×
Ad

ವರ್ಣಾಶ್ರಮ ವ್ಯವಸ್ಥೆಗೆ ಸವಾಲಾದ ನಾರಾಯಣ ಗುರುಗಳು

Update: 2016-09-18 23:46 IST

ನಾರಾಯಣ ಗುರುಗಳು ಚಳವಳಿಯುದ್ದಕ್ಕೂ ಹಲವಾರು ಬಾರಿ ತಮ್ಮ ಅನುಯಾಯಿಗಳಿಂದಲೇ ಮತಾಂತರದ ಬೆದರಿಕೆಯನ್ನು ಎದುರಿಸಿದ್ದರು. ವೈಕಂ ಸತ್ಯಾಗ್ರಹದ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಮತಾಂತರದ ವಿಚಾರ ಎಸ್‌ಎನ್‌ಡಿಪಿಯಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಗುರುಗಳ ಪ್ರಮುಖ ಶಿಷ್ಯರಲ್ಲಿ ಸಿ.ವಿ ಕುಂಜುರಾಮನ್ ಕ್ರಿಶ್ಚಿಯನ್ ಮತಾಂತರವನ್ನು ಪ್ರತಿಪಾದಿಸುತ್ತಿದ್ದರೆ, ಸಹೋದರ ಅಯ್ಯಪ್ಪನ್ ಮತ್ತು ಸಿ.ಕೃಷ್ಣನ್ ಬೌದ್ಧ ಧರ್ಮದ ಪರ ಒಲವು ತೋರಿಸಿದ್ದರು. ಕುಮಾರ್ ಆಶಾನ್ ಕೂಡ ಬೌದ್ಧ ಧರ್ಮದ ಕಡೆ ಆಕರ್ಷಿತರಾಗಿದ್ದರೂ ಬಹಿರಂಗವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಟಿ.ಕೆ ಮಾಧವನ್ ಮತಾಂತರವನ್ನೇ ವಿರೋಧಿಸುತ್ತಿದ್ದರು.

ಎಸ್‌ಎನ್‌ಡಿಪಿ ಅಸ್ತಿತ್ವವನ್ನೇ ಅಲುಗಾಡಿಸಿದ ಈ ವಿವಾದ ನಾರಾಯಣ ಗುರುಗಳಿಗೆ ಒಂದು ಸವಾಲಾಗಿತ್ತು. ತಕ್ಷಣ ಸ್ವಾಮಿಗಳು ಅಲ್ವಾಯಿಯಲ್ಲಿ 1924 ಫೆಬ್ರವರಿಯಲ್ಲಿ ಎರಡು ದಿನಗಳ ಸರ್ವಧರ್ಮ ಸಮ್ಮೇಳನ ನಡೆಸಿದರು. ಈ ಸಮ್ಮೇಳನ ನಡೆಯುತ್ತಿರುವುದು ತರ್ಕ ನಡೆಸುವುದಕ್ಕಾಗಲಿ, ಗೆಲ್ಲುವುದಕ್ಕಾಗಲಿ ಅಲ್ಲ. ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು ಇದರ ಉದ್ದೇಶ ಎಂದು ನಾರಾಯಣ ಗುರುಗಳು ಘೋಷಿಸಿದ್ದರು. ಸ್ವಾಮಿಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶ ಸಾರಿದರು. ಮನುಷ್ಯ ಬದಲಾದರೆ, ಜಾತಿ ಬದಲಾಯಿಸಬೇಕಾದ ಅಗತ್ಯ ಇಲ್ಲವೆಂದು ಅವರು ಹಿಂದೂ ಧರ್ಮದ ನಾಯಕರನ್ನು ಉದ್ದೇಶಿಸಿ ಹೇಳಿದರು. ಮತಾಂತರದ ವಿವಾದ ಅಲ್ಲಿಗೆ ತಣ್ಣಗಾಯಿತು.

ಚಳವಳಿಯುದ್ದಕ್ಕೂ ನಾರಾಯಣ ಗುರುಗಳಲ್ಲಿ ಯಾವುದೇ ರೀತಿಯ ಗೊಂದಲ, ಹತಾಶೆ, ನಿರಾಶೆ ಮೂಡಿದ್ದು ಕಾಣುವುದಿಲ್ಲ. ಆದರೆ, ಜೀವನದ ಕೊನೆಯ ಎರಡು ವರ್ಷಗಳಲ್ಲಿ ನಾರಾಯಣ ಗುರುಗಳು ಖಿನ್ನರಾಗಿದ್ದರು. ತಮ್ಮ ಅನುಯಾಯಿಗಳಲ್ಲಿ ಹುಟ್ಟಿಕೊಂಡ ರಾಜಕೀಯ ಆಕಾಂಕ್ಷೆ ಮತ್ತು ಆಸ್ತಿ ಮೇಲೆ ನಿಯಂತ್ರಣಕ್ಕೆ ಅವರು ನಡೆಸುತ್ತಿದ್ದ ಶೀತಲ ಸಮರ ಅವರ ಗಮನಕ್ಕೆ ಬಂದಿತ್ತು. ಇದೇ ಬೇಸರದಿಂದ ಅವರು ಶ್ರೀಲಂಕಾಕ್ಕೆ ಹೋಗಿ ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಬಯಸಿದ್ದರು. ಆದರೆ, ಅನುಯಾಯಿಗಳ ಒತ್ತಡಕ್ಕೆ ಮಣಿದು ಹಿಂದಿರುಗಿದರೂ ಅವರು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲಿಲ್ಲ.

ನಾರಾಯಣ ಗುರುಗಳ ಚಳವಳಿಗೂ ಹನ್ನೆರಡನೆ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಬಸವ ಚಳವಳಿಗೂ ಸಿದ್ಧಾಂತ ಮತ್ತು ಕಾರ್ಯತಂತ್ರಗಳಲ್ಲಿ ಕಂಡುಬರುವ ಹಲವಾರು ಸಾಮ್ಯಗಳು ಇನ್ನೊಂದು ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗಬಹುದು. ಇಬ್ಬರೂ ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಧರ್ಮವನ್ನು ಜನಪರಗೊಳಿಸಿ, ಪೂಜಾವಿಧಾನವನ್ನು ಸರಳಗೊಳಿಸುವ ಪ್ರಯತ್ನ ಮಾಡಿದವರು. ಎರಡೂ ಚಳವಳಿಯಲ್ಲಿ ಕಾಣುವ ಪ್ರಜಾಸತ್ತಾತ್ಮಕ ಮೌಲ್ಯಗಳು ಅನನ್ಯವಾದುದು. ಮೂಲತಃ ನಾರಾಯಣ ಗುರುಗಳು ಸತ್ಯಾಗ್ರಹದ ಬಗ್ಗೆ ವಿರೋಧ ಹೊಂದಿದ್ದರು. ಅದೊಂದು ಭಾವನಾತ್ಮಕ ಶೋಷಣೆಯೆಂದು ಹೇಳುತ್ತಿದ್ದರು. ಆದರೆ, ತಮ್ಮ ಶಿಷ್ಯ ಟಿ.ಕೆ ಮಾಧವನ್ ವೈಕಂ ಸತ್ಯಾಗ್ರಹ ಪ್ರಾರಂಭಿಸಿದಾಗ ದೇವಸ್ಥಾನ ಪ್ರವೇಶ ಚಳವಳಿ ಮತ್ತು ಸತ್ಯಾಗ್ರಹ ಎರಡರ ಬಗ್ಗೆ ವಿರೋಧವಿದ್ದರೂ ಅದನ್ನು ಬೆಂಬಲಿಸಿದರು.

ನಾರಾಯಣ ಗುರುಗಳ ಪ್ರೀತಿಯ ಅನುಯಾಯಿಯಾದ ಸಹೋದರ ಅಯ್ಯಪ್ಪನ್ ಪುಲಯರೊಂದಿಗೆ ಸಹಭೋಜನ ಮಾಡಿ ಜಾತಿಯಿಂದ ತಿರಸ್ಕೃತರಾದಾಗ ಅವರು ಅಯ್ಯಪ್ಪನ್‌ರನ್ನು ಬೆಂಬಲಿಸುತ್ತಾರೆ. ದೇವಾಲಯಗಳ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದ ಅಯ್ಯಪ್ಪನ್ ಕರಮಕೊಂಡಂನಲ್ಲಿ ದೇವಾಲಯ ಸ್ಥಾಪನೆ ಮಾಡಲು ಬಂದ ಗುರುಗಳ ವಿರುದ್ಧವೇ ಪ್ರತಿಭಟನೆ ಮಾಡುತ್ತಾರೆ. ಅದಕ್ಕೆ ಮಣಿದ ಗುರುಗಳು ಮುಂದೆ ದೇವಾಲಯಗಳ ಸ್ಥಾಪನೆಯನ್ನೇ ನಿಲ್ಲಿಸುತ್ತಾರೆ.

ಮತಾಂತರ ವಿಷಯದಲ್ಲಿ ಗುರು ಮತ್ತು ಅನುಯಾಯಿಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೊನೆಗೆ ಎಲ್ಲರೂ ಗುರುಗಳ ಅಭಿಪ್ರಾಯಕ್ಕೆ ಬದ್ಧರಾಗುತ್ತಾರೆ. ಇಂತಹದ್ದೇ ಬೆಳವಣಿಗೆಗಳನ್ನು ಬಸವ ಚಳವಳಿಯೊಳಗೂ ಕಾಣಬಹುದು. ಎರಡೂ ಚಳವಳಿಗಳ ಅನುಯಾಯಿಗಳಲ್ಲಿಯೂ ಸಾಕಷ್ಟು ಹೋಲಿಕೆ ಇದೆ. ಬಸವಣ್ಣನ ಅನುಯಾಯಿಗಳಾದ ಅಲ್ಲಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ ಹಾಗೂ ನಾರಾಯಣ ಗುರು ಅನುಯಾಯಿಗಳಾದ ಪಲ್ಪು, ಆಶಾನ್, ಅಯ್ಯಪ್ಪನ್ ಮೊದಲಾದವರಲ್ಲಿ ಸಾಮ್ಯಗಳಿವೆ. ಎರಡು ಚಳವಳಿಯ ನಾಯಕರ ಅಂತ್ಯಕ್ಕೂ ಅಷ್ಟೇ ಹೋಲಿಕೆಗಳಿವೆ. ಇಬ್ಬರೂ ಕೊನೆಗಾಲದಲ್ಲಿ ಅನುಯಾಯಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಲಾಗದೆ ಸಂಕಟ ಅನುಭವಿಸುತ್ತಾರೆ. ಸಾವಿನ ನಂತರ ಇಬ್ಬರೂ ಭಕ್ತರ ಕೈಯಲ್ಲಿ ಬಂದಿಯಾಗಿ ಕಲ್ಲಿನ ಮೂರ್ತಿಗಳಾಗುತ್ತಾರೆ.

ಕೇರಳದಿಂದಾಚೆಗೆ ತಮಿಳುನಾಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ, ಬೇರೆಡೆ ನಾರಾಯಣ ಗುರು ಚಳವಳಿ ಹೆಚ್ಚು ಪರಿಚಿತವಲ್ಲ. ನಾರಾಯಣ ಗುರುಗಳ ಶಿಷ್ಯರೇ ಆದ ಡಾ.ಪಲ್ಪು ಅವರ ಮಗ ನಟರಾಜ ಗುರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುಗಳ ಚಿಂತನೆಯ ಪ್ರಸಾರ ಮಾಡಿದರು. ಅವರು ಶಿವಗಿರಿಯ ಸಮೀಪ ಸ್ಥಾಪಿಸಿರುವ ಈಸ್ಟ್ ವೆಸ್ಟ್ ವಿಶ್ವವಿದ್ಯಾನಿಲಯವಿದೆ. ಆದರೆ, ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೂರಾರು ಗುರುಮಂದಿರಗಳಲ್ಲಿ ಅವರಿಗಾಗಿಯೇ ಕಟ್ಟಿದ ದೇವಾಲಯಗಳಲ್ಲಿ ನಾರಾಯಣ ಗುರುಗಳ ಆರಾಧನೆ-ಭಜನೆಗಳು ಕೂಡ ನಾರಾಯಣನೆಂಬ ಈ ನರನ ಸಾಧನೆಯ ಬಗ್ಗೆ ತಪ್ಪುಕಲ್ಪನೆಗಳನ್ನೇ ಬಿತ್ತುತ್ತಿವೆ.

ಸಾವಿರಾರು ವರ್ಷಗಳಿಂದ ಬೇರುಬಿಟ್ಟ ವೈದಿಕ ಶಾಹಿ, ಫ್ಯಾಶಿಸ್ಟ್ ಶಕ್ತಿ ತನ್ನನ್ನು ಪ್ರಶ್ನಿಸಿದವರನ್ನು ಮೊದಲು ನಾಶ ಮಾಡಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ, ತನ್ನೊಳಗೆ ಜೀರ್ಣಿಸಿಕೊಂಡು ಬಿಡುತ್ತದೆ. ಬುದ್ಧ ವಿಷ್ಣುವಿನ ಅವತಾರವಾದ ಬಸವಣ್ಣ ನಂದಿಯ ಅವತಾರವಾದ ದುರಂತವೇ ನಾರಾಯಣ ಗುರುಗಳಿಗಾಗಿದೆ. ಸನ್ಯಾಸಿಯಾದ ದಿನದಿಂದ ಸಾವಿನವರೆಗೂ ಕೇರಳದ ಅತ್ಯಂತ ಕೀಳು ಜಾತಿಯವರೆನಿಸಿದ ಪುಲಯ ಜನಾಂಗದ ಅಡಿಗೆಯವನಿಂದಲೆ ಕೈತುತ್ತು ತಿಂದು ಬದುಕಿದ ಈ ಅಪ್ರತಿಮ ಮಾನವತಾವಾದಿ ಇಂದು ಈಳವ - ಬಿಲ್ಲವ ಜಾತಿ ಜನರ ನಾಯಕನಾಗಿಬಿಟ್ಟಿದ್ದಾರೆ.

ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದ ಗುರುಗಳ ಚಿಂತನೆಯನ್ನು ವಿದ್ಯೆ ಎಂದರೆ, ಅಕಾಡಮಿಕ್ ಶಿಕ್ಷಣ ಎಂದು ತಿಳಿದಷ್ಟೇ ಕಾರಣ. ಅವರ ಅನುಯಾಯಿಗಳೆನಿಸಿಕೊಂಡವರು ಇಂದಿಗೂ ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಲ್ಲ. ಹಾಗಿಲ್ಲದಿದ್ದರೆ, ವರ್ಣಾಶ್ರಮ ವ್ಯವಸ್ಥೆಗೆ ಸವಾಲಾಗಿ ನಾರಾಯಣ ಗುರುಗಳು ಮಂಗಳೂರಿನಲ್ಲಿ ಸ್ಥಾಪಿಸಿದ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಅವರ ಅನುಯಾಯಿಗಳು, ಅದನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಇಂದಿಗೂ ಪ್ರತಿಪಾದಿಸುವ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸುತ್ತಿರಲಿಲ್ಲ.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿದ ನಾರಾಯಣ ಗುರುಗಳು ಇಲ್ಲಿ ಒಂದು ಜಾತಿಯ ಮಂದಿರಗಳಲ್ಲಿ ಬಂದಿಯಾಗಿದ್ದಾರೆ. ಆ ಜಾತಿ ಜನರಾದರೂ ಗುರುಗಳ ತತ್ವವನ್ನು ಪಾಲಿಸುತ್ತಿದ್ದಾರೆಯೇ? ನಾರಾಯಣ ಗುರುಗಳನ್ನು ಇಂದಿನ ಬಂಧನದಿಂದ ಬಿಡಿಸುವವರು ಯಾರು?

ಭಕ್ತಸಮೂಹ, ಭಜನಾ ಮಂಡಳಿಗಳಾಚೆ ನಡೆಯುವ ಈ ರೀತಿಯ ವೈಚಾರಿಕ ಚರ್ಚೆ ಸಂವಾದಗಳು ಮಾತ್ರ ನಾರಾಯಣ ಗುರುಗಳನ್ನು ಈಗಿನ ಬಂಧನದಿಂದ ಬಿಡುಗಡೆಗೊಳಿಸಬಹುದೆಂದು ನಾನು ನಂಬಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News