ದೇಶದಲ್ಲಿ 10 ವರ್ಷದಿಂದ ಬಾಕಿ ಇರುವ 90% ಪ್ರಕರಣಗಳು ಈ 6 ರಾಜ್ಯಗಳಲ್ಲಿವೆ!
ಎಷ್ಟು ಲಕ್ಷ ಕ್ರಿಮಿನಲ್ ಪ್ರಕರಣಗಳು ಧೂಳು ತಿನ್ನುತ್ತಿವೆ?
ಹೊಸದಿಲ್ಲಿ,ಸೆ.21: ದೇಶದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿರುವ 23 ಲಕ್ಷ ಪ್ರಕರಣಗಳ ಶೇಕಡ 90ರಷ್ಟು ಪ್ರಕರಣಗಳು ಆರು ರಾಜ್ಯಗಳಲ್ಲೇ ಇವೆ. ಒಟ್ಟಾರೆ ಬಾಕಿ ಪ್ರಕರಣಗಳಲ್ಲಿ ಇವು ಅಗ್ರ ರಾಜ್ಯಗಳಲ್ಲದಿದ್ದರೂ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳಲ್ಲಿ ಈ ರಾಜ್ಯಗಳಿಗೆ ಅಗ್ರಸ್ಥಾನ.
ದೇಶದಲ್ಲಿ ಒಟ್ಟಾರೆ ಹತ್ತು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳಲ್ಲಿ ಉತ್ತರ ಪ್ರದೇಶದ ಪಾಲು ಶೇಕಡ 30ರಷ್ಟು. ಉಳಿದಂತೆ ಗುಜರಾತ್ (22), ಮಹಾರಾಷ್ಟ್ರ (11), ಬಿಹಾರ (10), ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಪಾಲು ತಲಾ ಶೇಕಡಾ 8ರಷ್ಟಿವೆ. ದೇಶದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಒಟ್ಟು 2.29 ಕೋಟಿ ಪ್ರಕರಣಗಳ ಪೈಕಿ 22.95 ಲಕ್ಷ ಪ್ರಕರಣಗಳು ಹತ್ತು ವರ್ಷಕ್ಕಿಂತ ಹಿಂದಿನಿಂದಲೇ ಬಾಕಿ ಇದ್ದರೆ, ಶೇಕಡ 40ರಷ್ಟು ಪ್ರಕರಣಗಳು ಐದರಿಂದ ಹತ್ತು ವರ್ಷದವರೆಗೆ ಬಾಕಿ ಇರುವಂಥವು.
ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಗ್ರಿಡ್‌ನ ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಸುಮಾರು ಏಳು ಲಕ್ಷ ಪ್ರಕರಣಗಳು ಹತ್ತು ವರ್ಷಕ್ಕಿಂತ ಅಧಿಕ ಅವಧಿಯಿಂದಲೂ ಬಾಕಿ ಇವೆ. ಹತ್ತು ವರ್ಷಕ್ಕಿಂತ ಅಧಿಕ ಕಾಲದಿಂದ ಬಾಕಿ ಇರುವ ಪ್ರಕರಣಗಳಲ್ಲಿ ಶೇಕಡ 71ರಷ್ಟು ಕ್ರಿಮಿನಲ್ ಪ್ರಕರಣಗಳಾಗಿದ್ದು, ವಾಸ್ತವವಾಗಿ ನ್ಯಾಯಾಲಯಗಳು ಇವುಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕಿತ್ತು. ಇದೀಗ ನ್ಯಾಯಾಲಯ ಹಳೆ ಪ್ರಕರಣಗಳನ್ನು ಆದ್ಯತೆ ಮೇಲೆ ಇತ್ಯರ್ಥಪಡಿಸುತ್ತಿದೆ. ಉದಾಹರಣೆಗೆ ಹಳೆ ಬಾಕಿ ಪ್ರಕರಣಗಳಲ್ಲಿ ಎರಡನೆ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ ಕಳೆದ ತಿಂಗಳು ವಿಲೇವಾರಿಯಾದ 9 ಸಾವಿರ ಪ್ರಕರಣಗಳಲ್ಲಿ 6400 ಹಳೆಯ ಪ್ರಕರಣಗಳು ಹಾಗೂ 2500 ಸಿವಿಲ್ ಪ್ರಕರಣಗಳು.