×
Ad

ಪಾಕ್ ಭಯೋತ್ಪಾದಕ ದೇಶ: ರಾಜನಾಥ್ ಕಿಡಿ

Update: 2016-09-18 23:58 IST

ಹೊಸದಿಲ್ಲಿ,ಸೆ.18: ಜಮ್ಮುಕಾಶ್ಮೀರದ ಉರಿಯ ಸೇನಾ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 17 ಭಾರತೀಯ ಯೋಧರು ಸಾವನ್ನಪ್ಪಿದ ಬೆನ್ನಲ್ಲೇ ಭಾರತವು ಪಾಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಾಕಿಸ್ತಾನವು ಭಯೋತ್ಪಾದಕ ರಾಷ್ಟ್ರವಾಗಿದ್ದು ಅದನ್ನು ಒಂಟಿಯಾಗಿಸಬೇಕು ಎಂದು ಅದು ವಿಶ್ವಸಮುದಾಯವನ್ನು ಆಗ್ರಹಿಸಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವಿವಾರ ದಿಲ್ಲಿಯಲ್ಲಿ ಈ ಬಗ್ಗೆ ಕಟುವಾದ ಹೇಳಿಕೆಯೊಂದನ್ನು ನೀಡಿದ್ದು, ಜಮ್ಮುಕಾಶ್ಮೀರದ ಉರಿಯಲ್ಲಿರುವ ಭೂಸೇನಾ ಬ್ರಿಗೇಡ್‌ನ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಉನ್ನತ ಮಟ್ಟದ ತರಬೇತಿ ಪಡೆದವರಾಗಿದ್ದಾರೆ ಹಾಗೂ ಅಪಾರ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿದ್ದರೆಂದು ಹೇಳಿದ್ದಾರೆ ಹಾಗೂ ಈ ದಾಳಿಯ ಹಿಂದಿರುವವರನ್ನು ಬೇಟೆಯಾಡುವುದಾಗಿ ಅವರು ಪ್ರತಿಜ್ಞೆಗೈದರು. ಭಯೋತ್ಪಾದಕರು ಹಾಗೂ ಭಯೋತ್ಪಾದಕ ಗುಂಪುಗಳಿಗೆ ಪಾಕ್ ತನ್ನ ಬೆಂಬಲವನ್ನು ಮುಂದುವರಿಸಿರುವ ಬಗ್ಗೆ ರಾಜನಾಥ್‌ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘‘ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಗುರುತಿಸಬೇಕು ಹಾಗೂ ಅದನ್ನು ಒಂಟಿಯಾಗಿಸಬೇಕು’’ ಎಂದು ಅವರು ವಿಶ್ವಸಮುದಾಯವನ್ನು ಆಗ್ರಹಿಸಿದರು.

   ಉರಿ ಭಯೋತ್ಪಾದಕ ದಾಳಿ ಘಟನೆಯ ಬಳಿಕ ಹೊಸದಿಲ್ಲಿಯಲ್ಲಿ ಸುಮಾರು ಒಂದು ತಾಸು ಕಾಲ ನಡೆದ ಸಭೆಯ ನೇತೃತ್ವವನ್ನು ಸಿಂಗ್ ವಹಿಸಿದ್ದರು. ಸಭೆಯಲ್ಲಿ ನಡೆದ ಮಾತುಕತೆಯ ವಿವರವನ್ನು ಪ್ರಧಾನಿಗೆ ನೀಡಿರುವೆನೆಂದು ಅವರು ಪತ್ರಕರ್ತರಿಗೆ ತಿಳಿಸಿದರು. ಈ ಭೀಕರ ಭಯೋತ್ಪಾಕ ದಾಳಿಯಲ್ಲಿ 17 ಮಂದಿ ಯೋಧರು ಸಾವನ್ನಪ್ಪಿದ ಘಟನೆಯ ಬಗ್ಗೆ ರಾಜ್‌ನಾಥ್ ತೀವ್ರ ವಿಷಾದ ವ್ಯಕ್ತಪಡಿಸಿದರು.

 ‘‘ಹುತಾತ್ಮ ಯೋಧರ ಕುಟುಂಬಗಳಿಗೆ ಹೃದಯಾಂತರಾಳದಿಂದ ಸಂತಾಪವನ್ನು ನಾನು ವ್ಯಕ್ತಪಡಿಸುತ್ತೇನೆ ಹಾಗೂ ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ’’ ಎಂದು ರಾಜ್‌ನಾಥ್ ಹೇಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಇಲಾಖೆ,ರಕ್ಷಣೆ ಹಾಗೂ ಸೇನೆ ಮತ್ತು ಅರೆಸೈನಿಕ ಪಡೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ದಾಳಿ ಘಟನೆಯ ಬೆನ್ನಲ್ಲೇ ರಾಜ್‌ನಾಥ್ ತನ್ನ ನಿಗದಿತ ರಶ್ಯ ಹಾಗೂ ಅವೆುರಿಕ ಭೇಟಿಯನ್ನು ರದ್ದುಪಡಿಸಿದರು.

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಗುರುತಿಸಬೇಕು ಹಾಗೂ ಅದನ್ನು ವಿಶ್ವ ಸಮುದಾಯದೆದುರು ಒಂಟಿಯಾಗಿಸಬೇಕಾಗಿದೆ.
- ರಾಜನಾಥ್ ಸಿಂಗ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News