×
Ad

ಹುಬ್ಬಳ್ಳಿಗೆ ತಿವಿದ ಬಿಜಾಪುರ ಬುಲ್ಸ್, ಮಂಗಳೂರು ಆರ್ಭಟಕ್ಕೆ ರಾಕ್‌ಸ್ಟಾರ್ ತತ್ತರ

Update: 2016-09-19 23:21 IST

ಹುಬ್ಬಳ್ಳಿ, ಸೆ.19: ಆರಂಭಿಕ ಬ್ಯಾಟ್ಸ್‌ಮನ್ ಆರ್. ಸಮರ್ಥ್(ಔಟಾಗದೆ 87) ಹಾಗೂ ನಾಯಕ ರಾಬಿನ್ ಉತ್ತಪ್ಪ(51) ಬಾರಿಸಿದ ಆಕರ್ಷಕ ಅರ್ಧಶತಕದ ಕೊಡುಗೆಯ ನೆರವಿನಿಂದ ಬಿಜಾಪುರ ಬುಲ್ಸ್ ತಂಡ ಆತಿಥೇಯ ಹುಬ್ಬಳ್ಳಿ ಟೈಗರ್ಸ್‌ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿತು.

ಇಲ್ಲಿನ ಕೆಎಸ್‌ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ 6ನೆ ಪಂದ್ಯದಲ್ಲಿ ಗೆಲುವಿಗೆ 189 ರನ್ ಕಠಿಣ ಗುರಿ ಪಡೆದಿದ್ದ ಬಿಜಾಪುರ ತಂಡ 19.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿ ಜಯಭೇರಿ ಬಾರಿಸಿತು.

ಇನಿಂಗ್ಸ್ ಆರಂಭಿಸಿದ ಸಮರ್ಥ್(87 ರನ್, 54 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ನವೀನ್(20ರನ್, 16 ಎಸೆತ, 2 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 48 ರನ್ ಗಳಿಸಿ ಉತ್ತಮ ಆರಂಭ ನೀಡಿದರು.

ನವೀನ್ ಔಟಾದ ಬಳಿಕ ಜೊತೆಯಾದ ಸಮರ್ಥ್ ಹಾಗೂ ಹಿರಿಯ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ(51 ರನ್, 33 ಎಸೆತ, 6 ಬೌಂಡರಿ, 1 ಸಿಕ್ಸರ್)2ನೆ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

  ಬಿಜಾಪುರದ ಗೆಲುವಿಗೆ 32 ರನ್ ಅಗತ್ಯವಿದ್ದಾಗ ಉತ್ತಪ್ಪ ಹುಬ್ಬಳ್ಳಿಯ ಸ್ಟಾಲಿನ್ ಹೂವರ್‌ಗೆ ವಿಕೆಟ್ ಒಪ್ಪಿಸಿದರು. ಹೂವರ್(2-32) ಹುಬ್ಬಳ್ಳಿಯ ಪರ 2 ವಿಕೆಟ್ ಪಡೆದರು. ಔಟಾಗದೆ 87 ರನ್ ಗಳಿಸಿ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟಿರುವ ಸಮರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

  ಹುಬ್ಬಳ್ಳಿ ಟೈಗರ್ಸ್‌ 188/7: ಇದಕ್ಕೆ ಮೊದಲು ಬಿಜಾಪುರ ತಂಡದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಹುಬ್ಬಳ್ಳಿ ತಂಡಕ್ಕೆ ಆರಂಭಿಕ ಆಟಗಾರರಾದ ಮುಹಮ್ಮದ್ ತಾಹ(89 ರನ್, 56 ಎಸೆತ, 5 ಬೌಂಡರಿ, 7 ಸಿಕ್ಸರ್) ಹಾಗೂ ಅಭಿಷೇಕ್ ರೆಡ್ಡಿ(42ರನ್) ಮೊದಲ ವಿಕೆಟ್‌ಗೆ 118 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, 13ನೆ ಓವರ್‌ನಲ್ಲಿ ಈ ಇಬ್ಬರು ಆಟಗಾರರು ಬೇರ್ಪಟ್ಟ ಬಳಿಕ ಕುಸಿತದ ಹಾದಿ ಹಿಡಿದ ಹುಬ್ಬಳ್ಳಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು.

3ನೆ ಕ್ರಮಾಂಕದಲ್ಲಿ ಆಡಿದ ಶ್ರೀನಾಥ್ ಅರವಿಂದ್ ಖಾತೆ ತೆರೆಯಲು ವಿಫಲರಾದರು. ತಂಡದ ಮೊತ್ತವನ್ನು 160 ರನ್‌ಗೆ ತಲುಪಿಸಿದ ತಾಹ 17ನೆ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯ 3 ಓವರ್‌ನಲ್ಲಿ 28 ರನ್ ಗಳಿಸಲಷ್ಟೇ ಶಕ್ತವಾದ ಹುಬ್ಬಳ್ಳಿ ದೊಡ್ಡ ಮೊತ್ತ ಗಳಿಸುವ ಅವಕಾಶದಿಂದ ವಂಚಿತವಾಯಿತು.

ಸಂಕ್ಷಿಪ್ತ ಸ್ಕೋರ್

ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 188/7

(ಮುಹಮ್ಮದ್ ತಾಹ 89, ಅಭಿಷೇಕ್ ರೆಡ್ಡಿ 42, ಅಭಿಮನ್ಯು ಮಿಥುನ್ 2-48, ನವೀನ್ ಎಂಜಿ 2-23, ಸಿನಾನ್ ಅಬ್ದುಲ್ ಖಾದರ್ 2-28)

ಬಿಜಾಪುರ ಬುಲ್ಸ್: 19.4 ಓವರ್‌ಗಳಲ್ಲಿ 191/3

(ಆರ್. ಸಮರ್ಥ್ ಔಟಾಗದೆ 87, ರಾಬಿನ್ ಉತ್ತಪ್ಪ 51, ಸ್ಟಾಲಿನ್ ಹೂವರ್ 2-32)

ಮಂಗಳೂರು ಆರ್ಭಟಕ್ಕೆ ರಾಕ್‌ಸ್ಟಾರ್ ತತ್ತರ

 ಹುಬ್ಬಳ್ಳಿ, ಸೆ.19: ಆರಂಭಿಕ ಬ್ಯಾಟ್ಸ್‌ಮನ್ ನಿಶಾಂತ್ ಶೆಖಾವತ್ ಶತಕದ ಸಹಾಯದಿಂದ ಮಂಗಳೂರು ಯುನೈಟೆಡ್ ತಂಡ ರಾಕ್‌ಸ್ಟಾರ್ಸ್‌ ತಂಡವನ್ನು 53 ರನ್‌ಗಳ ಅಂತರದಿಂದ ಮಣಿಸಿತು.

ಸೋಮವಾರ ಇಲ್ಲಿನ ಕೆಎಸ್‌ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕೆಪಿಎಲ್‌ನ 7ನೆ ಪಂದ್ಯದಲ್ಲಿ ರಾಕ್‌ಸ್ಟಾರ್‌ನಿಂದ ಬ್ಯಾಟಿಂಗ್‌ಗೆ ಆಹ್ವಾನಿಲ್ಪಟ್ಟ ಮಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು.

 ಗೆಲ್ಲಲು ಕಠಿಣ ಸವಾಲು ಪಡೆದ ರಾಕ್‌ಸ್ಟಾರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮಂಗಳೂರು ಪರ ಭರತ್ ಎನ್‌ಪಿ(2-27), ರೋನಿತ್ ಮೋರೆ(2-19) ಹಾಗೂ ಮಿತ್ರಕಾಂತ್ ಯಾದವ್(2-14)ತಲಾ 2 ವಿಕೆಟ್ ಕಬಳಿಸಿದರು. ರಿತೇಶ್ ಭಟ್ಕಳ್(49) ಅಗ್ರ ಸ್ಕೋರರ್ ಎನಿಸಿಕೊಂಡರು.

ಮಂಗಳೂರಿನ ಪರ ಶೆಖಾವತ್ ಕೇವಲ 61 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳ ಸಹಿತ ಭರ್ಜರಿ ಶತಕ ಬಾರಿಸಿ ತಂಡವನ್ನು ಏಕಾಂಗಿಯಾಗಿ ಉತ್ತಮ ಮೊತ್ತದತ್ತ ಕೊಂಡೊಯ್ದರು. ಶಿಶಿರ್ ಭವಾನೆ(32) ಹಾಗೂ ಹರ್ಷಾ ಬಸವರಾಜ್(24) ಎರಡಂಕೆಯ ಸ್ಕೋರ್ ದಾಖಲಿಸಿದರು.

ರಾಕ್‌ಸ್ಟಾರ್‌ನ ಪರವಾಗಿ ಬಿ.ನವೀನ್(1-39), ಚರಣ್‌ತೇಜ(1-35) ಹಾಗೂ ರಿತೇಶ್ ಭಟ್ಕಳ್(1-35) ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಮಂಗಳೂರು ಯುನೈಟೆಡ್: 20 ಓವರ್‌ಗಳಲ್ಲಿ 195/3

(ನಿಶಾಂತ್ ಶೆಖಾವತ್ 106, ಶಿಶಿರ್ ಭವಾನೆ 32, ಚರಣ್ ತೇಜ 1-35, ರಿತೇಶ್ ಭಟ್ಕಳ್1-35).

ರಾಕ್‌ಸ್ಟಾರ್: 20 ಓವರ್‌ಗಳಲ್ಲಿ 142/7

(ರಿತೇಶ್ ಭಟ್ಕಳ್ 49, ಮದನ್ ಮೋಹನ್ 32, ಭರತ್ 2-27, ರೋನಿತ್ ಮೋರೆ 2-19, ಮಿತ್ರಕಾಂತ್ ಯಾದವ್ 2-14)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News