ನಿಯಂತ್ರಣ ಕಳೆದುಕೊಂಡ ಚೀನಾದ ಬಾಹ್ಯಾಕಾಶ ನಿಲ್ದಾಣ : ಭೂಮಿಗೆ ಅಪ್ಪಳಿಸಲು ದಿನಗಣನೆ
ಬೀಜಿಂಗ್, ಸೆ. 21: ಚೀನಾ ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಐದು ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾಯಿಸಿದ್ದ ಪ್ರಥಮ ಬಾಹ್ಯಾಕಾಶ ನಿಲ್ದಾಣ ‘ಟಿಯಾನ್‌ಗಾಂಗ್-1’ ಭೂಮಿಗೆ ಅಪ್ಪಳಿಸಲು ದಿನಗಣನೆ ನಡೆಸುತ್ತಿದೆ.
ಮುಂದಿನ ವರ್ಷ ಅದು ಭೂಮಿಗೆ ಅಪ್ಪಳಿಸುವಾಗ ಅದರ ಹೆಚ್ಚಿನ ಭಾಗಗಳು ಉರಿದು ಹೋಗಿರುತ್ತವೆ ಎಂದು ಚೀನಾದ ಬಾಹ್ಯಾಕಾಶ ಅಧಿಕಾರಿಗಳು ಹೇಳಿದ್ದಾರೆ. ಇದು ಬಾಹ್ಯಾಕಾಶ ನಿಲ್ದಾಣದ ಮೇಲೆ ಚೀನಾದ ವಿಜ್ಞಾನಿಗಳು ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬ ಭೀತಿಯನ್ನು ಹುಟ್ಟುಹಾಕಿದೆ ಎಂದು ‘ಗಾರ್ಡಿಯನ್’ ವರದಿ ಮಾಡಿದೆ.
ಚೀನಾವನ್ನು ಬಾಹ್ಯಾಕಾಶದ ಸೂಪರ್‌ಪವರ್ ಆಗಿಸುವ ಉದ್ದೇಶವನ್ನಿಟ್ಟುಕೊಂಡು ‘ಟಿಯಾನ್‌ಗಾಂಗ್-1’ ಬಾಹ್ಯಾಕಾಶ ನಿಲ್ದಾಣವನ್ನು 2011 ಸೆಪ್ಟಂಬರ್ 29ರಂದು ಬಾಹ್ಯಾಕಾಶಕ್ಕೆ ಉಡಾಯಿಸಲಾಗಿತ್ತು.
ಮಾನವರಹಿತ ಬಾಹ್ಯಾಕಾಶ ನಿಲ್ದಾಣವು ತನ್ನ ‘‘ಐತಿಹಾಸಿಕ ಕಾರ್ಯ’’ವನ್ನು ಯಶಸ್ವಿಯಾಗಿ ಪೂರೈಸಿದ್ದು, 2017ರ ಉತ್ತರಾರ್ಧದಲ್ಲಿ ಭೂಮಿಗೆ ಮರಳಲಿದೆ ಎಂಬುದಾಗಿ ಕಳೆದ ವಾರ ಚೀನಾದ ಅಧಿಕಾರಿಗಳು ಉಪಗ್ರಹ ಉಡಾವಣೆಯ ಸಂದರ್ಭದಲ್ಲಿ ಹೇಳಿದ್ದರು.
‘‘ನಮ್ಮ ಲೆಕ್ಕಾಚಾರ ಮತ್ತು ವಿಶ್ಲೇಷಣೆಯ ಪ್ರಕಾರ, ಬಾಹ್ಯಾಕಾಶ ಪ್ರಯೋಗಾಲಯದ ಹೆಚ್ಚಿನ ಭಾಗಗಳು ಪತನದ ವೇಳೆ ಉರಿದುಹೋಗಿರುತ್ತವೆ’’ ಎಂದಿದ್ದರು.
ಚೀನಾ ತನ್ನ ಮಹತ್ವಾಕಾಂಕ್ಷೆಯ 8,500 ಕೆಜಿ ತೂಗುವ 10.4 ಮೀಟರ್ ಉದ್ದದ ಬಾಹ್ಯಾಕಾಶ ನಿಲ್ದಾಣದ ಮೇಲೆ ಹತೋಟಿ ಕಳೆದುಕೊಂಡಿದೆ ಎಂಬ ಊಹಾಪೋಹಗಳು ಹಲವು ತಿಂಗಳುಗಳಿಂದ ಕೇಳಿಬರುತ್ತಿದ್ದವು. ಚೀನಾ ಅಧಿಕಾರಿಗಳ ಈ ಘೋಷಣೆಯು ಊಹಾಪೋಹಗಳನ್ನು ನಿಜವಾಗಿಸಿದೆ.
ಈ ಪ್ರಕರಣದಲ್ಲಿ, ಬಾಹ್ಯಾಕಾಶ ನಿಲ್ದಾಣದ ಅವಶೇಷಗಳು ಎಲ್ಲಿ ಬೀಳುತ್ತವೆ ಎಂದು ಮೊದಲೇ ನಿರೀಕ್ಷಿಸಲಾಗದು ಎಂದು ಹಾರ್ವರ್ಡ್ ಖಭೌತ ವಿಜ್ಞಾನಿ ಜೊನಾಥನ್ ಮೆಕ್‌ಡೊವೆಲ್ ಹೇಳುತ್ತಾರೆ.
‘‘ಈ ವಸ್ತುಗಳ ಮೇಲೆ ನಿಯಂತ್ರಣ ಹೊಂದುವುದು ಸಾಧ್ಯವಿಲ್ಲ. ಅವುಗಳು ಭೂಮಿಯ ವಾತಾವರಣ ಪ್ರವೇಶಿಸುವ ಎರಡು ದಿನಗಳ ಮೊದಲೂ ತಿಳಿಯಲು ಸಾಧ್ಯವಿಲ್ಲ. ಆರೇಳು ಗಂಟೆಗಳ ಮುಂಚಿತವಾಗಿ ತಿಳಿಯುವ ಸಾಧ್ಯತೆಯಿದೆ. ಜೊತೆಗೆ, ಅದು ಎಲ್ಲಿ ಬೀಳುತ್ತದೆ ಎಂಬುದನ್ನೂ ತಿಳಿಯಲು ಸಾಧ್ಯವಿಲ್ಲ’’ ಎಂದು ಅವರು ಹೇಳುತ್ತಾರೆ.
ವಾತಾವರಣದ ಸ್ಥಿತಿ ಗತಿಗಳಲ್ಲಿ ಆಗುವ ಸಣ್ಣ ಬದಲಾವಣೆಯೂ ಅವಶೇಷಗಳನ್ನು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ತಿರುಗಿಸಬಹುದು ಎಂದರು.
ಎಂಟು ಟನ್ ತೂಕದ ಬಾಹ್ಯಾಕಾಶ ನಿಲ್ದಾಣದ ಹೆಚ್ಚಿನ ಭಾಗಗಳು ಭೂಮಿಯ ವಾತಾವರಣದಲ್ಲಿ ಚಲಿಸುತ್ತಿರುವಾಗ ಕರಗಿ ಹೋಗುತ್ತವೆ, ಆದರೆ, ರಾಕೆಟ್ ಇಂಜಿನ್ ಮುಂತಾದ ಕೆಲವು ಭಾಗಗಳು ಪೂರ್ಣವಾಗಿ ಉರಿಯುವುದಿಲ್ಲ.
ಹಾಗಾಗಿ, ನೂರು ಕೆಜಿ ಭಾರದ ಅವಶೇಷಗಳು ಭೂಮಿಯ ಯಾವುದೇ ಭಾಗದಲ್ಲಿ ಕಾರು, ಬಸ್ಸು ಮುಂತಾದ ವಾಹನಗಳ ಮೇಲೆ, ಮನೆಗಳ ಮೇಲೆ ಅಪ್ಪಳಿಸಬಹುದಾಗಿದೆ ಎಂದು ಜೊನಾಥನ್ ಎಚ್ಚರಿಸುತ್ತಾರೆ.