ಈ ವರ್ಷ ಉಗ್ರರದಾಳಿಗೆ 35 ಸೈನಿಕರ ಬಲಿ,1,740 ಸೈನಿಕರಿಗೆ ಗಾಯ

Update: 2016-09-21 04:52 GMT

ಜಮ್ಮುವಿನ ಕಲೂಚಾಕ್‌ನಲ್ಲಿ 2002ರಲ್ಲಿ ನಡೆದ ದುರಂತದ ಬಳಿಕ ಅತ್ಯಂತ ಭೀಕರ ದಾಳಿ ಎಂದು ಹೇಳಲಾಗಿರುವ ಘಟನೆಯೊಂದರಲ್ಲಿ ಉತ್ತರ ಕಾಶ್ಮೀರದ ಉರಿ ಪಟ್ಟಣದಲ್ಲಿ ಉಗ್ರವಾದಿಗಳು ಸೇನಾ ಕೇಂದ್ರದ ಮೇಲೆ ದಾಳಿ ನಡೆಸಿ 17 ಯೋಧರನ್ನು ಕೊಂದು 19 ಯೋಧರನ್ನು ಗಾಯಗೊಳಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಕೆ.ವಿಕಾಸ್ ಜನಾರ್ದನ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಇದರೊಂದಿಗೆ ಘಟನೆಯಲ್ಲಿ ಬಲಿಯಾದ ಯೋಧರ ಸಂಖ್ಯೆ 18ಕ್ಕೇರಿದೆ.

ಈ ವರ್ಷಾರಂಭದಿಂದ ಭಾರತೀಯ ಸೇನೆಯು ತನ್ನ ಹಲವಾರು ವೀರ ಯೋಧರನ್ನು ಕಳೆದುಕೊಂಡಿದೆ. 2016ರ ಆರಂಭದಿಂದ ಇದುವರೆಗೆ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ ದಾಳಿಗೆ 35 ಯೋಧರು ಬಲಿಯಾಗಿದ್ದಾರೆ. ಆದಾಗ್ಯೂ, ಉರಿಯಲ್ಲಿ ನಡೆದ ದಾಳಿ ಅತ್ಯಂತ ವಿನಾಶಕಾರಿ ದಾಳಿಗಳಲ್ಲಿ ಒಂದು ಎಂದು ಉಲ್ಲೇಖಿಸಬಹುದಾಗಿದೆ.

2016ರಲ್ಲಿ ಸೇನೆಯ ಮೇಲೆ ನಡೆದ ಕೆಲವು ಪ್ರಮುಖ ದಾಳಿಗಳ ವಿವರ :

ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ:

    ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ವಾಯುಪಡೆ ನೆಲೆ ಮೇಲೆ ಜೈಶೆ ಮುಹಮ್ಮದ್(ಜೆಇಎಮ್) ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದ ಆರು ಮಂದಿ ಉಗ್ರರು ಮುಂಜಾನೆಗೂ ಮುನ್ನ ಆಕ್ರಮಣ ನಡೆಸಿ ತೀವ್ರ ಗುಂಡಿನ ದಾಳಿ ನಡೆಸಿದ್ದರು. ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯ 35 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ವಾಯುನೆಲೆಗೆ ಸೇನಾ ಸಮವಸ್ತ್ರ ಧರಿಸಿಕೊಂಡು ನುಗ್ಗಲು ಉಗ್ರರು ಯತ್ನಿಸಿದ್ದರು. ಈ ದಾಳಿಯಲ್ಲಿ ಎನ್‌ಎಸ್‌ಜಿಯ ಬಾಂಬ್ ನಿಷ್ಕ್ರಿಯ ದಳದ ಸದಸ್ಯ ಲೆ. ಕರ್ನಲ್ ನಿರಂಜನ್ ಸೇರಿದಂತೆ ಏಳು ಮಂದಿ ಯೋಧರು ಬಲಿಯಾಗಿದ್ದರು. ಭಾರತೀಯ ವಾಯುದಳದ ವಿಶೇಷ ರಕ್ಷಣಾ ಘಟಕದ ಓರ್ವ ಕಮಾಂಡೋ, ಇಬ್ಬರು ಭದ್ರತಾ ಸಿಬ್ಬಂದಿ ಕೂಡಾ ಪ್ರಾಣ ಕಳೆದುಕೊಂಡಿದ್ದರು.

 ಪಾಂಪೋರ್ ದಾಳಿ: ಶ್ರೀನಗರದ ಹೊರವಲಯದ, ಶ್ರೀನಗರ-ಜಮ್ಮು ಹೆದ್ದಾರಿಯ ಬಳಿಯ ಪಾಂಪೋರ್ ಎಂಬಲ್ಲಿ ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಲಷ್ಕರೆ ತಯ್ಯಿಬಾ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ 8 ಮಂದಿ ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದು, 24 ಯೋಧರು ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಮೂರು ಮಂದಿ ಯೋಧರು ಬಳಿಕ ಚಿಕಿತ್ಸೆ ಫಲಿಸದೆ ಮೃತರಾಗಿದ್ದರು.

  ಸದಾ ವಾಹನಗಳ ಸಂಚಾರವಿರುವ ಈ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿ ತರಬೇತಿ ಮುಗಿಸಿ ವಾಪಸಾಗುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯನ್ನು ಖಂಡಿಸಿದ್ದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಉಗ್ರರ ದಾಳಿಯಲ್ಲಿ ಯೋಧರ ಸಾವಿಗೆ ತೀವ್ರ ಸಂತಾಪ ಮತ್ತು ಮೃತಪಟ್ಟವರ ಕುಟುಂಬ ವರ್ಗಕ್ಕೆ ಸಹಾನುಭೂತಿ ಸೂಚಿಸಿದ್ದರು. ಹುತಾತ್ಮರಾದ 8 ಮಂದಿ ಸಿಆರ್‌ಪಿಎಫ್ ಯೋಧರಿಗೆ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಸೂಚಿಸಿದ್ದ ಪ್ರಧಾನಿ ಮೋದಿ, ಈ ಯೋಧರು ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಟ್ವೀಟ್ ಮಾಡಿದ್ದರು.

ಕಾಶ್ಮೀರದಲ್ಲಿ ಕ್ಷೋಭೆ:

ದಕ್ಷಿಣ ಕಾಶ್ಮೀರದಲ್ಲಿ ಜುಲೈ 8ರಂದು ಭದ್ರತಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬರ್ಹಾನ್ ವಾನಿ ಹತನಾಗಿದ್ದ. ಇದರ ಮರುದಿನದಿಂದ ಕಾಶ್ಮೀರದಲ್ಲಿ ಹಿಂಸೆ ಭುಗಿಲೆದ್ದಿದ್ದು ಇದುವರೆಗೆ ಇಬ್ಬರು ಯೋಧರು ಸೇರಿದಂತೆ ಒಟ್ಟು 81 ಮಂದಿ ಬಲಿಯಾಗಿದ್ದಾರೆ.

2016ರ ಜುಲೈ ತಿಂಗಳಿನಲ್ಲಿ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನೌಗಾಂವ್ ಸೆಕ್ಟರ್‌ನಲ್ಲಿ ಉಗ್ರರ ಗಡಿನುಸುಳುವಿಕೆ ಯತ್ನವನ್ನು ತಡೆಯುವ ಸಂದರ್ಭ ದಲ್ಲಿ ಇಬ್ಬರು ಯೋಧರು ಪ್ರಾಣತ್ಯಾಗ ಮಾಡಿದ್ದರು. ಮಳೆಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಗೃಹಸಚಿವ ರಾಜ್‌ನಾಥ್ ಸಿಂಗ್ ಕಾಶ್ಮೀರದ ಗಲಭೆಯಲ್ಲಿ 1,700 ನಾಗರಿಕರು ಹಾಗೂ 1,740 ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು. ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಪಾಕ್ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು ಮೂವರು ಯೋಧರು ಗಾಯಗೊಂಡಿದ್ದರು.

ಕಾಶ್ಮೀರದ ಪುಲ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು ಸತತ 73ನೆ ದಿನ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News