ಕುಡಿಯುವ ನದಿ ನೀರು ಕೂಡಾ ಇವರ ಪಾಲಿಗೆ ವಿಷ!
2014ರಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ಅಫಿದಾವಿತ್‌ನಲ್ಲಿ, ‘‘ಹಿಂಡಾನ್ ನದಿಯ ನೀರಿನ ವಿಶ್ಲೇಷಣೆಯಿಂದ ತಿಳಿದು ಬಂದಿರುವ ಅಂಶವೆಂದರೆ, ಈ ನದಿಯ ನೀರು ಪ್ರಾಥಮಿಕ ನೀರಿನ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿಲ್ಲ. ಅಂದರೆ ಇದು ಸ್ನಾನಕ್ಕೆ ಕೂಡಾ ಯೋಗ್ಯವಲ್ಲ’’ ಎಂದು ಸ್ಪಷ್ಟಪಡಿಸಲಾಗಿತ್ತು. ಸ್ನಾನಕ್ಕೂ ಯೋಗ್ಯವಲ್ಲದ ನೀರು ಸಹಜವಾಗಿಯೇ ಕುಡಿಯುವ ಉದ್ದೇಶಕ್ಕೂ ಯೋಗ್ಯವಲ್ಲ ಎಂದು ಹೇಳಿತ್ತು.
ಉತ್ತರ ಪ್ರದೇಶದ ಭಾಗ್‌ಪತ್ ಜಿಲ್ಲೆಯ ಪಟ್ಟಿ ಬಂಜರಣ್ ಗ್ರಾಮದ ವಾಶೀದ್ (30) ಎಂಬ ವ್ಯಕ್ತಿ ತಮ್ಮ ಗುಡಿಸಲಿನ ಮಂಚದ ಮೇಲೆ ಮಲಗಿದ್ದರು. ಕಾಲುಗಳು ಬಾಗಿರುವ ಕಾರಣದಿಂದ ಹಲವು ತಿಂಗಳಿಂದ ಇವರು ಹಾಸಿಗೆ ಹಿಡಿದಿದ್ದಾರೆ. ಇವರ ಕಾಲುಗಳು ದೇಹದ ತೂಕ ಹೊರಲು ಅಶಕ್ತವಾಗಿವೆ. 12ನೆ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವವರೆಗೂ ವಾಶೀದ್‌ಗೆ ಯಾವ ತೊಂದರೆಯೂ ಇರಲಿಲ್ಲ. ಸರಕಾರಿ ಉದ್ಯೋಗ ಪಡೆಯುವ ಕನಸು ಕಾಣುತ್ತಿದ್ದ ಈ ಹದಿಹರೆಯದ ಯುವಕ ಕಾಲೇಜು ಪ್ರವೇಶ ಪಡೆಯಬೇಕು ಎನ್ನುವಷ್ಟರಲ್ಲಿ ಎರಡೂ ಕಾಲುಗಳಲ್ಲಿ ಎಲುಬು ಸಮಸ್ಯೆ ಕಾಣಿಸಿಕೊಂಡಿತು. ಆ ಬಳಿಕ ಐದು ವರ್ಷಗಳಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಹೋಗಿ, ಇಂದಿನ ಸ್ಥಿತಿಗೆ ಆತನನ್ನು ತಂದುಹಾಕಿತು.
ದೈನಂದಿನ ಚಟುವಟಿಕೆಗಳಿಗೆ ಕೂಡಾ ಕುಟುಂಬದ ಇತರ ಸದಸ್ಯರನ್ನು ಅವಲಂಬಿಸಬೇಕಾದ ಸ್ಥಿತಿ ಅವರದ್ದು. ‘‘ಕಳೆದ ಕೆಲ ವರ್ಷಗಳಿಂದ ನಾನು ಔಷಧ ಸೇವಿಸುವುದು ಬಿಟ್ಟಿದ್ದೇನೆ. ಏಕೆಂದರೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಕಲುಷಿತ ನೀರು ಸೇವನೆಯಿಂದ ಹೀಗಾಗಿದೆ’’ ಎಂದು ಮೀರತ್‌ನಲ್ಲಿ ವೈದ್ಯರು ಹೇಳಿದ್ದಾರೆ ಎಂದು ವಾಶೀದ್ ವಿವರಿಸುತ್ತಾರೆ.
19 ವರ್ಷದ ಸಲ್ಮಾನ್ ಅವರದ್ದು ಕೂಡಾ ವಾಶೀದ್ ಅವರ ಪರಿಸ್ಥಿತಿಯೇ. ಕಾಲುಗಳ ವಿರೂಪತೆಯಿಂದ ಬಳಲುತ್ತಿದ್ದಾರೆ. ಇವರ ಬೆನ್ನುಹುರಿ ಸಂಪೂರ್ಣ ಬಾಗಿದೆ. ನಿಮ್ಕಿ ಎಂಬ ಮಹಿಳೆ ಇಬ್ಬರು ಮಕ್ಕಳ ತಾಯಿ. ಆಕೆಯ ಚಿಕಿತ್ಸೆಗೆ ಕುಟುಂಬ ಈಗಾಗಲೇ 1.5 ಲಕ್ಷ ರೂಪಾಯಿ ವೆಚ್ಚ ಮಾಡಿದೆ. 300ಕ್ಕೂ ಹೆಚ್ಚು ಕುಟುಂಬಗಳು ವಾಸವಿರುವ ಈ ಗ್ರಾಮದಲ್ಲಿ ಕನಿಷ್ಠ 25ರಿಂದ 30 ಕುಟುಂಬಗಳಲ್ಲಿ ಕಾಲು ವಿರೂಪಗೊಂಡಿರುವ ಅಥವಾ ಬೆನ್ನೆಲುಬು ವಿರೂಪಗೊಂಡಿರುವ ಕನಿಷ್ಠ ಒಬ್ಬರಾದರೂ ಇದ್ದಾರೆ.
ಅರುವತ್ತರ ಆಸುಪಾಸಿನಲ್ಲಿರುವ ಹರ್ದೀಪ್ ಸಿಂಗ್ ತಮ್ಮ ಚರ್ಮದ ಮೇಲೆ ಇರುವ ಗುಳ್ಳೆಗಳನ್ನು ತೋರಿಸುತ್ತಾ. ನಾನು ನನ್ನ ಹೊಲಕ್ಕೆ ಹೋಗಬೇಕಾದರೆ ನದಿಯನ್ನು ದಾಟಿಕೊಂಡು ಹೋಗಬೇಕು. ಕಳೆದ ಕೆಲ ವರ್ಷಗಳಿಂದ, ನಾನು ಈ ನದಿ ದಾಟಿದ ತಕ್ಷಣ ಮೈಮೇಲೆ ಇಂಥ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದು ನದಿಯ ಕೊಳಕು ನೀರಿನಿಂದ ಎಂದು ವೈದ್ಯರು ಹೇಳುತ್ತಾರೆ ಎಂದು ವಿವರಿಸುತ್ತಾರೆ.
ಕೊಳಕು ನೀರಿನ ಹರಿವು
ಪಟ್ಟಿ ಬಂಜರಣ್ ಗ್ರಾಮ, ಯಮುನಾ ನದಿಯ ಉಪನದಿ ಯಾದ ಹಿಂಡಾನ್ ನದಿ ದಂಡೆಯಲ್ಲಿದೆ. ಈ ನದಿ ಪಶ್ಚಿಮ ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಹರಿಯುತ್ತದೆ. ಮುಝಾಪ್ಫರ್‌ನಗರ, ಮೀರತ್, ಭಾಗ್‌ಪಥ್, ಗಾಝಿಯಾಬಾದ್ ಹಾಗೂ ಗ್ರೇಟರ್ ನೋಯ್ಡಿ ಈ ನತದೃಷ್ಟ ಜಿಲ್ಲೆಗಳು. ಪಟ್ಟಿ ಬಂಜರಣ್‌ನಲ್ಲಿ ಹಿಂಡಾನ್ ನದಿ ಯಮುನಾ ನದಿಯತ್ತ ಹರಿದು, ದಿಲ್ಲಿಯ ಹೊರವಲಯದಲ್ಲಿ ಅಂದರೆ 70 ಕಿಲೋಮೀಟರ್ ದೂರದಲ್ಲಿ ಯಮುನೆಯನ್ನು ಸೇರುತ್ತದೆ.ಗ್ರಾಮಸ್ಥರು ಹೇಳುವ ಪ್ರಕಾರ, ಎರಡು ದಶಕದ ಹಿಂದಿನವರೆಗೂ ಇವರು ಹಿಂಡಾನ್ ನದಿಯಲ್ಲಿ ಈಜುತ್ತಿದ್ದರು. ಅವರ ಜಾನುವಾರುಗಳು ನದಿ ನೀರನ್ನು ಕುಡಿಯುತ್ತಿ ದ್ದವು ಹಾಗೂ ವೈವಿಧ್ಯಮಯ ಮತ್ಸ್ಯ ಸಂಪತ್ತು ಹಾಗೂ ಇತರ ಸಿಹಿನೀರಿನ ಪ್ರಾಣಿಗಳು ನದಿಯಲ್ಲಿ ಹೇರಳವಾಗಿ ಕಂಡುಬರುತ್ತಿದ್ದವು. ಇದೀಗ ನದಿ ನೀರು ಚರಂಡಿ ನೀರಿನಂತೆ ವಾಸನೆ ಬರುತ್ತಿದೆ. ನೀರು ಕಪ್ಪುಬಣ್ಣಕ್ಕೆ ತಿರುಗಿದ್ದು, ಮೇಲ್ಮಟ್ಟದಲ್ಲಿ ಕೊಳಕಿನ ಪದರ ಕಾಣಿಸಿಕೊಳ್ಳುತ್ತಿದೆ ಹಾಗೂ ಬಳಕೆಗೆ ಯೋಗ್ಯವಾಗಿ ಉಳಿದಿಲ್ಲ.
‘‘ಈ ನದಿಯಲ್ಲಿ ಹರಿಯುವ ನೀರಿನಲ್ಲಿ ರಾಸಾಯನಿಕಗಳು ಹಾಗೂ ಸಾಂದ್ರ ಲೋಹಗಳು ವ್ಯಾಪಕವಾಗಿ ಸೇರಿವೆ. ನದಿಯ ಮೇಲ್ಮಟ್ಟದಲ್ಲಿ ಇರುವ ಸಕ್ಕರೆ ಕಾರ್ಖಾನೆಗಳು ಹಾಗೂ ಕಾಗದ ಕಾರ್ಖಾನೆಗಳಿಂದಾಗಿ ಇಂಥ ವಸ್ತುಗಳು ನದಿಗೆ ವ್ಯಾಪಕವಾಗಿ ಸೇರುತ್ತಿವೆ’’ ಎನ್ನುತ್ತಾರೆ ಹರ್ಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಹಿರಿಯ ವಿಜ್ಞಾನಿ ಚಂದ್ರವೀರ್ ಸಿಂಗ್. ನದಿ ದಂಡೆಯ ಗ್ರಾಮಗಳಿಗೆ ಸುರಕ್ಷಿತವಾದ ಕುಡಿಯುವ ನೀರು ಪೂರೈಸುವಂತೆ ಸರಕಾರಕ್ಕೆ ಸೂಚನೆ ನೀಡುವಂತೆ ಕೋರಿ, 2014ರಿಂದೀಚೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಕ್ಯಾಡ್ಮಿಯಂ, ಕ್ರೋಮಿಯಂ, ನಿಕ್ಕೆಲ್, ಸತು, ಪಾದರಸ ಹಾಗೂ ಇತರ ವಿಷಕಾರಿ ಅಂಶಗಳಿಂದಾಗಿ ನದಿ ನೀರು ಹೆಚ್ಚು ಕಲ್ಮಶದಿಂದ ಕೂಡಿದೆ. ಈ ರಾಸಾಯನಿಕಗಳು ನದಿದಂಡೆಯ ಗ್ರಾಮಗಳ ಕೊಳವೆಬಾವಿಯ ಹ್ಯಾಂಡ್‌ಪಂಪ್‌ಗಳಿಗೆ ಹೀರಿಕೊಂಡು ಕುಡಿಯುವ ನೀರು ಅಸುರಕ್ಷಿತವಾಗಲು ಕಾರಣವಾಗಿದೆೆ.
ದೇವೋಬಾ ಪರ್ಯಾವರಣ ಸಮಿತಿಯ ಅರ್ಜಿ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಳೆದ ವರ್ಷ, ಉತ್ತರ ಪ್ರದೇಶ ಸರಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿ, ತೊಂದರೆಗೀಡಾಗಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಸುರಕ್ಷಿತ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದೆ. ಆದರೆ ಈ ಬಗ್ಗೆ ಸರಕಾರ ಯಾವ ಕ್ರಮವನ್ನೂ ಇದುವರೆಗೆ ತೆಗೆದುಕೊಂಡಿಲ್ಲ.
‘‘ನಾವು ಎಂದೂ ಟ್ಯಾಂಕರ್ ನೀರು ನೋಡಿಯೇ ಇಲ್ಲ. ಕೊಳವೆಬಾವಿಗಳನ್ನು ಹೆಚ್ಚು ಆಳ ಮಾಡುವಂತೆ ಮಾಡಿಕೊಂಡ ಮನವಿಗೂ ಸರಕಾರ ಸ್ಪಂದಿಸಿಲ್ಲ’’ ಎನ್ನುವುದು ಪಟ್ಟಿ ಬಂಜರಣ್ ಗ್ರಾಮದ ಸೂರ್ಯಕುಮಾರ್ ಸರೋರಾ ಅವರ ಅಳಲು.
ಕುರುಡಾದ ಆಡಳಿತ ವ್ಯವಸ್ಥೆ
ದೇವೋಬಾ ಪರ್ಯಾವರಣ ಸಮಿತಿ ಸಲ್ಲಿಸಿದ ಅರ್ಜಿಯ ಬಗ್ಗೆ ಜಿಲ್ಲಾಡಳಿತ ಮೊದಲು ನೀಡಿದ ಪ್ರತಿಕ್ರಿಯೆಯಲ್ಲಿ, ನದಿನೀರು ಮಲಿನವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿತ್ತು ಮತ್ತು ಇದರಿಂದಾಗಿಯೇ ಆರೋಗ್ಯ ಸಮಸ್ಯೆಗಳು ಉದ್ಭವಿಸಿವೆ ಎಂಬ ವಾದವನ್ನು ನಿರಾಕರಿಸಿತ್ತು. ಅರ್ಜಿಯಲ್ಲಿ ಹೇಳಲಾದ ಪ್ರತಿಯೊಂದು ಅಂಶಗಳು ಕೂಡಾ ಸಾರಾಸಗಟಾಗಿ ತಿರಸ್ಕರಿಸುವಂಥದ್ದು ಎಂದು ಜಿಲ್ಲಾಡಳಿತ ನೀಡಿದ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಈ ಪ್ರದೇಶದ ನೀರಿನ ಗುಣಮಟ್ಟ ನಿಗದಿತ ಪ್ರಮಾಣದಲ್ಲಿದ್ದು, ಬಳಕೆಗೆ ಯೋಗ್ಯವಾಗಿವೆ ಎಂದು ಪ್ರತಿಪಾದಿಸಿತ್ತು. ಆದ್ದರಿಂದ ಗ್ರಾಮವಾಸಿಗಳ ಆರೋಗ್ಯ ಸಂಬಂಧಿ ಕಳವಳಕ್ಕೆ ಯಾವ ಹಿನ್ನೆಲೆಯೂ ಇಲ್ಲ ಎಂದು ಹೇಳಿತ್ತು.
ಆದರೆ ಆ ಬಳಿಕ ನಡೆದ ಪ್ರತಿಯೊಂದು ಪರೀಕ್ಷೆ ಕೂಡಾ ಸರಕಾರದ ಈ ಸಮರ್ಥನೆ ತಪ್ಪುಎನ್ನುವುದನ್ನು ನಿರೂಪಿಸಿತು. 2014ರಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ಅಫಿದಾವಿತ್‌ನಲ್ಲಿ, ‘‘ಹಿಂಡಾನ್ ನದಿಯ ನೀರಿನ ವಿಶ್ಲೇಷಣೆಯಿಂದ ತಿಳಿದು ಬಂದಿರುವ ಅಂಶವೆಂದರೆ, ಈ ನದಿಯ ನೀರು ಪ್ರಾಥಮಿಕ ನೀರಿನ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿಲ್ಲ. ಅಂದರೆ ಇದು ಸ್ನಾನಕ್ಕೆ ಕೂಡಾ ಯೋಗ್ಯವಲ್ಲ’’ ಎಂದು ಸ್ಪಷ್ಟಪಡಿಸಲಾಗಿತ್ತು. ಸ್ನಾನಕ್ಕೂ ಯೋಗ್ಯವಲ್ಲದ ನೀರು ಸಹಜವಾಗಿಯೇ ಕುಡಿಯುವ ಉದ್ದೇಶಕ್ಕೂ ಯೋಗ್ಯವಲ್ಲ ಎಂದು ಹೇಳಿತ್ತು.
ಉತ್ತರ ಪ್ರದೇಶ ಜಲ ನಿಗಮ 2015ರಲ್ಲಿ ಬಾಗ್‌ಪಥ್‌ನಲ್ಲಿ ನಡೆಸಿದ ನೀರಿನ ವಿಶ್ಲೇಷಣೆಯಲ್ಲಿ, ಈ ನದಿ ನೀರಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ, ಸತು ಹಾಗೂ ಮ್ಯಾಂಗನೀಸ್ ಇರು ವುದು ಪತ್ತೆಯಾಗಿತ್ತು. ನಿಯಂತ್ರಣ ಸಂಸ್ಥೆಗಳು ನಿಗದಿಪಡಿಸಿದ ಗರಿಷ್ಠ ಪ್ರಮಾಣಕ್ಕಿಂತ ಐದು ಪಟ್ಟು ಅಧಿಕ ಸತುವಿನ ಅಂಶ ಈ ನದಿ ನೀರಿನಲ್ಲಿ ಇರುವುದು ಬೆಳಕಿಗೆ ಬಂದಿತ್ತು. ರಾಜ್ಯದ ವಿವಿಧ ಸಂಘ ಸಂಸ್ಥೆಗಳು ನಡೆಸಿದ ಇತರ ವಿಶ್ಲೇಷಣೆಗಳಲ್ಲಿ ಕೂಡಾ, ಈ ನದಿಯ ಪ್ರತಿ ಲೀಟರ್ ನೀರಿನಲ್ಲಿ 40 ಮಿಲಿಗ್ರಾಂಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿತ್ತು. ಇದು ಕುಡಿಯಲು ಸುರಕ್ಷಿತವಾದ ನೀರಿನ ಪ್ರಮಾಣದಲ್ಲಿ ಇರಬಹುದಾದ ಗರಿಷ್ಠ ವಿಷಕಾರಿ ಅಂಶಕ್ಕಿಂತ ನಾಲ್ಕು ಸಾವಿರ ಪಟ್ಟು ಅಧಿಕ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಸಹಜವಾಗಿಯೇ ನದಿ ನೀರಿನ ಮಾಲಿನ್ಯ ಎಲ್ಲವೂ ಅಂತರ್ಜಲಕ್ಕೆ ಇಂಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ‘‘ನೆಲಮಟ್ಟದಿಂದ 200 ಮೀಟರ್‌ವರೆಗೆ ಇಲ್ಲಿನ ಅಂತರ್ಜಲ ಕುಡಿಯಲು ಯೋಗ್ಯವಲ್ಲ’’ ಎನ್ನುತ್ತಾರೆ ಪಟ್ಟಿ ಬಂಜರಣ್, ಸರೋರಾ ಹಾಗೂ ತೆವೆಲಾ ಗಾರ್ಹಿ ಗ್ರಾಮಗಳ ಪ್ರಧಾನ ರಾಜೀವ್ ಕುಮಾರ್. ಈ ಪ್ರದೇಶದಲ್ಲಿ ಎಲ್ಲ ಕೊಳವೆಬಾವಿಗಳನ್ನು ಹಾಗೂ ಹ್ಯಾಂಡ್‌ಪಂಪ್‌ಗಳನ್ನು ಅದಕ್ಕಿಂತ ಹೆಚ್ಚು ಆಳದವರೆಗೆ ಕೊರೆಯಬೇಕು’’ ಎನ್ನುವುದು ಅವರ ವಾದ.
ಸೂಕ್ತ ತಪಾಸಣೆ ಹಾಗೂ ಪ್ರಯೋಗಗಳನ್ನು ನಡೆಸಿದ ಬಳಿಕ ಸರಕಾರ, ಈ ಹ್ಯಾಂಡ್‌ಪಂಪ್‌ಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಫಲಕ ಹಾಕಿದೆ. ಆದರೆ ಈ ಗ್ರಾಮಗಳ ಜನತೆಗೆ ಸುರಕ್ಷಿತ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ‘‘ಹಲವು ಲೇನ್‌ಗಳಲ್ಲಿ ಎಲ್ಲ ಮೂರು ಹ್ಯಾಂಡ್‌ಪಂಪ್‌ಗಳನ್ನು ಕೂಡಾ ಕುಡಿಯಲು ಅಯೋಗ್ಯ ಎಂದು ಪಟ್ಟಿ ಮಾಡಲಾಗಿದೆ. ಆದರೆ ಬೇರೆ ಯಾವ ಪರ್ಯಾಯವೂ ಇಲ್ಲದಿರುವುದರಿಂದ ಎಲ್ಲರೂ ಅದೇ ನೀರನ್ನು ಕುಡಿಯುತ್ತಿದ್ದೇವೆ’’ ಎಂದು ಸೂರ್ಯಕುಮಾರ್ ಅಸಹಾಯಕರಾಗಿ ನುಡಿಯುತ್ತಾರೆ. ಹ್ಯಾಂಡ್‌ಪಂಪ್‌ನ ಆಸುಪಾಸಿನ ಕನಿಷ್ಠ 20 ಕುಟುಂಬಗಳು ನಿರ್ವಾಹವಿಲ್ಲದೇ ಈ ಅಸುರಕ್ಷಿತ ನೀರನ್ನೇ ಕುಡಿಯಬೇಕಾಗಿದೆ. ‘‘ಸುರಕ್ಷಿತ ಕುಡಿಯುವ ನೀರಿನ ಹ್ಯಾಂಡ್‌ಪಂಪ್‌ಗಳು ಈ ಪ್ರದೇಶದಿಂದ ತೀರಾ ದೂರ ದಲ್ಲಿದ್ದು, ಆ ಪ್ರದೇಶದ ಜನ, ನಾವು ಆ ನೀರು ಬಳಕೆ ಮಾಡಲು ಅವಕಾಶ ಕೊಡುವುದಿಲ್ಲ’’ ಎನ್ನುವುದು ಕುಮಾರ್ ಅವರ ಆರೋಪ.
ಹಾನಿ
ವಿಶ್ವ ಆರೋಗ್ಯ ಸಂಸ್ಥೆಯು, ಮಲಿನ ನೀರನ್ನು ಸತುಪ್ರಾಶನದ ಪ್ರಮುಖ ಮೂಲ ಎಂದು ಅಂದಾಜು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಪ್ರತಿ ವರ್ಷ ಏಳು ಲಕ್ಷ ಮಂದಿ ಇಂಥ ಮಲಿನ ನೀರು ಕುಡಿದು ಸಾಯುತ್ತಿದ್ದಾರೆ. ಸತು ಹೆಚ್ಚು ಅಪಾಯಕಾರಿ ವಿಷವಾಗಿದ್ದು, ದೀರ್ಘಾವಧಿಯಲ್ಲಿ ಎಲುಬು ಹಾಗೂ ಹಲ್ಲುಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಇಂಥ ವಿಷಕಾರಿ ಅಂಶಗಳ ಪರಿಣಾಮಕ್ಕೆ ತುತ್ತಾಗುವವರಲ್ಲಿ ಮಕ್ಕಳು ಅಧಿಕ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಮಕ್ಕಳ ದೇಹ, ವಯಸ್ಕರ ದೇಹಕ್ಕಿಂತ ನಾಲ್ಕರಿಂದ ಐದು ಪಟ್ಟು ಅಧಿಕ ಪ್ರಮಾಣದಲ್ಲಿ ಸತುವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ವಿಷಕಾರಿ ವಸ್ತುಗಳು ಹಾಗೂ ರೋಗ ನೋಂದಣಿ ಸಂಸ್ಥೆಯ ಪ್ರಕಾರ, ಸತುವಿನ ಕಾರಣದಿಂದ ಎಲುಬು ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದು ಕ್ರಮೇಣ, ಎಲುಬು ಸಾಂದ್ರತೆ ಕಡಿಮೆಯಾಗುವ ಸಮಸ್ಯೆಗೆ ಕಾರಣವಾಗುತ್ತದೆ.
ಇದರ ಜತೆಗೆ ಸತು, ಆರ್ಸೆನಿಕ್, ಕ್ಯಾಡ್ಮಿಯಂ ಹಾಗೂ ಪಾದರಸದಂಥ ಲೋಹಗಳು ಚರ್ಮ, ಕಣ್ಣು, ಕಿಡ್ನಿ ಹಾಗೂ ಲಿವರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ,
‘‘ಸತು ಹಾಗೂ ಪಾದರಸದಂಥ ಸಾಂದ್ರ ಲೋಹಗಳು ಇಡೀ ಮಾನವ ಶರೀರ ವ್ಯವಸ್ಥೆಯನ್ನೇ ಹಾಳುಮಾಡುವ ಸಾಮರ್ಥ್ಯ ಹೊಂದಿವೆ’’ ಎನ್ನುತ್ತಾರೆ ಹಲವು ದಶಕಗಳಿಂದ ಪರಿಸರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಜಾಬ್‌ನ ನಿವೃತ್ತ ವೈದ್ಯ ಡಾ. ಅಮರ್ ಸಿಂಗ್ ಆಝಾದ್. ಇವು ನರಸಂಬಂಧಿ ಸಮಸ್ಯೆಗಳು, ಹೈಪರ್ ಟೆನ್ಷನ್, ಬಂಜೆತನದ ಸಮಸ್ಯೆ ಮತ್ತು ಇತರ ರೋಗಗಳಿಗೆ ಕಾರಣವಾಗುತ್ತವೆ ಎನ್ನುವುದು ಅವರ ಅಭಿಮತ.
ಭಾಗ್‌ಪಥ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಆರ್.ಕೆ.ಮಿಶ್ರಾ ಹೇಳುವಂತೆ, ‘‘ಈ ಭಾಗದಲ್ಲಿ ಮಲಿನ ನದಿ ನೀರು ರೋಗಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸುವ ಯಾವ ಪುರಾವೆಯೂ ಇಲ್ಲ. ಇಲ್ಲಿನ ರೋಗಗಳಿಗೆ ಮಲಿನ ನೀರು ಕಾರಣವಲ್ಲ. ಸಾಂದ್ರ ಲೋಹಗಳು ಈ ರೋಗಗಳಿಗೆ ನೇರ ಕಾರಣವಲ್ಲ’’ ಎನ್ನುವುದು ಅವರ ವಾದ. ಆದರೆ ಪರೋಕ್ಷ ಸಂಬಂಧ ಹೊಂದಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ.
‘‘ಇಂತಹ ಸಾಂದ್ರ ಲೋಹಗಳು ದೇಹದ ಒಟ್ಟಾರೆ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ಇತರ ರೋಗಗಳು ಬರಲು ಕಾರಣ ವಾಗಬಹುದು. ದೇಹದ ರಕ್ಷಣಾ ವ್ಯವಸ್ಥೆಗೆ ಧಕ್ಕೆಯಾಗುವುದರಿಂದ, ಎಲುಬು ವಿರೂಪಗೊಳ್ಳುವುದು, ಕ್ಯಾನ್ಸರ್‌ನಂಥ ಪರಿಣಾಮಗಳು ಎದುರಾಗಬಹುದು
ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಅಧ್ಯಯನ ನಡೆಸಬೇಕು ಹಾಗೂ ಇದರಿಂದ ಸಂತ್ರಸ್ತರಾದವರಿಗೆ ನಿರ್ದಿಷ್ಟ ಚಿಕಿತ್ಸೆ ನೀಡಬೇಕು. ಆರೋಗ್ಯ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿಕೊಂಡರೂ, ಈ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಈ ಭಾಗದ ಜನರ ಸಮಸ್ಯೆಗಳಿಗೆ ವಿಶೇಷ ಚಿಕಿತ್ಸಾ ಸೇವೆಯನ್ನು ನೀಡುತ್ತಿಲ್ಲ ಎನ್ನುವುದು ಪ್ರಧಾನ, ರಾಜೀವ್ ಕುಮಾರ್ ಅವರ ಆರೋಪ.
ಸ್ವಚ್ಛನೀರಿಗೆ ಹಣ ಇಲ್ಲ
‘‘ಕೇಂದ್ರ ಸರಕಾರದ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಯು ಗ್ರಾಮಸ್ಥರ ಅಗತ್ಯತೆಗಳನ್ನು ಪೂರೈಸಲು ವಿಫಲವಾಗಿದೆ. ಉತ್ತರ ಪ್ರದೇಶದ 1,700 ಗ್ರಾಮಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ನಮಗೆ 2,600 ಕೋಟಿ ರೂಪಾಯಿ ಅಗತ್ಯವಿದೆ’’ ಎನ್ನುತ್ತಾರೆ ಉತ್ತರ ಪ್ರದೇಶ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರೇಮ್ ಅಸ್ಸುದಾನಿ. ರಾಜ್ಯಕ್ಕೆ ಈ ರಾಷ್ಟ್ರೀಯ ಯೋಜನೆಯಡಿ 600 ರಿಂದ 700 ಕೋಟಿ ರೂಪಾಯಿ ಬಂದಿದೆ. ಉಳಿದ ಅಂತರವನ್ನು ರಾಜ್ಯ ಸರಕಾರ ನಿವಾರಿಸಬೇಕು’’ ಎನ್ನುವುದು ಅವರ ಅಭಿಪ್ರಾಯ.
ಕುಡಿಯಲು ಸ್ವಚ್ಛ ಹಾಗೂ ಸುರಕ್ಷಿತ ನೀರು ಒದಗಿಸುವಲ್ಲಿ ವಿಫಲವಾದ ಉತ್ತರ ಪ್ರದೇಶ ಸರಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 2016ರ ಸೆಪ್ಟಂಬರ್ 7ರಂದು ತರಾಟೆಗೆ ತೆಗೆದುಕೊಂಡಿದೆ. ಜತೆಗೆ ಭಾಗ್‌ಪಥ್, ಮುಝಫ್ಫರ್‌ನಗರ, ಶಾಮ್ಲಿ, ಮೀರಠ್, ಗಾಝಿಯಾಬಾದ್ ಹಾಗೂ ಸಹರಾಣಪುರ ಜಿಲ್ಲೆ ಯ ನಿವಾಸಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸದಿರುವುದನ್ನು ಕೂಡಾ ಖಂಡಿಸಿದೆ. ಈ ಎಲ್ಲ ಆರು ಜಿಲ್ಲೆಗಳ ನೀರನ್ನು ಕೇಂದ್ರೀಯ ಅಂತರ್ಜಲ ಮಂಡಳಿಯ ಸಹಾಯದೊಂದಿಗೆ ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸಿ, ಅಕ್ಟೋಬರ್ 21ರೊಳಗೆ ವರದಿ ಸಲ್ಲಿಸಬೇಕು ಎಂದು ಅಖಿಲೇಶ್ ಯಾದವ್ ಸರಕಾರಕ್ಕೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪರಿಸರ ನ್ಯಾಯಮಂಡಳಿಯ ಇತ್ತೀಚಿನ ಆದೇಶದಿಂದಾಗಿ ಉತ್ತರ ಪ್ರದೇಶ ಸರಕಾರ ತಮ್ಮ ಭವಿಷ್ಯದ ಬಗ್ಗೆ ಸ್ಪಂದಿಸುತ್ತದೆ ಎಂಬ ಆಶಯವನ್ನು ಭಾಗ್‌ಪಥ್ ನಿವಾಸಿಗಳು ಹೊಂದಿದ್ದಾರೆ. ಜಲಮಾಲಿನ್ಯವು ಹಿಂಡಾನ್ ನದಿ ಪ್ರದೇಶದ ಪ್ರಮುಖ ಚರ್ಚಾವಿಷಯವಾಗಿದ್ದು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದು ನಿರ್ಣಾಯಕ ಅಂಶವಾಗಲಿದೆ.
scroll.in