‘ಬುರ್ಕಿನಿ’ಧಾರಿ ಆಸಿಸ್ ಮಹಿಳೆಯನ್ನು ಫ್ರಾನ್ಸ್ ಬೀಚ್‌ನಿಂದ ಓಡಿಸಿದರು

Update: 2016-09-19 14:23 GMT

ಸಿಡ್ನಿ (ಆಸ್ಟ್ರೇಲಿಯ), ಸೆ. 19: ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಈಜುಡುಗೆ ‘ಬುರ್ಕಿನಿ’ಯ ಮೇಲಿನ ನಿಷೇಧವನ್ನು ಇತ್ತೀಚೆಗೆ ತೆರವುಗೊಳಿಸಿರುವ ಹೊರತಾಗಿಯೂ, ಬುರ್ಕಿನಿ ತೊಟ್ಟ ತನ್ನನ್ನು ಫ್ರಾನ್ಸ್‌ನ ಬೀಚ್‌ನಿಂದ ಹಿಂದಕ್ಕೆ ಕಳುಹಿಸಲಾಯಿತು ಎಂದು ಆಸ್ಟ್ರೇಲಿಯದ ಮುಸ್ಲಿಮ್ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಫ್ರಾನ್ಸ್‌ನ ಬೀಚ್‌ನಲ್ಲಿ ಬುರ್ಕಿನಿ ಧರಿಸುವ ಮೂಲಕ ಆ ದೇಶದ ಮುಸ್ಲಿಮರಿಗೆ ಬೆಂಬಲ ವ್ಯಕ್ತಪಡಿಸಲು ತಾನು ಯುರೋಪ್‌ಗೆ ಹೋಗಿದ್ದೆ ಎಂದು ಸಿಡ್ನಿ ಸಂಜಾತೆ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಝೈನಾಬ್ ಅಲ್ಶೆಲ್ ಆಸ್ಟ್ರೇಲಿಯದ ‘ಚಾನೆಲ್ 7’ಗೆ ಹೇಳಿದರು.

ವಿಲೆನಾವ್ ಲೌಬೆಯ ಬೀಚ್‌ನಲ್ಲಿ ತನ್ನ ತಾಯಿಯೊಂದಿಗೆ ಬುರ್ಕಿನಿ ಧರಿಸಿ ಕುಳಿತಿದ್ದ ಝೈನಾಬ್‌ರತ್ತ ಸ್ಥಳೀಯರು ಅವಹೇಳನಕರ ರೀತಿಯಲ್ಲಿ ಸಂಜ್ಞೆ ಮಾಡುತ್ತಿರುವ ದೃಶ್ಯಗಳನ್ನು ಚಾನೆಲ್ ರವಿವಾರ ತೋರಿಸಿದೆ.

‘‘ಬೀಚ್‌ನಿಂದ ಹೋಗುವಂತೆ ಸ್ಥಳೀಯರು ನಮ್ಮನ್ನು ಬೆದರಿಸಿದರು. ನಾವು ಹೊರಟು ಹೋಗಿರದಿದ್ದರೆ ಅವರು ಪೊಲೀಸರನ್ನು ಕರೆಸುವವರಿದ್ದರು’’ ಎಂದು ಅವರು ನುಡಿದರು.

‘‘ಬೀಚ್‌ಗಳಲ್ಲಿ ಬುರ್ಕಿನಿಗೆ ನಿಷೇಧ ಹೇರುವ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿದ್ದರೂ, ಸ್ಥಳೀಯರು ಆ ಬಗ್ಗೆ ಅತೃಪ್ತಿ ಹೊಂದಿದ್ದಾರೆ’’ ಎಂದರು.

ಜುಲೈನಲ್ಲಿ ನೀಸ್ ನಗರದಲ್ಲಿ ನಡೆದ ಬ್ಯಾಸ್ಟಿಲ್‌ನಲ್ಲಿ ಡೇ ಕಾರ್ಯಕ್ರಮದ ವೇಳೆ ದುಷ್ಕರ್ಮಿಯೊಬ್ಬ ಜನರ ಮೇಲೆ ಟ್ರಕ್ ಚಲಾಯಿಸಿ 86 ಮಂದಿಯನ್ನು ಕೊಂದಿದ್ದನು. ಆ ಘಟನೆಯ ಬಳಿಕ ನೀಸ್ ಮತ್ತು ಫ್ರಾನ್ಸ್‌ನ ಸುಮಾರು 30 ನಗರಗಳು ಮತ್ತು ಪಟ್ಟಣಗಳು ತಮ್ಮ ಬೀಚ್‌ಗಳಲ್ಲಿ ಬುರ್ಕಿನಿಯನ್ನು ನಿಷೇಧಿಸಿವೆ.

ಆದಾಗ್ಯೂ, ಆಗಸ್ಟ್‌ನಲ್ಲಿ ಫ್ರಾನ್ಸ್‌ನ ಅತ್ಯುನ್ನತ ನ್ಯಾಯಾಲಯವು ಬುರ್ಕಿನಿ ನಿಷೇಧವನ್ನು ತೆರವುಗೊಳಿಸಿದೆ ಹಾಗೂ ನಿಷೇಧವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News