ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಎರಡನೆ ದಿನ ಭಾರತಕ್ಕೆ ಆರು ಪದಕ
ಗಬಾಲ, ಸೆ.19: ಭಾರತದ ಜೂನಿಯರ್ ಶೂಟಿಂಗ್ ತಂಡ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಎರಡನೆ ದಿನ ಪದಕದ ಬೇಟೆ ಮುಂದುವರಿಸಿದ್ದು, ಒಂದು ಚಿನ್ನ, 2 ಬೆಳ್ಳಿ ಹಾಗೂ 3 ಕಂಚಿನ ಪದಕವನ್ನು ಜಯಿಸಿದೆ. ಈ ಮೂಲಕ ಪದಕದ ಸಂಖ್ಯೆ 13ಕ್ಕೇರಿದೆ.
ಮೊದಲದಿನ 3 ಚಿನ್ನ ಸಹಿತ ಒಟ್ಟು 7 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಭಾರತ 2ನೆ ದಿನ ಮತ್ತೆ ಆರು ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ರಶ್ಯವನ್ನು 2ನೆ ಸ್ಥಾನಕ್ಕೆ ತಳ್ಳಿದೆ.
ದಿನದ ಏಕೈಕ ಚಿನ್ನದ ಪದಕ ಜೂನಿಯರ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಬಂತು. ಯಶಸ್ವಿನಿ ಸಿಂಗ್, ಮಲೈಕಾ ಗೊಯೆಲ್ ಹಾಗೂ ಹರ್ಷದಾ ಒಟ್ಟು 1122 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಟರ್ಕಿ(1104) ಹಾಗೂ ಉಜ್ಬೇಕಿಸ್ತಾನ(1086) ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದವು.
ಜೂನಿಯರ್ ಪುರುಷರ 10 ಮೀ. ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ 2ನೆ ಸ್ಥಾನ ಪಡೆದ ಗೌರವ್ ಆಣಾ, ಹೆಮೇಂದ್ರ, ಸೌರಭ್ ಅವರಿದ್ದ ಭಾರತದ ತಂಡ ಬೆಳ್ಳಿ ಪದಕ ಜಯಿಸಿತು. ವೈಯಕ್ತಿಕ ವಿಭಾಗದ ಫೈನಲ್‌ನ ಕೊನೆಯ ಸುತ್ತಿನಲ್ಲಿ 197.5 ಅಂಕ ಗಳಿಸಿದ ಅನ್ಮೋಲ್ ಬೆಳ್ಳಿ ಪದಕ ಬಾಚಿಕೊಂಡರು.
ಗಾಯತ್ರಿ, ಸೋನಿಕಾ ಹಾಗೂ ಅದಿತಿ ಸಿಂಗ್ ಟೀಮ್ ಸ್ಪರ್ಧೆಯಲ್ಲಿ ಕಂಚು ಪದಕ ಜಯಿಸಿದರು. ವೈಯಕ್ತಿಕ ವಿಭಾಗದಲ್ಲಿ 3ನೆ ಸ್ಥಾನ ಪಡೆದಿದ್ದ ಗಾಯತ್ರಿಗೆ ಮತ್ತೊಂದು ಕಂಚಿನ ಪದಕ ಲಭಿಸಿತು.
ಅನಂತ್‌ಜೀತ್ ಸಿಂಗ್, ಸುಖ್ಬೀರ್ ಸಿಂಗ್ ಹಾಗೂ ಹಂಝ ಶೇಖ್ ಅವರನ್ನೊಳಗೊಂಡ ಜೂ.ಪುರುಷರ ಸ್ಕೀಟ್ ತಂಡ ಒಟ್ಟು 337 ಅಂಕ ಗಳಿಸಿ ದಿನದ ಅಂತ್ಯದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.