ಹಿಂದುತ್ವ ಸಂಘಟನೆಯಿಂದಲೇ ಗೋಧ್ರಾ ರೈಲು ದಹನ ಸಂಚು : ನ್ಯಾ. ಕಾಟ್ಜು

Update: 2016-09-19 05:48 GMT

ಹೊಸದಿಲ್ಲಿ, ಸೆ.19: ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಜಸ್ಟಿಸ್ ಮಾರ್ಕಾಂಡೇಯ ಕಾಟ್ಜು ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಸಾಕಷ್ಟು ಹೆಸರಾದವರು. ಮಾಧ್ಯಮ ಹಾಗೂ ಸರಕಾರದ ವಿರುದ್ಧವೇ ಆಗಿರಲಿ ಅಥವಾ ಸಲ್ಮಾನ್ ರಶ್ದೀ ಯಾ ಸನ್ನಿ ಲಿಯೋನ್ ಬಗ್ಗೆಯೇ ಆಗಿರಲಿ ಅವರು ತಮ್ಮ ಅನಿಸಿಕೆಗಳನ್ನು ಬಹಿರಂಗ ಪಡಿಸುವುದಕ್ಕೆ ಯಾವತ್ತೂ ಹಿಂಜರಿದವರಲ್ಲ.

ಇದೀಗ ಕಾಟ್ಜು ಅವರು 2002 ರ ಗೋಧ್ರಾ ಘಟನೆಯ ಸಂಬಂಧ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಒಂದನ್ನು ಮಾಡಿ ಹಿಂದುತ್ವ ಸಂಘಟನೆಯಿಂದಲೇ ಗೋಧ್ರಾ ರೈಲು ದಹನ ಸಂಚು ನಡೆದಿತ್ತೆಂದು ಹೇಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ತಮ್ಮ ಫೇಸ್ಬುಕ್ ಪುಟದಲ್ಲಿ ಅವರು ಹೀಗೆಂದು ಬರೆದಿದ್ದಾರೆ. ‘‘ಗುಜರಾತ್ ರಾಜ್ಯದ ಗೋಧ್ರಾದಲ್ಲಿ 2002 ರಲ್ಲಿ ನಡೆದ ಮತೀಯ ಹಿಂಸಾಚಾರದಲ್ಲಿ 2,000 ಕ್ಕೂ ಅಧಿಕ ಮುಸಲ್ಮಾನರು ಸಾವಿಗೀಡಾಗಿದ್ದರು. ಅವರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮುಸ್ಲಿಂ ಸಂಸದ ಎಹ್ಸಾನ್ ಜಾಫ್ರಿ ಕೂಡ ಸೇರಿದ್ದರು. ಈ ಹಿಂಸಾಚಾರವು ಸಾಬರಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ಹಿಂದೂ ಸಮುದಾಯದ 54 ಜನರ ಸಾವಿಗೆ ಕಾರಣವಾಧ ಘಟನೆಗೆ ಪ್ರತೀಕಾರ ಎಂದು ಹೇಳಲಾಗುತ್ತಿದೆ.’’

ಮುಂದೆ ಕಾಟ್ಜು ಹೀಗೆ ಬರೆದಿದ್ದಾರೆ. ‘‘ ಆದರೆ ಈ ಕ್ರಿಯೆ, ಪ್ರತಿಕ್ರಿಯೆ ಸಿದ್ಧಾಂತವನ್ನು ನಾನು ನಂಬುವುದಿಲ್ಲ. ಜರ್ಮನಿಯ ಕ್ರಿಸ್ಟಾಲ್ ನಾಚ್ಟ್ ನಲ್ಲಿ ಯಹೂದ್ಯರ ವಿರುದ್ಧ ನವೆಂಬರ್ 10, 1938 ರಲ್ಲಿ ನಡೆದ ದೌರ್ಜನ್ಯಗಳಿಗೆ ವಿರುದ್ಧವಾಗಿ ಪ್ಯಾರಿಸಿನಲ್ಲಿ ಜರ್ಮನಿ ರಾಜತಾಂತ್ರಿಕರ ಹತ್ಯೆ ನಡೆದಿತ್ತು ಎಂದು ನಾಝಿಗಳು ಹೇಳಿಕೊಂಡಿದ್ದರು. ಇದು ಗೋಯೆರಿಂಗ್, ಹಿಮ್ಲರ್ ಹಾಗೂ ಹೇಡ್ರಿಚ್ ಅವರ ಷಡ್ಯಂತ್ರವಾಗಿತ್ತೆಂದು ಎಲ್ಲರಿಗೂ ತಿಳಿದಿತ್ತು. ನನ್ನ ನಂಬಿಕೆಯ ಪ್ರಕಾರ ಕೆಲ ಬಲಪಂಥೀಯ ಹಿಂದೂ ಸಂಘಟನೆಗಳೇ ಮುಸ್ಲಿಮರ ವಿರುದ್ಧ ಆರೋಪ ಹೊರಿಸುವ ಉದ್ದೇಶದಿಂದ ಗೋಧ್ರಾದಲ್ಲಿ ಹಿಂದೂಗಳ ಹತ್ಯೆಗೆ ಸಂಚು ನಡೆಸಿತ್ತು,’’ ಎಂಬ ವಿಚಾರವನ್ನು ವಿವರಿಸಿದ್ದಾರೆ. ಮುಂದೆ ಬರೆಯುತ್ತಾ ‘‘ಹಿಂದೂ ಮೂಲಭೂತವಾದ ಸಂಘಟನೆಯೇ ಗೋಧ್ರಾದಲ್ಲಿ 54 ಹಿಂದೂಗಳ ಹತ್ಯೆಗೆ ಕಾರಣವೇ ಹೊರತು ಮುಸ್ಲಿಮರಲ್ಲವೆನ್ನುವುದಕ್ಕೆ ಏನು ಆಧಾರವಿದೆ ಎಂದು ಹಲವರು ನನ್ನಲ್ಲಿ ಕೇಳಿದ್ದಾರೆ. ಹೌದು, ನಿಜವೆಂದರೆ ನನ್ನಲ್ಲಿ ಸಾಕಷ್ಟು ನೇರ ಸಾಕ್ಷ್ಯವಿಲ್ಲದಿದ್ದರೂ ಕೆಲ ಸಾಂದರ್ಭಿಕ ಸಾಕ್ಷ್ಯಗಳಿವೆ. ಇಲ್ಲಿರುವ ಪ್ರಶ್ನೆಯೆಂದರೆ 54 ಹಿಂದೂ ‘ರಾಮಭಕ್ತ’ರನ್ನು ಕೊಲ್ಲುವುದರಿಂದ ಯಾರಿಗೆ ಪ್ರಯೋಜನವಾಗುವುದು? ಮುಸ್ಲಿಮರ ವಿರುದ್ಧ ದಾಳಿ ನಡೆಸಲು ಇದನ್ನೇ ನೆಪವಾಗಿಸಿದ ಕೆಲವರೇ ಇದಕ್ಕೆ ಕಾರಣ. ಗುಜರಾತ್ ರಾಜ್ಯದಲ್ಲಿ ಒಮ್ಮಿಂದೊಮ್ಮೆಗೇ ಮತೀಯ ವಿಭಜನೆ ನಡೆದಿತ್ತು. ಶೇ. 91 ಹಿಂದೂಗಳು ಒಂದು ಕಡೆ ಹಾಗೂ ಶೇ. 9 ಮುಸ್ಲಿಮರು ಇನ್ನೊಂದು ಕಡೆ ಇದ್ದರು."

‘‘ಇಲ್ಲಿ ನನಗೆ ಗ್ಲೀವಿಟ್ಝ್ ಘಟನೆ ಜ್ಞಾಪಕಕ್ಕೆ ಬರುತ್ತದೆ’’ಎಂದು ಬರೆದು ಈ ಕೆಳಗಿನ ಲಿಂಕ್ ಕೂಡ ಪೋಸ್ಟ್ ಮಾಡಿದ್ದಾರೆ.

https://en.wikipedia.org/wiki/Gleiwitz_incident

‘‘ಹಿಟ್ಲರ್ ನಿಗೆ ಪೋಲಂಡ್ ಆಕ್ರಮಣ ಮಾಡಬೇಕಿತ್ತು. ಆದರೆ ಅದಕ್ಕೆ ಆತನಿಗೆ ನೆಪವೊಂದು ಬೇಕಿತ್ತು. ಅದಕ್ಕಾಗಿ ಆತ ಕೆಲ ಜರ್ಮನ್ನರನ್ನು ಪೋಲಿಶ್ ಸೈನಿಕರ ಸಮವಸ್ತ್ರ ಧರಿಸುವಂತೆ ಮಾಡಿ ಜರ್ಮನಿಯ ರೇಡಿಯೋ ಸ್ಟೇಶನ್ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ. ನಂತರ ಈ ದಾಳಿಗೆ ಪೋಲಂಡ್ ಕಾರಣವೆಂದು ಆತ ಘೋಷಿಸಿದ. ಜರ್ಮನಿಯ ಸೇನೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿ ಪರೋಕ್ಷವಾಗಿ ಪೋಲಂಡ್ ಮೇಲೆ ಆಕ್ರಮಣದ ಸೂಚನೆಯಿತ್ತಿದ್ದ,’’ ಎಂದು ಕಾಟ್ಜು ಬರೆದಿದ್ದಾರೆ.

ಎರಡನೆ ಜಾಗತಿಕ ಯುದ್ಧದ ಅಂತ್ಯದ ನಂತರ ನಡೆದ ನ್ಯೂರೆಂಬರ್ಗ್ ವಿಚಾರಣೆ ವೇಳೆ ಗ್ಲೀವಿಟ್ಝ್ ಹಾಗೂ ಕ್ರಿಸ್ಟಾಲ್ ನಾಚ್ಟ್ ಘಟನೆಯ ಹಿಂದಿನ ಸತ್ಯ ಬಹಿರಂಗಗೊಂಡಿತ್ತು’’ ಎಂದೂ ಕಾಟ್ಜು ಬರೆದು ಕೆಳಗಿನ ಲಿಂಕ್ ನೀಡಿದ್ದಾರೆ.

https://en.wikipedia.org/wiki/Kristallnacht

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News