‘‘ಇಸ್ ಇಂಡಿಯನ್ ಕೊ ನಿಕಾಲೊ’’
ನ್ಯೂಯಾರ್ಕ್, ಸೆ.20: ಜಮ್ಮು ಕಾಶ್ಮೀರದ ಉರಿ ಮಿಲಿಟರಿ ನೆಲೆ ಮೇಲೆ ನಡೆದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕ್ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಉಂಟಾಗಿರುವಂತೆಯೇ ನ್ಯೂಯಾರ್ಕ್ ನಗರದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯೊಂದರಿಂದ ಎನ್ ಡಿ ಟಿವಿ ಪತ್ರಕರ್ತೆಯೊಬ್ಬರನ್ನು ‘‘ಇಸ್ ಇಂಡಿಯನ್ ಕೋ ನಿಕಾಲೋ’’ (ಈ ಭಾರತೀಯಳನ್ನು ಹೊರ ಹಾಕಿ) ಎಂದು ಹೇಳಿ ಹೊರ ಕಳುಹಿಸಲಾಗಿದೆ.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧಿವೇಶನದ ಹಿನ್ನೆಲೆಯಲ್ಲಿ ಪಾಕ್ ವಿದೇಶಾಂಗ ಕಾರ್ಯದರ್ಶಿ ಎಝಾಝ್ ಅಹ್ಮದ್ ಚೌಧುರಿ ಇಲ್ಲಿನ ರೂಸ್ ವೆಲ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಆದರೆ ಅಲ್ಲಿ ಭಾರತೀಯ ಪತ್ರಕರ್ತರು ಯಾರೂ ಹಾಜರಿರದೇ ಇರುವುದು ಭಾರತ-ಪಾಕ್ ಸಂಬಂಧ ಕುಸಿಯುತ್ತಿದೆಯೆಂಬುದನ್ನು ಸ್ಪಷ್ಟ ಪಡಿಸಿದೆ.
ರವಿವಾರದ ಭೀಕರ ಉಗ್ರ ದಾಳಿಯಲ್ಲಿ 18 ಜನ ಭಾರತೀಯ ಯೋಧರು ಮೃತ ಪಟ್ಟಿದ್ದರೆ ಹಾಗೂ ಇದರ ಹಿಂದೆ ಜೈಶ್-ಇ-ಮುಹಮ್ಮದ್ ಸಂಘಟನೆಯ ಕೈವಾಡವಿದೆಯೆದು ಸ್ಪಷ್ಟವಾಗಿದೆ. ಈ ಸಂಘಟನೆಯ ಮುಖ್ಯಸ್ಥ ಪಾಕಿಸ್ತಾನದಲ್ಲಿರುವುದರಿಂದ ಇಲ್ಲಿಯ ತನಕ ಪಾಕ್ ನಾಯಕತ್ವ ಈ ಉಗ್ರ ದಾಳಿಯ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದೆ. ವಿಶ್ವಸಂಸ್ಥೆ ಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಪಾಕ್ ಪ್ರಧಾನಿ ನವಾಝ್ ಶರೀಫ್ ಕೂಡ ಈ ಬಗ್ಗೆ ಅವರನ್ನು ಪ್ರಶ್ನಿಸಲು ಯತ್ನಿಸಿದ ಭಾರತೀಯ ಪತ್ರಕರ್ತರನ್ನು ಆಚೆ ಕಳುಹಿಸಿದ್ದಾರೆ.
ಆದರೆ ಭಾರತವು ಕಾಶ್ಮೀರದಲ್ಲಿ ‘ಮಾನವ ಹಕ್ಕುಗಳ ಉಲ್ಲಂಘನೆ’ ಮಾಡುತ್ತಿದೆ ಎಂದು ಆರೋಪಿಸುವಲ್ಲಿ ಮಾತ್ರ ಶರೀಫ್ ಯಾವುದೇ ರೀತಿಯಲ್ಲಿ ಹಿಂದೆ ಮುಂದೆ ನೋಡಿಲ್ಲ.