ಕಾವೇರಿ: ಪ್ರಚಲಿತ ಬಿಕ್ಕಟ್ಟು ಶಾಶ್ವತ ಪರಿಹಾರ
ಸರ್ವೋಚ್ಚ ನ್ಯಾಯಾಲಯವು ಸೆ. 12ರಂದು ತನ್ನ ಸೆ. 5ರ ತೀರ್ಪನ್ನು ಕಿಂಚಿತ್ತೂ ಮರುಪರಿಶೀಲನೆ ಮಾಡದೆ ಕರ್ನಾಟಕ ಸರಕಾರದ ಅಹವಾಲನ್ನು ತಿರಸ್ಕರಿಸಿದೆ. ಮಾತ್ರವಲ್ಲದೆ ಯಾವುದೇ ತರ್ಕ ಅಥವಾ ನ್ಯಾಯಿಕ ಮಾನದಂಡಗಳಿಲ್ಲದೆ ದಿನಕ್ಕೆ 12,000 ಕ್ಯುಸೆಕ್ಸ್ ನೀರನ್ನು ಸೆಪ್ಟಂಬರ್ 20ರವರೆಗೆ ಹರಿಸಲೇಬೇಕೆಂದು ಆದೇಶಿಸಿದೆ. ಹಾಗೂ ಕರ್ನಾಟಕದ ಸಂಕಷ್ಟ ಪರಿಸ್ಥಿತಿಯ ವಿವರಗಳನ್ನು ಪರಿಗಣಿಸದೆ ಅತ್ಯಂತ ಸಂವೇದನಾಶೂನ್ಯವಾಗಿ ಮತ್ತು ತರ್ಕಹೀನವಾಗಿ ಸೆ. 5ರ ಆದೇಶದಲ್ಲಿ ನಿಗದಿ ಮಾಡಿದ್ದಕ್ಕಿಂತಲೂ 18,000 ಕ್ಯುಸೆಕ್ಸ್ ಹೆಚ್ಚು ನೀರನ್ನು ಹರಿಸಬೇಕೆಂದು ಆದೇಶಿಸಿದೆ.
ದೇಶದ ಸರ್ವೋಚ್ಚ ನ್ಯಾಯಾಲಯ ಸೆಪ್ಟಂಬರ್ 12ರಂದು ಕಾವೇರಿ ವಿವಾದದಲ್ಲಿ ಕರ್ನಾಟಕದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ತರ್ಕಹೀನ ಮತ್ತು ಸಂವೇದನಾಶೂನ್ಯ ತೀರ್ಪು ನೀಡುವ ಮೂಲಕ ಎರಡೂ ರಾಜ್ಯ ಗಳ ಜನರನ್ನು ಸಂಕಷ್ಟಕ್ಕೆ ದೂಡಿದೆ. ಜಯಲಲಿತಾ ಸರಕಾರವು ಕುತರ್ಕದ ಮಾರ್ಗವನ್ನು ಅನುಸರಿಸುತ್ತಿದೆ. ಕೇಂದ್ರ ಸರಕಾರ ಹೊಣೆಗೇಡಿಯಾಗಿ ನಡೆದುಕೊಳ್ಳುತ್ತಿದೆ. ರಾಜ್ಯ ಸರಕಾರದ ತೀರ್ಮಾನದಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ವಿರೋಧ ಪಕ್ಷಗಳು ಅವಕಾಶವಾದಿ ರಾಜಕಾರಣ ನಡೆಸುತ್ತಿವೆ. ಕೆಲವು ಕೋಮುವಾದಿ ಹಾಗೂ ದುರಭಿಮಾನಿ ಶಕ್ತಿಗಳು ಕನ್ನಡ ಪ್ರೇಮದ ಹೆಸರಿನಲ್ಲಿ ಜನರ ಆಕ್ರೋಶವನ್ನು ಸಾಮಾನ್ಯ ತಮಿಳು ಜನರ ಕಡೆಗೆ ತಿರುಗಿಸಿ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಇದರಿಂದ ಅಪಾರ ಆಸ್ತಿಪಾಸ್ತಿ ಮತ್ತು ಅಮೂಲ್ಯ ಪ್ರಾಣಹಾನಿ ಸಹ ನಡೆದುಹೋಗಿದೆ. ಕಾವೇರಿ ನದಿ ನೀರಿನ ಹಂಚಿಕೆಯ ಕುರಿತು ಕಾವೇರಿ ನ್ಯಾಯ ಮಂಡಳಿಯು (ಟ್ರಿಬ್ಯುನಲ್) 2007ರಲ್ಲಿ ಅಂತಿಮ ಆದೇಶ ನೀಡಿತಷ್ಟೆ. ಅದರ ಪ್ರಕಾರ ಕಾವೇರಿಯಲ್ಲಿ 740 ಟಿಎಂಸಿಯಷ್ಟು ನೀರು ಹರಿಯುವ ಸಾಮಾನ್ಯ ಮಳೆ ವರ್ಷಗಳಲ್ಲಿ ಕರ್ನಾಟಕಕ್ಕೆ 270 ಮತ್ತು ತಮಿಳುನಾಡಿಗೆ 419 ಟಿಎಂಸಿಯಷ್ಟು ಪಾಲೆಂದು ನಿಗದಿ ಮಾಡಿದೆ. ಕರ್ನಾಟಕವು ಒಂದು ಸಾಮಾನ್ಯ ಮಳೆ ವರ್ಷದಲ್ಲಿ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಬಿಡಬೇಕೆಂದು ಇತ್ಯರ್ಥಪಡಿಸಿದೆ. ಇದರ ಉಸ್ತುವಾರಿ ನೋಡಿಕೊಳ್ಳಲು ಕಾವೇರಿ ನದಿ ನೀರು ಹಂಚಿಕೆ ಮೇಲುಸ್ತುವಾರಿ ಸಮಿತಿಯನ್ನು ರಚಿಸಬೇಕೆಂದೂ, ನೀರನ್ನು ಬಿಡುವಲ್ಲಿ ಅಥವಾ ಹಂಚಿಕೆಯಲ್ಲಿ ಮುಂದೆ ಯಾವುದೇ ರೀತಿಯ ತಕರಾರುಗಳು ಉದ್ಭವಿಸಿದರೂ ಅದನ್ನು ಈ ಸಮಿತಿಯೇ ತೀರ್ಮಾನಿಸಬೇಕೆಂದೂ ಆದೇಶಿಸಿದೆ. ಹಾಗೆಯೇ ಮಳೆ ಅಭಾವವುಂಟಾಗಿ ಕಾವೇರಿಯಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ಉಂಟಾಗುವ ಸಂಕಷ್ಟವನ್ನು ಸಹ ಅದೇ ಪ್ರಮಾಣದಲ್ಲಿ ಹಂಚಿಕೊಳ್ಳಬೇಕೆಂದು ಆದೇಶಿಸಿದೆ. ಆದರೆ ಸಂಕಷ್ಟ ಹಂಚಿಕೆಯ ಬಗ್ಗೆ ಯಾವುದೇ ವೈಜ್ಞಾನಿಕ ಸೂತ್ರ ಅಥವಾ ಮಾನದಂಡಗಳನ್ನು ನ್ಯಾಯಮಂಡಳಿಯು ನಿಗದಿ ಮಾಡಲಿಲ್ಲ.
ಈ ಸಂಕಷ್ಟ ಸೂತ್ರ ಮತ್ತು ಅಂತಿಮ ಪಾಲು-ಇವೆರಡರ ಬಗ್ಗೆಯೂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡೂ ಸುಪ್ರೀಂ ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಿವೆ. ಅದನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ. ಮತ್ತು ಅದರ ಇತ್ಯರ್ಥವಾಗುವವರೆಗೆ ಟ್ರಿಬ್ಯುನಲ್ ಆದೇಶದ ಎಲ್ಲಾ ಅಂಶ ಗಳನ್ನೂ ಜಾರಿ ಮಾಡಬೇಕೆಂದು ಮಧ್ಯಾಂತರ ಆದೇಶ ನೀಡಿದೆ. ಹೀಗಾಗಿ 2007ರಿಂದಲೂ ಟ್ರಿಬ್ಯುಬಲ್‌ನ ಅಂತಿಮ ಆದೇಶದ ಆಧಾರದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ನಡೆದಿದೆ. ಅಂತಿಮ ಆದೇಶ ಕುರಿತ ಮರುಪರಿಶೀಲನಾ ಅರ್ಜಿಯ ಬಗೆಗಿನ ವಿಚಾರಣೆ ಇದೇ ಅಕ್ಟೋಬರ್ 18ರಂದು ಸುಪ್ರೀಂ ಕೋರ್ಟಿನಲ್ಲಿ ಬರಲಿದೆ.
2007ರ ನಂತರದ ಈ ವರ್ಷಗಳಲ್ಲಿ 2012 ಮತ್ತು 2013ರಲ್ಲಿ ಬಿಟ್ಟರೆ, ಕಾವೇರಿ ಕೊಳ್ಳದಲ್ಲಿ ಒಳ್ಳೆಯ ಮಳೆ ಆಗಿದ್ದರಿಂದ ಕರ್ನಾಟಕವು ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಬಿಟ್ಟಿದೆ. ಹೀಗಾಗಿ ಆ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆಯ ಬಗ್ಗೆ ಯಾವುದೇ ವಿವಾದವು ತಲೆದೋರಿರಲಿಲ್ಲ. 2012-13ರಲ್ಲಿ ಈ ಸಾಲಿಗಿಂತ ಹೆಚ್ಚಿನ ಸಂಕಷ್ಟ ಪರಿಸ್ಥಿಯೇ ಉಂಟಾಗಿತ್ತು. ಆಗಲೂ ಸಹ ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡಲಾಗದೆಂಬ ಭಾವಾವೇಶದ ಪರಿಸ್ಥಿತಿ ಉಂಟಾಗಿತ್ತು. ಆದರೂ ಕಾವೇರಿ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟಿನ ಆದೇಶಕ್ಕೆ ಒಳಪಟ್ಟು ಅಂದಿನ ಬಿಜೆಪಿ ಸರಕಾರ ಸೆಪ್ಟಂಬರ್ ತಿಂಗಳ ಮೊದಲ ಹತ್ತು ದಿನಗಳಲ್ಲಿ ದಿನಕ್ಕೆ 10,000 ಕ್ಯುಸೆಕ್ಸ್ ಮತ್ತು ನಂತರದ ದಿನಗಳಲ್ಲಿ ದಿನಕ್ಕೆ 9,000 ಕುಸೆಕ್ಸ್ ನೀರನ್ನು ಬಿಡಲೇ ಬೇಕಾಯಿತು. 2013ರಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿಯ ರಚನೆಯಾಯಿತು.
ಮೂರು ವರ್ಷಗಳ ನಂತರ ಈಗ 2016ರಲ್ಲಿ ಸತತ ಎರಡು ವರ್ಷಗಳ ಮಳೆ ವೈಫಲ್ಯದಿಂದಾಗಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕಾವೇರಿ ಕೊಳ್ಳದಲ್ಲಿ ಶೇ. 34ಕ್ಕಿಂತ ಹೆಚ್ಚಿನ ಮಳೆ ವೈಫಲ್ಯವಾಗಿದೆ. ಇದರಿಂದಾಗಿ ಕಾವೇರಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಸಹಜವಾಗಿಯೇ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಹರಿಯಬೇಕಿದ್ದ ನೀರಿನಲ್ಲಿ ಕಡಿತ ಉಂಟಾಗಿದೆ. ಆದರೆ ಕಾವೇರಿ ವಿಷಯವನ್ನು ತನ್ನ ರಾಜಕೀಯ ಏಳಿಗೆಯ ಮತ್ತು ಅಧಿಕಾರದ ಉಳಿವಿನ ಕುತಂತ್ರಕ್ಕೆ ಬಳಸಿಕೊಂಡಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರಕಾರವು, ಮಳೆ ವೈಫಲ್ಯ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದ್ದರೂ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸಿತು. ಸಾಮಾನ್ಯ ವರ್ಷದಲ್ಲಿ ಕರ್ನಾಟಕ ತಮಿಳುನಾಡಿಗೆ ಎಷ್ಟು ನೀರು ಹರಿಸಬೇಕೋ ಅಷ್ಟು ನೀರನ್ನು ಹರಿಸಲೇ ಬೇಕೆಂದು ಆದೇಶ ನೀಡಬೇಕೆಂದು ಅಹವಾಲು ಸಲ್ಲಿಸಿತು. ಅದಕ್ಕೆ ಪ್ರತಿಯಾಗಿ ಕರ್ನಾಟಕ ಸರಕಾರವು ಹೇಗೆ ಈ ವರ್ಷ ಕಾವೇರಿ ಕೊಳ್ಳದಲ್ಲಿ ಮಳೆ ವೈಫಲ್ಯವಾಗಿದೆಯೆಂದೂ, ತಮಿಳುನಾಡು ಕೋರಿರುವಷ್ಟು ನೀರನ್ನು ಬಿಟ್ಟರೆ ಕರ್ನಾಟಕ ಹೇಗೆ ಸಂಕಷ್ಟಕ್ಕೆ ಸಿಲುಕುತ್ತದೆಂದೂ ಬಹಳ ವಿವರವಾದ ಪ್ರತ್ಯುತ್ತರವನ್ನು ಸಲ್ಲಿಸಿತ್ತು. ಕಾವೇರಿ ಕೊಳ್ಳದಲ್ಲಿ ಎಷ್ಟು ನೀರು ಇದೆ, ಎಷ್ಟು ಮಳೆ ವೈಫಲ್ಯ ವಾಗಿದೆ ಮತ್ತು ಎಷ್ಟು ನೀರು ಬಿಡಬೇಕು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿ ತೀರ್ಮಾನ ಮಾಡಲೆಂದೇ ನೇಮಕವಾದ ಮೇಲುಸ್ತುವಾರಿ ಸಮಿತಿ ರಚನೆಯಾದ ಮೇಲೆ ಸುಪ್ರೀಂ ಕೋರ್ಟು ತಮಿಳುನಾಡಿನ ಈ ಅಹವಾಲನ್ನೇ ಪುರಸ್ಕರಿಸಬಾರದಿತ್ತು. ಬದಲಿಗೆ ತಮಿಳುನಾಡು ತನ್ನ ಅಹವಾಲನ್ನು ಸಮಿತಿಯ ಎದುರು ದಾಖಲಿಸ ಬೇಕೆಂದು ಆದೇಶಿಸಬೇಕಿತ್ತು. ಆದರೆ ತಮಿಳುನಾಡಿನ ಅಹವಾಲನ್ನು ಮಾನ್ಯ ಮಾಡಿದ ಸರ್ವೋಚ್ಚ ನ್ಯಾಯಾಲಯವು ಮೇಲುಸ್ತುವಾರಿ ಸಮಿತಿಯ ಮುಂದೆ ತನ್ನ ಅಹವಾಲನ್ನು ಸಲ್ಲಿಸುವಂತೆ ಸೆ. 5ರ ತನ್ನ ತೀರ್ಪಿನಲ್ಲಿ ತಮಿಳುನಾಡು ಸರಕಾರಕ್ಕೆ ಆದೇಶವನ್ನೇನೋ ಮಾಡಿತು. ಆದರೆ ಅದೇ ಸಮಯದಲ್ಲಿ ಯಾವುದೇ ತರ್ಕ, ವಿವೇಚನೆ ಇಲ್ಲದೆ ಕರ್ನಾಟಕವು 10 ದಿನಗಳ ಕಾಲ 15,000 ಕ್ಯುಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ಸಂವೇದನೆ ರಹಿತ ಆದೇಶವನ್ನೂ ಮಾಡಿತು.
ಹತಾಶರಾಗಿದ್ದ ಕರ್ನಾಟಕದ ಕಾವೇರಿ ಕೊಳ್ಳದ ರೈತರಿಗೆ ಈ ಆದೇಶದಿಂದ ಸಿಡಿಲು ಬಡಿದಂತಾಯಿತು. ಇಡೀ ಕರ್ನಾಟಕವೇ ಒಟ್ಟಾಗಿ ಈ ಆದೇಶದ ವಿರುದ್ಧ ಸ್ವಯಂಪ್ರೇರಿತ ಬಂದ್ ನಡೆಸಿ ತನ್ನ ವಿರೋಧ ದಾಖಲಿಸಿತು. ಜನತೆಯ ಈ ಅಭೂತಪೂರ್ವ ಹೋರಾಟದಿಂದಾಗಿ ಸುಪ್ರೀಂ ಕೋರ್ಟು ಕರ್ನಾಟಕದ ಸಂಕಷ್ಟ ವನ್ನು ಅರ್ಥ ಮಾಡಿಕೊಂಡು ತಮಿಳುನಾಡಿಗೆ ಕರ್ನಾಟಕವು ಹರಿಸಬೇಕಾದ ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಕರ್ನಾಟಕ ಸರಕಾರ ರಾತ್ರೋರಾತ್ರಿ ಮರುಪರಿಶೀಲನಾ ಅರ್ಜಿ ಸಲ್ಲಿಸಿತು.
ಆದರೆ ಸರ್ವೋಚ್ಚ ನ್ಯಾಯಾಲಯವು ಸೆ. 12ರಂದು ತನ್ನ ಸೆ. 5ರ ತೀರ್ಪನ್ನು ಕಿಂಚಿತ್ತೂ ಮರುಪರಿಶೀಲನೆ ಮಾಡದೆ ಕರ್ನಾಟಕ ಸರಕಾರದ ಅಹವಾಲನ್ನು ತಿರಸ್ಕರಿಸಿದೆ. ಮಾತ್ರವಲ್ಲದೆ ಯಾವುದೇ ತರ್ಕ ಅಥವಾ ನ್ಯಾಯಿಕ ಮಾನದಂಡಗಳಿಲ್ಲದೆ ದಿನಕ್ಕೆ 12,000 ಕ್ಯುಸೆಕ್ಸ್ ನೀರನ್ನು ಸೆಪ್ಟಂಬರ್ 20ರವರೆಗೆ ಹರಿಸಲೇಬೇಕೆಂದು ಆದೇಶಿಸಿದೆ. ಹಾಗೂ ಕರ್ನಾಟಕದ ಸಂಕಷ್ಟ ಪರಿಸ್ಥಿತಿಯ ವಿವರ ಗಳನ್ನು ಪರಿಗಣಿಸದೆ ಅತ್ಯಂತ ಸಂವೇದನಾಶೂನ್ಯವಾಗಿ ಮತ್ತು ತರ್ಕಹೀನವಾಗಿ ಸೆ. 5ರ ಆದೇಶದಲ್ಲಿ ನಿಗದಿ ಮಾಡಿದ್ದಕ್ಕಿಂತಲೂ 18,000 ಕ್ಯುಸೆಕ್ಸ್ ಹೆಚ್ಚು ನೀರನ್ನು ಹರಿಸಬೇಕೆಂದು ಆದೇಶಿಸಿದೆ. ಗಾಯದ ಮೇಲೆ ಬರೆ ಎಳೆದಂತೆ, ಕರ್ನಾಟಕದ ಜನತೆಯ ಹತಾಶೆ, ಅದರಿಂದಾಗಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳನ್ನು ಕೋರ್ಟಿಗೆ ನಿವೇದಿಸಿದ್ದನ್ನು ಸಹ ಗಣನೆಗೇ ತೆಗೆದುಕೊಳ್ಳದೆ ವಿನಾಕಾರಣ ಆಕ್ಷೇಪಿಸಿದೆ.