×
Ad

ಪ್ರಶ್ನೆಗಳಿಗೆ ಕಾರಣವಾಗಿರುವ ಉರಿ ಉಗ್ರರ ತರಾತುರಿಯ ಅಂತ್ಯಸಂಸ್ಕಾರ

Update: 2016-09-21 19:55 IST

ಹೊಸದಿಲ್ಲಿ,ಸೆ.21: ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆಗೈದ ನಾಲ್ವರು ಶಂಕಿತ ಜೈಶ್ ಭಯೋತ್ಪಾದಕರ ಶವಗಳನ್ನು ತರಾತುರಿಯಲ್ಲಿ ದಫನ್ ಮಾಡಿರುವುದು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತವು ಕೆಲ ಕಾಲ ಕಾಯಬೇಕಾಗಿತ್ತು ಮತ್ತು ಶವಗಳನ್ನು ಮುಂದಿಟ್ಟುಕೊಂಡು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾಗಿತ್ತು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿವಾರ ಬೆಳಗಿನ ಜಾವ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ದಾಳಿಕೋರರು ವಿದೇಶಿ ಭಯೋತ್ಪಾದಕರಾಗಿದ್ದರು ಎಂದು ಸೇನೆಯು ಹೇಳಿತ್ತು.

ಹತ ಭಯೋತ್ಪಾದಕರ ಶವಗಳನ್ನು ಅವಸರದಲ್ಲಿ ದಫನ್ ಮಾಡಿರುವಂತಿದೆ. ಇಂತಹ ದಾಳಿಗಳ ಬಳಿಕ ಭಯೋತ್ಪಾದಕರ ಶವಗಳನ್ನು ನಿರ್ವಹಿಸುವ ಬಗ್ಗೆ ಸಮಂಜಸ ಸೂತ್ರವೊಂದು ಅಗತ್ಯವಾಗಿದೆ ಎಂದು ಯುದ್ಧತಜ್ಞ ಹಾಗೂ ನಿವೃತ್ತ ಏರ್ ವೈಸ್ ಮಾರ್ಷಲ್ ಕಪಿಲ್ ಕಾಕ್ ಹೇಳಿದರು.

ಉರಿ ದಾಳಿಕೋರರ ಮೃತದೇಹಗಳನ್ನು ಸೋಮವಾರ ಉತ್ತರ ಕಾಶ್ಮೀರದ ಸೇನಾ ಶಿಬಿರಕ್ಕೆ ಸಮೀಪದ ಕಬರಸ್ತಾನದಲ್ಲಿ ದಫನ್ ಮಾಡಲಾಗಿತ್ತು. ಸಾಮಾನ್ಯವಾಗಿ ವಿದೇಶಿ ಉಗ್ರರ ಶವಗಳನ್ನು ಉರಿಯಿಂದ 25 ಕಿ.ಮೀ. ದೂರ ನಿಯಂತ್ರಣ ರೇಖೆಗೆ ಸಮೀಪವಿರುವ ಕಿಚಾಮಾದಲ್ಲಿ ದಫನ್ ಮಾಡಲಾಗುತ್ತದೆ.

ಪಠಾಣಕೋಟ್ ದಾಳಿಕೋರರ ಶವಗಳನ್ನು ಕೆಲ ಕಾಲ ಸಂರಕ್ಷಿಸಿಟ್ಟಿದ್ದನ್ನು ಪರಿಗಣಿಸಿದರೆ ಉರಿ ದಾಳಿಕೋರರ ಅಂತ್ಯಸಂಸ್ಕಾರವನ್ನು ಮುಂದೂಡಬಹುದಿತ್ತು ಎಂದು ಕಾಕ್ ಹೇಳಿದರು.

ಪಠಾಣಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರ ಶವಗಳನ್ನು ನಾಲ್ಕು ತಿಂಗಳುಗಳ ಕಾಲ ಶವಾಗಾರದಲ್ಲಿ ಸಂರಕ್ಷಿಸಿಡಲಾಗಿತ್ತು. 2001ರ ಸಂಸತ್ ದಾಳಿ ವೇಳೆ ಹತರಾಗಿದ್ದ ಐವರು ಭಯೋತ್ಪಾದಕರ ಶವಗಳನ್ನು ಒಂದು ತಿಂಗಳ ಬಳಿಕ ದಫನ್ ಮಾಡಲಾಗಿತ್ತು. ಇವೆರಡೂ ಪ್ರಕರಣಗಳಲ್ಲಿ ಭಾರತವು ಶವಗಳನ್ನು ಸ್ವೀಕರಿಸುವಂತೆ ಪಾಕಿಸ್ತಾನಕ್ಕೆ ತಿಳಿಸಿತ್ತು ಮತ್ತು ಅದು ಉತ್ತರಿಸದಿದ್ದಾಗ ಅವುಗಳನ್ನು ದಫನ್ ಮಾಡಿತ್ತು.

2008ರ ಮುಂಬೈ ದಾಳಿಗಳ ಒಂಭತ್ತು ಲಷ್ಕರ್ ಭಯೋತ್ಪಾದಕರ ಶವಗಳನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ನಗರದ ಶವಾಗಾರದಲ್ಲಿರಿಸಲಾಗಿತ್ತು ಮತ್ತು ಬಳಿಕ ರಹಸ್ಯ ಸ್ಥಳದಲ್ಲಿ ಅವುಗಳನ್ನು ದಫನ್ ಮಾಡಲಾಗಿತ್ತು.

ಕಾರ್ಯಾಚರಣೆಯೊಂದು ಪೂರ್ಣಗೊಂಡ ಬಳಿಕ ಎಫ್‌ಐಆರ್ ಸಲ್ಲಿಸಿ ಶವಗಳನ್ನು ಪೊಲೀಸರಿಗೆ ಹಸ್ತಾಂತರಿಸುವುದು ವಾಡಿಕೆಯ ಕ್ರಮವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಅಗತ್ಯ ವಿಧಿವಿಜ್ಞಾನ ಸಾಕ್ಷಗಳನ್ನು ಸಂಗ್ರಹಿಸಿತ್ತು. ಹೀಗಾಗಿ ಶವ ಗಳನ್ನು ದಫನ್ ಮಾಡಿದ್ದರಲ್ಲಿ ವಿಶೇಷವೇನೂ ಇಲ್ಲ ಎಂದು ಸೇನಾಧಿಕಾರಿಯೋರ್ವರು ತಿಳಿಸಿದರು.

ಜಿನೆವಾ ನಿರ್ಣಯದಂತೆ ಯೋಧರ ಶವಗಳನ್ನು ಮಾತ್ರ ಮರಳಿಸಬೇಕಾಗುತ್ತದೆ. ಅಂತ್ಯ ಸಂಸ್ಕಾರ ಕಾರ್ಯ ನೆರವೇರಿಸಿದ ಪೊಲೀಸರು ಅಗತ್ಯವಾದರೆ ಶವಗಳನ್ನು ಹೊರತೆಗೆಯಲು ದಫನ್ ಮಾಡಲಾಗಿರುವ ಸ್ಥಳವನ್ನು ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ನಾರ್ದರ್ನ್ ಆರ್ಮಿ ಕಮಾಂಡರ್ ಲೆಜಬಿ.ಎಸ್.ಜಸ್ವಾಲ್ ತಿಳಿಸಿದರು.

ಶವಗಳು ಸುಟ್ಟು ಕರಕಲಾಗಿದ್ದವು,ಅಲ್ಲದೆ ವಾಸನೆಯೂ ಬರತೊಡಗಿತ್ತು. ಉರಿಯಲ್ಲಿ ಅವುಗಳನ್ನು ಕಾಪಿಡುವ ವ್ಯವಸ್ಥೆಯೂ ಇರಲಿಲ್ಲ. ಹೀಗಾಗಿ ಅವುಗಳನ್ನು ದಫನ್ ಮಾಡಲು ಸ್ಥಳೀಯ ವಕ್ಫ್ ಸಂಸ್ಥೆಗೆ ಒಪ್ಪಿಸಿದ್ದೆವು ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News