ಯೋಧರಿಗೆ ಅಗ್ನಿ ಪ್ರತಿರೋಧಕ ಟೆಂಟ್ ಯಾಕೆ ನೀಡಲಾಗಿಲ್ಲ ?

Update: 2016-09-19 06:38 GMT

ಜಮ್ಮು,ಸೆ.19: ಉರಿ ಸೇನಾ ನೆಲೆಯ ಮೇಲೆ ರವಿವಾರ ನಡೆದ ಉಗ್ರ ದಾಳಿಯಲ್ಲಿ ಹತರಾದ 17 ಸೈನಿಕರಲ್ಲಿ 14 ಸೈನಿಕರು ತಮ್ಮ ಟೆಂಟುಗಳಲ್ಲಿ ಮಲಗಿದ್ದಲ್ಲೇ ಸುಟ್ಟು ಕರಕಲಾದ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ. ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿರುವ ಈ ಸೇನಾ ನೆಲೆಯಲ್ಲಿ ಸೈನಿಕರನ್ನು ಟೆಂಟುಗಳಲ್ಲೇಕೆ ರಾತ್ರಿ ಸಮಯದಲ್ಲಿ ಉಳಿಸಲಾಗುತ್ತಿದೆ ಎಂಬ ಪ್ರಶ್ನೆ ಎದುರಾಗಿದೆ. ಅಂತೆಯೇ ಟೆಂಟುಗಳಲ್ಲಿಯೇ ಅವರು ರಾತ್ರಿ ಕಳೆಯುವಂತೆ ಮಾಡಲಾಗುತ್ತಿದ್ದರೂ ಯೋಧರಿಗೇಕೆ ಅಗ್ನಿ ಪ್ರತಿರೋಧಕ  ಟೆಂಟುಗಳನ್ನು ನೀಡಲಾಗಿಲ್ಲವೆಂಬ ಪ್ರಶ್ನೆಯೂ ಎದ್ದಿದೆ.

ಈ ಉಗ್ರ ದಾಳಿಗೆ ಎಚ್ಚೆತ್ತು 6 ಬಿಹಾರ ಹಾಗೂ 10 ಡೋಗ್ರಾ ರೆಜಿಮೆಂಟುಗಳ ಯೋಧರು ಪ್ರತಿದಾಳಿ ನಡೆಸುವಷ್ಟರಲ್ಲಿ ನಮ್ಮ ಯೋಧರಿಗೆ ದೊಡ್ಡ ಹೊಡೆತ ಬಿದ್ದಾಗಿತ್ತು. ಅವರಿಗೆ ಅಗ್ನಿ ಪ್ರತಿರೋಧಕ ಟೆಂಟುಗಳನ್ನು ಒದಗಿಸಿದ್ದೇ ಆದಲ್ಲಿ ಇಂತಹ ದಾಳಿ ಸಂದರ್ಭದಲ್ಲಿ ಹೆಚ್ಚಿನ ಜೀವ ಹಾನಿ ತಪ್ಪಿಸಬಹುದಿತ್ತೆಂಬ ಭಾವನೆಯಿದೆ.

ಇಂತಹ ಹಲವು ದಾಳಿಗಳಿಗೆ ನಮ್ಮ ಸೇನಾ ಪಡೆಗಳು ಈ ಹಿಂದೆ ಕೂಡ ತುತ್ತಾಗಿವೆ ಹಾಗೂ ಈ ವರ್ಷ ಜೂನ್ 20 ರವರೆಗೆ ಇಂತಹ ಕನಿಷ್ಠ 90 ಪ್ರಯತ್ನಗಳು ನಡೆದಿವೆ. ಹೀಗಿದ್ದೂ ನಮ್ಮ ರಕ್ಷಣಾ ಇಲಾಖೆ ದೇಶ ಕಾಯುವ ಯೋಧರಿಗೆ ರಾತ್ರಿ ಕಳೆಯಲು ನೀಡಿರುವ ಟೆಂಟುಗಳನ್ನು ನೀರು ನಿರೋಧಕವನ್ನಾಗಿಸುವ ಯತ್ನದಲ್ಲಿ ಅವುಗಳಿಗೆ ಸುಲಭವಾಗಿ ಬೆಂಕಿ ಹತ್ತಬಲ್ಲ ಕೆಲ ರಾಸಾಯನಿಕಗಳಿಂದ ಲೇಪನ ಮಾಡಿರುವುದು ನಿಜಕ್ಕೂ ಆತಂಕಕಾರಿ.

ಈ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಚರ್ಚೆಗೆ ಆಸ್ಪದ ನೀಡಿದ್ದಾರಲ್ಲದೆ ಇಂತಹ ಟೆಂಟುಗಳಲ್ಲಿ ವಾಸಿಸುವುದರಿಂದ ಉಗ್ರರ ಗುಂಡಿನ ದಾಳಿ ನಡೆದಾಗ ಸೈನಿಕರಿಗೆ ಕ್ಷಿಪ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸುವುದು ಕಷ್ಟಕರವೆಂದು ಹೇಳಿದ್ದಾರಲ್ಲದೆ ‘‘ಅಗ್ನಿ ಪ್ರತಿರೋಧಕ ಟೆಂಟುಗಳನ್ನು ನಮ್ಮ ಯೋಧರಿಗೆ ನೀಡುವುದು ನಮ್ಮ ಜವಾಬ್ದಾರಿಯಲ್ಲವೇ ?’’ ಎಂದು ಪ್ರಶ್ನಿಸಿದ್ದಾರೆ. ‘‘ಸೇನೆ ತನ್ನ ಸಭಾಂಗಣಗಳನ್ನು ಹಾಗೂ ಕ್ವಾಟರ್ಸ್ ಗಳನ್ನು ಆಧುನೀಕರಣಗೊಳಿಸಿದೆಯಾದರೂ ಸೈನಿಕರ ಹಿತಾಸಕ್ತಿಯನ್ನು ಲಘುವಾಗಿ ಪರಿಗಣಿಸಿದೆ’’ ಎಂದೂ ಅವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News