾಧೀಶರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  ಭಾರತೀಯ ಪೌರತ್ವ ಹಾಗೂ ಶೈಕ್ಷಣಿಕ ಅರ್ಹತೆಗೆೆ ಸಂಬಂಧಿಸಿದ್ದೂ ಸೇರಿದಂತೆ ಬಾಲಕೃಷ್ಣ ಜೊತೆ ಹಲವಾರು ವಿವಾದಗಳು ಥಳಕು ಹಾಕಿಕೊಂಡಿವೆ. ಅವರ ‘ಪೂರ್ವ ಮಾಧ್ಯಮ’ ಹೈಸ್ಕೂಲ್ ಪದವಿ ಹಾಗೂ ಸಂಪೂರ್ಣಾನಂದ ಸಂಸ್ಕೃತ ವಿವಿಯ ‘ಶಾಸ್ತ್ರಿ’ ಸಂಸ್ಕೃತ ಪದವಿ ದಾಖಲೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಭಾರತೀಯ ಪಾಸ್‌ಪೋರ್ಟ್ ಪಡೆಯುವುದಕ್ಕಾಗಿ ನಕಲಿ ಡಿಗ್ರಿಗಳನ್ನು ಸಂಪಾದಿಸಲು ವಂಚನೆ ಹಾಗೂ ಕ್ರಿಮಿನಲ್ ಸಂಚು ಎಸಗಿದ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿತ್ತು. ಆಗ ಬಾಲಕೃಷ್ಣ ತಲೆಮರೆಸಿಕೊಂಡಿದ್ದರು. ಆದರೆ ಆನಂತರ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) 2012ರಲ್ಲಿ ಬಂಧಿಸಿತ್ತು. ಫೋರ್ಜರಿ ಹೈಸ್ಕೂಲ್ ಹಾಗೂ ಪದವಿ ಪತ್ರಗಳ ಆಧಾರದಲ್ಲಿ ಅವರಿಗೆ ಪಾಸ್‌ಪೋರ್ಟ್ ನೀಡಲಾಗಿತ್ತು ಹಾಗೂ ಆತ ಲೈಸನ್ಸ್ ರಹಿತವಾಗಿ ಪಿಸ್ತೂಲ್ ಹೊಂದಿದ್ದರೆಂದು ಸಿಬಿಐ ಆಪಾದಿಸಿತ್ತು.

  ತರುವಾಯ, ಜಾರಿ ನಿರ್ದೇಶನಾಲಯ (ಇಡಿ)ವು ಅವರ ವಿರುದ್ಧ ಹಣ ಚೆಲುವೆ (ಕಪ್ಪು ಹಣ ಬಿಳುಪುಗೊಳಿಸುವುದು) ಆರೋಪದಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ ಎನ್‌ಡಿಎ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲಾ ಪ್ರಕರಣಗಳನ್ನು ಕೈಬಿಡಲಾಗಿತ್ತು. ಎರಡು ವರ್ಷಗಳ ತನಿಖೆಯನ್ನು ನಡೆಸಿದ ಸಿಬಿಐ ಬಳಿಕ ಆತ ಯಾವುದೇ ತಪ್ಪೆಸಗಿರುವ ಬಗ್ಗೆ ಪುರಾವೆಗಳಿಲ್ಲವೆಂದು ಹೇಳಿ, ಆತನಿಗೆ ಕ್ಲೀನ್‌ಚಿಟ್ ನೀಡಿತ್ತು.

 ಪತಂಜಲಿ ಆಯುರ್ವೇದ ಕೇಂದ್ರ ಪ್ರೈ.ಲಿಮಿಟೆಡ್ ಕಂಪೆನಿಯು ಲೋಕಸಭಾ ಚುನಾವಣೆಗೆ ಮೊದಲು, ಅಂದರೆ 2009ರ ಮಾರ್ಚ್ 8ರಂದು, ಆಗ ಪ್ರತಿಪಕ್ಷವಾಗಿದ್ದ ಬಿಜೆಪಿಗೆ 11 ಲಕ್ಷ ರೂ. ದೇಣಿಗೆಯಾಗಿ ನೀಡಿತ್ತು. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಕೇಳಲಾದ ಪ್ರಶ್ನೆಗೆ ಚುನಾವಣಾ ಆಯೋಗ ನೀಡಿದ ಉತ್ತರದಲ್ಲಿ ಈ ವಿಷಯ ಬಹಿರಂಗವಾಗಿತ್ತು.

ಜಯ್ ವಲ್ಲಭ್ ಹಾಗೂ ಸುಮಿತ್ರಾ ದೇವಿ ದಂಪತಿಗೆ ಬಾಲಕೃಷ್ಣ ಜನಿಸಿದ್ದರು. ತರುವಾಯ ಈ ಕುಟುಂಬವು ಭಾರತಕ್ಕೆ ವಲಸೆ ಬಂದಿತು. ಬಾಲಕೃಷ್ಣ ಅವರು ರಾಮ್‌ದೇವ್‌ರನ್ನು ಹರ್ಯಾಣದ ಗುರುಕುಲವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. 1990ರ ದಶಕದಲ್ಲಿ ಇವರಿಬ್ಬರೂ ಸೇರಿ, ಹರಿದ್ವಾರದಲ್ಲಿ ದಿವ್ಯ ಆಯುರ್ವೇದ ಫಾರ್ಮಸಿ ಯನ್ನು ಸ್ಥಾಪಿಸಿದ್ದರು. ಯೋಗಗುರು ರಾಮ್‌ದೇವ್ ಅವರಿಗಿರುವ ಜನಪ್ರಿಯತೆ ಹಾಗೂ ವಿಶ್ವದಾದ್ಯಂತ ಅವರಿಗಿರುವ ಅನುಯಾಯಿಗಳನ್ನೇ ಬಂಡವಾಳ ಮಾಡಿಕೊಂಡ ಬಾಲಕೃಷ್ಣ ಆನಂತರ ಇತರ ಹಲವಾರು ಉದ್ಯಮಗಳನ್ನು ಸ್ಥಾಪಿಸಲು ನೆರವಾದರು ಮತ್ತು ಆ ಪೈಕಿ 34 ಕಂಪೆನಿಗಳ ಆಡಳಿತ ನಿರ್ದೇಶಕರಾದರು. ಅವರು ರಾಮ್‌ದೇವ್ ಹಾಗೂ ಅವರ ಪತಂಜಲಿ ಸಂಸ್ಥೆಯೊಂದಿಗೆ ಸಂಪರ್ಕವಿರುವ ಮೂರು ಟ್ರಸ್ಟ್‌ಗಳ ಮುಖ್ಯಸ್ಥರೂ ಆಗಿದ್ದಾರೆ.

 ಓರ್ವ ಪರಿಣಿತ ಉದ್ಯಮಿಯಂತೆ ಬಾಲಕೃಷ್ಣ ಭಾರತೀಯ ಗ್ರಾಹಕರ ಮನಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಯಶಸ್ವಿಯಾದರು ಹಾಗೂ ಸ್ವದೇಶಿ ಉತ್ಪನ್ನಗಳ ಪರ ಅಭಿಯಾನವನ್ನು ಆರಂಭಿಸುವ ಮೂಲಕ, ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕ ವಸ್ತುಗಳ ದಿಗ್ಗಜ ಕಂಪೆನಿಗಳ ಪಾರಮ್ಯವನ್ನು ಪ್ರಶ್ನಿಸಿದರು. ಕಂಪೆನಿ ಹಾಗೂ ಅದರ ಉತ್ಪನ್ನಗಳ ಪ್ರಚಾರವನ್ನು ರಾಮ್‌ದೇವ್ ಅವರ ಯೋಗ ಶಿಬಿರಗಳು, ಸಮಾರಂಭಗಳು ಹಾಗೂ ಟಿವಿ ಕಾರ್ಯಕ್ರಮಗಳ ಮೂಲಕ ನಡೆಸಲಾಯಿತು.

ಪತಂಜಲಿ ಆಯುರ್ವೇದ ಕಂಪೆನಿಯು ಸ್ಪರ್ಧಾತ್ಮಕ ದರ ಸಂರಚನೆ ಯೊಂದಿಗೆ, ಪ್ರಾಕೃತಿಕ, ಗಿಡಮೂಲಿಕೆ ಹಾಗೂ ಆಯುರ್ವೇದಿಕ್ ಎಂಬ ಹಣೆಪಟ್ಟಿಯೊಂದಿಗೆ ಮಾರುಕಟ್ಟೆಗೆ ತನ್ನ ಉತ್ಪನ್ನಗಳನ್ನು ಪರಿಚಯಿಸಿತು. ಪತಂಜಲಿ ಆಯುರ್ವೇದದ ಮಾರುಕಟ್ಟೆ ಕಾರ್ಯತಂತ್ರಗಳು ಇತರ ಎಫ್‌ಎಂಸಿಜಿಗಳಿಗಿಂತ ಭಿನ್ನವಾಗಿದ್ದವು. ಇತರ ಕಂಪೆನಿಗಳು ತಮ್ಮ ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವಾಗ ಎಚ್ಚರಿಕೆ ವಹಿಸುತ್ತಿದ್ದವು ಹಾಗೂ ತಮ್ಮ ನೂತನ ಶ್ರೇಣಿಯ ಉತ್ಪನ್ನಗಳನ್ನು ಪರಿಚಯಿಸುವ ಮೊದಲು ಮಾರುಕಟ್ಟೆ ಸಂಶೋಧನೆ ನಡೆಸುತ್ತಿದ್ದವು. ಪತಂಜಲಿಯು ಯಾವುದೇ ಮಾರುಕಟ್ಟೆ ಸಂಶೋಧನೆಯಿಲ್ಲದೆಯೇ ಹೆಚ್ಚುಕಮ್ಮಿ ಏಕಕಾಲದಲ್ಲಿ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿತ್ತು.

ತನ್ನ ಕಂಪೆನಿಯ ಯಾವುದೇ ಒಂದು ಉತ್ಪನ್ನಕ್ಕೆ ಮೂರ್ತರೂಪ ನೀಡುವುದರಿಂದ ಹಿಡಿದು, ಅದನ್ನು ಅಭಿವೃದ್ಧಿಪಡಿಸುವವರೆಗೆ ಮತ್ತು ಅಂತಿಮ ಪ್ಯಾಕೇಜಿಂಗ್‌ವರೆಗೂ ಬಾಲಕೃಷ್ಣ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು. ಗ್ರಾಮೀಣ ಇಮೇಜ್‌ನೊಂದಿಗೆ ತನ್ನ ಕಂಪೆನಿಯ ಗುಣಮಟ್ಟವನ್ನು ಉಳಿಸಿಕೊಂಡಿರುವುದಾಗಿ ಆತ ಹೇಳಿಕೊಳ್ಳುತ್ತಿದ್ದಾರೆ.

 ಭಾರತೀಯ ಉತ್ಪನ್ನಗಳು ಗುಣಮಟ್ಟದಲ್ಲಿ ಅಂತಾರಾಷ್ಟ್ರೀಯ ಉತ್ಪನ್ನಗಳಿಗಿಂತ ಕೀಳು ಎಂಬ ಗ್ರಾಹಕರ ಭಾವನೆಯನ್ನು ಪತಂಜಲಿ ಸಂಸ್ಥೆಯು ಬದಲಾಯಿಸಿದೆಯೆಂದು ಬಾಲಕೃಷ್ಣ ಅಭಿಪ್ರಾಯಿಸುತ್ತಾರೆ.

   ಪತಂಜಲಿಯು ಇತ್ತೀಚೆಗೆ ದೇಶದ ಎಲ್ಲಾ ಪ್ರತಿಷ್ಠಾಪಿತ ಎಫ್‌ಎಂಸಿಜಿ ಕಂಪೆನಿಗಳನ್ನು ಹಿಂದಿಕ್ಕುವಲ್ಲಿ ಸಫಲವಾಗಿದೆ. ಮಾತ್ರವಲ್ಲದೆ ಡಾಬರ್, ಬೈದ್ಯನಾಥ್ ಹಾಗೂ ಝಂಡುವಿನಂಹ ಪ್ರಮುಖ ಗಿಡಮೂಲಿಕೆ ಹಾಗೂ ಆಯುರ್ವೇದಿಕ್ ಉತ್ಪನ್ನಗಳ ತಯಾರಕ ಸಂಸ್ಥೆಗಳ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳುವಲ್ಲೂ ಯಶಸ್ವಿಯಾಗಿದೆ. ಪ್ರಸಕ್ತ ಹಣಕಾಸು ವರ್ಷ (2016-17)ದಲ್ಲಿ 10 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿರುವ ಪತಂಜಲಿ ಕೆಲವು ವಿದೇಶಿ ಕಂಪೆನಿಗಳ ಜೊತೆ ಜಂಟಿ ಉದ್ಯಮಗಳನ್ನು ಕೂಡಾ ಆರಂಭಿಸಿದೆ ಮತ್ತು ಮಧ್ಯಪ್ರಾಚ್ಯ, ಅಮೆರಿಕ ಹಾಗೂ ಕೆನಡದಂತಹ ದೇಶಗಳಿಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. 2020-21ರ ವೇಳೆಗೆ ಪತಂಜಲಿಯು 1 ಲಕ್ಷ ಕೋಟಿ ರೂ. ವಹಿವಾಟು ಸಾಧಿಸುವ ಮಹತ್ವಾಕಾಂಕ್ಷೆಯಿರಿಸಿದೆ.

  ಸಾಂಪ್ರದಾಯಿಕ ಸಿಇಒಗಳಿಂದ ತೀರಾ ವಿಭಿನ್ನ ವ್ಯಕ್ತಿತ್ವದ ಬಾಲಕೃಷ್ಣ ಹೆಚ್ಚೇನೂ ಪ್ರಚಾರವನ್ನು ಬಯಸದ ವ್ಯಕ್ತಿ. ತನ್ನ ಸಮಕಾಲೀನರಿಗಿಂತ ತುಂಬಾ ಬೇರೆಯೇ ಆದ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ.ಸಾಂಪ್ರದಾಯಿಕ ಬಿಳಿಕುರ್ತಾ, ಧೋತಿ ಧರಿಸುವ ಇವರು ಹಿಂದಿಯಲ್ಲೇ ಮಾತನಾಡುತ್ತಾರೆ. ಆತ ಯಾವತ್ತೂ ಐಫೋನ್ ಬಳಸಿದ್ದಿಲ್ಲ. ಅವರ ಕೆಲಸದ ಸ್ಥಳದಲ್ಲಿ ಕಂಪ್ಯೂಟರ್ ಇಲ್ಲ. ಅವರು ಆನ್‌ಲೈನ್‌ಗಿಂತ ಹೆಚ್ಚಾಗಿ ತನ್ನ ಮೇಜಿನಲ್ಲಿ ಗುಡ್ಡೆ ಹಾಕಿರುವ ಕಾಗದದಲ್ಲಿ ಮುದ್ರಿತವಾದ ದಾಖಲೆಗಳನ್ನೇ ಓದುತ್ತಿರುತ್ತಾರೆ.

ರವಿವಾರ ಹಾಗೂ ಇತರ ರಜಾದಿನಗಳು ಸೇರಿದಂತೆ ತಾನು ದಿನಕ್ಕೆ 14 ತಾಸುಗಳವರೆಗೆ ಕಾರ್ಯನಿರ್ವಹಿಸುವುದಾಗಿ ಹೇಳಿಕೊಳ್ಳುವ ಬಾಲಕೃಷ್ಣ, ಈ ತನಕ ತಾನು ಯಾವತ್ತೂ ಒಂದು ರಜೆಯನ್ನು ಕೂಡಾ ಪಡೆದಿಲ್ಲವೆನ್ನುತ್ತಾರೆ.

Writer - ತಾರೀಕ್ ಅನ್ವರ್

contributor

Editor - ತಾರೀಕ್ ಅನ್ವರ್

contributor

Similar News