ಎಂಆರ್‌ಪಿಎಲ್‌ನಿಂದ 10 ಕೋಟಿ ತೆರಿಗೆ ವಂಚನೆ?

Update: 2016-09-18 18:25 GMT

ಕೇಂದ್ರ ಅಬಕಾರಿ ಗುಪ್ತಚರ ನಿರ್ದೇಶನಾಲಯದಿಂದ ತನಿಖೆ

   ಎಂಆರ್‌ಪಿಲ್ ತಾನು ಉತ್ಪಾದಿಸುವ ಕ್ಸಿಲೆನ್ ರಾಸಾಯನಿಕವನ್ನು ಸಾವಯವ ದ್ರಾವಣವೆಂದು ಹೇಳಿಕೊಂಡು ಅದಕ್ಕೆ 12.5 ಶೇಕಡ ಅಬಕಾರಿ ಸುಂಕವನ್ನು ಪಾವತಿಸುತ್ತಿತ್ತು. ಆದರೆ ಇದು ಖನಿಜ ರೂಪದ ತೈಲವಾಗಿರುವುದರಿಂದ 14 ಶೇಕಡ ತೆರಿಗೆಯನ್ನು ಪಾವತಿಸಬೇಕಿತ್ತು. ಇದರಿಂದಾಗಿ ಎಂಆರ್‌ಪಿಎಲ್ ಕನಿಷ್ಠ 10 ಕೋಟಿ ರೂ. ಅಬಕಾರಿ ತೆರಿಗೆಯನ್ನು ತಪ್ಪಿಸಿಕೊಂಡಿದೆಯೆಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಹೊಸದಿಲ್ಲಿ,ಸೆ.18: ಕನಿಷ್ಠ 10 ಕೋಟಿ ರೂ. ಅಬಕಾರಿ ಸುಂಕವನ್ನು ವಂಚಿಸಿರುವುದಕ್ಕಾಗಿ ಮಂಗಳೂರು ಮೂಲದ ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲ ಸಂಸ್ಕರಣ ಕಂಪೆನಿ ಎಂಆರ್‌ಪಿಎಲ್‌ನ ಮೇಲೆ ಕೇಂದ್ರ ಕಂದಾಯ ಇಲಾಖೆಯ ಕಣ್ಣು ಬಿದ್ದಿದೆ.

    ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಅಬಕಾರಿ ಗುಪ್ತಚರ ನಿರ್ದೇಶನಾಲಯವು ತನಿಖೆಯನ್ನು ಆರಂಭಿಸಿದೆ ಹಾಗೂ ಈ ಬಗ್ಗೆ ಎಂಆರ್‌ಪಿಎಲ್‌ನಿಂದ ಸ್ಪಷ್ಟನೆಯನ್ನು ಕೋರಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಎಂಆರ್‌ಪಿಎಲ್ ಉತ್ಪಾದಿಸುವ ಬಣ್ಣ ರಹಿತ ಹೈಡ್ರೋಕಾರ್ಬನ್ ದ್ರಾವಣ ಕ್ಸಿಲೆನ್ ಅನ್ನು ತಪ್ಪಾಗಿ ವರ್ಗೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಅದು ತನಿಖೆ ನಡೆಸುತ್ತಿದೆ.

 ಕಂಪೆನಿಯು ಇದೊಂದು ಸಾವಯವ ದ್ರಾವಣವೆಂದು ಹೇಳಿಕೊಂಡು ಅದಕ್ಕೆ 12.5 ಶೇಕಡ ಅಬಕಾರಿ ಸುಂಕವನ್ನು ಪಾವತಿಸುತ್ತಿತ್ತು.

ಆದರೆ, ಇದು ಖನಿಜ ರೂಪದ ತೈಲವಾಗಿರುವುದರಿಂದ 14 ಶೇಕಡಾ ತೆರಿಗೆಯನ್ನು ಪಾವತಿಸಬೇಕಿತ್ತು. ಇದರಿಂದಾಗಿ ಎಂಆರ್‌ಪಿಎಲ್ ಕನಿಷ್ಠ 10 ಕೋಟಿ ರೂ. ಅಬಕಾರಿ ತೆರಿಗೆಯನ್ನು ವಂಚಿಸಿದೆಯೆಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

 ಈ ಬಗ್ಗೆ ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿ ಯೊಬ್ಬರನ್ನು ಸಂಪರ್ಕಿಸಿದಾಗ, ಪ್ರಕರಣಕ್ಕೆ ಸಂಬಂಧಿಸಿ ಕಂಪೆನಿಯು ವೃತ್ತಿಪರ ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳಲಿದೆಯೆಂದು ಹೇಳಿದ್ದಾರೆ. ಮೋಟಾರ್ ಗ್ಯಾಸೊಲಿನ್ ಅನಿಲದ ಸಂಸ್ಕರಣೆಯ ವೇಳೆ ದೊರೆಯುವ ಈ ದ್ರಾವಣವನ್ನು ಪೇಂಟ್‌ಗಳು, ಕೀಟ ನಾಶಕಗಳು, ಮುದ್ರಣ, ಪ್ಯಾಕೇಜಿಂಗ್ ಹಾಗೂ ಕಟ್ಟಡ ನಿರ್ಮಾಣ ರಾಸಾಯನಿಕಗಳಾಗಿ ಬಳಸಲಾಗುತ್ತದೆ. ಎಂಆರ್‌ಪಿಎಲ್, ಭಾರತೀಯ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಅಂಗ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News