×
Ad

25 ವರ್ಷಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಿಕೊಟ್ಟ ‘ಫೇಸ್ ಬುಕ್’

Update: 2016-09-21 19:58 IST

ಇದೊಂದು ಅಪರೂಪದ ಘಟನೆ. 25 ವರ್ಷದ ಹಿಂದೆ ವಿಟ್ಲ ಸಮೀಪದ ಬುಳೇರಿಕಟ್ಟೆಯಿಂದ ಮನೆ ಬಿಟ್ಟು ಹೋದ ಟೈಲರ್ ವೃತ್ತಿಯ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬೆಂಗಳೂರು ಹನುಮಂತನಗರ ಪೊಲೀಸರ ಕೈಗೆ ಸಿಗುತ್ತಾರೆ. ಇವರ ಸಂಬಂಧ ಪೋಣಿಸಲು ಸಹಕಾರಿಯಾದದ್ದು ಫೇಸ್ ಬುಕ್. ಆದರೆ, ವ್ಯಕ್ತಿಯ ಪರಿಚಯ ಸಿಕ್ಕಿದ್ದು 28 ವರ್ಷದ ಹಿಂದೆ ಮೊದಲ ಬಾರಿ ಪ್ಯಾಂಟ್ ಹೊಲಿಸಿಕೊಂಡ ಅಂದಿನ ವಿದ್ಯಾರ್ಥಿಗೆ. ಈ ಅನಾಮಿಕ ವ್ಯಕ್ತಿ ಮನೆಯವರ ಕೈಗೆ ಕೊನೆಗೂ ಜೀವಂತವಾಗಿ ಸಿಕ್ಕಿಲ್ಲ. ಏನಿದು ಒಗಟು ಒಗಟಾಗಿರುವ ಘಟನೆ..? ಮುಂದೆ ನೀವೇ ಓದಿ.

ಸೆಪ್ಟಂಬರ್ 16 ರಂದು "ಬೆಂಗಳೂರು ಸಿಟಿ ಪೊಲೀಸ್" ಎಂಬ ಫೇಸ್ ಬುಕ್ ಪುಟದಲ್ಲಿ ಒಂದು ಪಾನ್ ಕಾರ್ಡ್ ಇಮೇಜ್ ನೊಂದಿಗೆ ಪೋಸ್ಟ್ ಹಾಕಲಾಗಿತ್ತು. ಈ ಪಾನ್ ಕಾರ್ಡ್ ಚಿತ್ರದಲ್ಲಿ ಕಾಣುವ ವೈ. ಜಯರಾಮ ಭಟ್ ಎಂಬವರು ಪ್ರಜ್ಞೆ ತಪ್ಪಿರುವ ಸ್ಥಿತಿಯಲ್ಲಿ ಬೆಂಗಳೂರು ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 50 ಫೀಟ್ ರಸ್ತೆಯಲ್ಲಿ ಪತ್ತೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ದಯವಿಟ್ಟು ಈ ಪೋಸ್ಟ್ ನ್ನು ಶೇರ್ ಮಾಡಿ. ಕುಟುಂಬಿಕರನ್ನು ಹುಡುಕಲು ನೆರವಾಗಿ ಅಂತ ಪೊಲೀಸರು ವಿನಂತಿಸಿದ್ದರು. ಆ ಫೋಸ್ಟ್ ಫೇಸ್ ಬುಕ್ ಹಾಗೂ ವಾಟ್ಸಪ್ ನಲ್ಲಿ ವೈರಲ್ ಆಯಿತು.

ತನ್ನ ವಾಟ್ಸಪ್ ಗೆ ಬಂದ ಈ ಮೇಲಿನ ಪೋಸ್ಟ್ ನೋಡಿ ಅನುಮಾನಗೊಂಡ ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ಗಣೇಶ್ ಕಂಬಾರ್ ಅವರು ಸ್ನೇಹಿತ ಕೇಶವ ಭಟ್ ಜೊತೆಗೆ ಹನುಮಂತ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಆಸ್ಪತ್ರೆಗೆ ತೆರಳುತ್ತಾರೆ. ಗಣೇಶ್ ಕಂಬಾರ್ ಸಂಶಯ ನಿಜವಾಗಿತ್ತು. ಆಸ್ಪತ್ರೆಯಲ್ಲಿ ಪ್ರಜ್ಞಾಹೀನರಾಗಿ ಮಲಗಿದ್ದವರು ಗಣೇಶ್ ಅವರ ಹುಟ್ಟೂರು ಗ್ರಾಮದ ಟೈಲರ್ ವೃತ್ತಿಯ ವೈ. ಜಯರಾಮ ಭಟ್ ಆಗಿದ್ದರು.

ಗಣೇಶ್ ಕಂಬಾರ್ ವಿಟ್ಲ ಸಮೀಪದ ಕರ್ನಾಟಕ-ಕೇರಳ ಗಡಿನಾಡು ಬಲ್ನಾಡು ಗ್ರಾಮದ ಬುಳೇರಿಕಟ್ಟೆ ನಿವಾಸಿ. ಅವರದೇ ಊರಿನ ಜನಾರ್ದನ ಭಟ್ ಪುತ್ರ ವೈ. ಜಯರಾಮ ಭಟ್ ಬುಳೇರಿಕಟ್ಟೆಯಲ್ಲಿ ಟೈಲರ್ ಆಗಿದ್ದರು. ಮಕ್ಕಳಾಗಿದ್ದಾಗ ಚಡ್ಡಿ ಹಾಕುತ್ತಿದ್ದ ಗಣೇಶ್ ಕಂಬಾರ್ 10 ನೇ ತರಗತಿ ಮುಗಿಸಿ ಪಿಯುಸಿ ವಿದ್ಯಾರ್ಜನೆಗೆ ಪಾದಾರ್ಪಣೆ ಮಾಡುವಾಗ ಪ್ರಥಮವಾಗಿ ಪ್ಯಾಂಟು ಹಾಕಿದ್ದರು. 28 ವರ್ಷದ ಹಿಂದಿನ ಕಥೆಯಿದು. ಗಣೇಶ್ ಅದೇ ಮೊದಲ ಬಾರಿ ಹಾಕುವ ಪ್ಯಾಂಟನ್ನು ಹೊಲಿದುಕೊಟ್ಟವರು ಅವತ್ತಿನ ಟೈಲರ್ ಜಯರಾಮ ಭಟ್. ಆವಾಗ ಬುಳೇರಿಕಟ್ಟೆ ಪ್ರದೇಶದಲ್ಲಿ ಇವರೊಬ್ಬರೇ ಟೈಲರ್. ಗಣೇಶ್ ಗೆ ಪ್ರಸ್ತುತ 45 ರ ಹರೆಯವಾದರೆ ಜಯರಾಮ ಭಟ್ ಗೆ 52 ವರ್ಷ.

ಜಯರಾಮ ಭಟ್ ಮದುವೆಯಾದ ಬಳಿಕ ಬುಳೇರಿಕಟ್ಟೆಯ ಮನೆಯಿಂದ ಕಾಣೆಯಾಗಿದ್ದರು. ಕಳೆದ 25 ವರ್ಷದಿಂದ ಅವರ ಮತ್ತು ಕುಟುಂಬದ ಕೊಂಡಿ ಕಳಚಿತ್ತು. ಪ್ರಸ್ತುತ ಜಯರಾಮ ಭಟ್ ಅವರ ತಂದೆ ಮತ್ತು ಹಿರಿಯ ಸಹೋದರ ನಿಧನರಾಗಿದ್ದಾರೆ. ಈಗಿರುವ ಎಳೆಯ ಸಹೋದರ ಚಂದ್ರಶೇಖರ ಭಟ್ ರಿಗೆ ಜಯರಾಮ ಭಟ್ ಆಸ್ಪತ್ರೆಯಲ್ಲಿರುವುದನ್ನು ಗಣೇಶ್ ಕಂಬಾರ್ ಫೋನ್ ಮೂಲಕ ತಿಳಿಸುತ್ತಾರೆ. ವಿಷಯ ತಿಳಿದು ಕಳೆದ ಶನಿವಾರ ಬೆಂಗಳೂರಿಗೆ ಬಂದ ತಮ್ಮ 28 ವರ್ಷಗಳ ಹಿಂದೆ ಕಳೆದುಹೋದ ಜಯರಾಮ ಭಟ್ ಅವರನ್ನು ಆಸ್ಪತ್ರೆಯಲ್ಲಿ ಸಂಪರ್ಕಿಸುತ್ತಾರಾದರೂ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾರೆ. 25 ವರ್ಷದ ಬಳಿಕ ಕುಟುಂಬದ ಸದಸ್ಯ ಸಿಕ್ಕಿರುವ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಜಯರಾಮ ಭಟ್ ಕೊನೆಗೂ ದೇವರ ವಿಧಿಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆಂದು ಹನಮಂತನಗರ ಪೊಲೀಸರು ತಿಳಿಸಿದ್ದಾರೆ.

"50 ಫೀಟ್ ರಸ್ತೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾರೆಂದು ಗುರುವಾರ ಸಂಜೆ 4.30 ಕ್ಕೆ ಠಾಣೆಗೆ ಕರೆಬಂತು. ತಕ್ಷಣ ನಾವಲ್ಲಿಗೆ ತೆರಳಿ ಆ ವ್ಯಕ್ತಿಯನ್ನು ಬನ್ನೇರುಘಟ್ಟ ಆರ್.ವಿ.ಯಂ. ಆಸ್ಪತ್ರೆಗೆ ದಾಖಲಿಸಿದೆವು. ವ್ಯಕ್ತಿಯ ಕಿಸೆಯಲ್ಲಿ  ಪಾನ್ ಕಾರ್ಡ್ ಬಿಟ್ಟು ಬೇರೇನೂ ಇರಲಿಲ್ಲ. ಅದನ್ನು "ಬೆಂಗಳೂರು ಸಿಟಿ ಪೊಲೀಸ್" ಫೇಸ್ಬುಕ್ ಪುಟದಲ್ಲಿ ಹಾಕಲಾಗಿತ್ತು. ಶುಕ್ರವಾರ ಇಬ್ಬರು ಪರಿಚಯಸ್ಥರೆಂದು ಹೇಳಿ ಠಾಣೆಗೆ ಬಂದಿದ್ದರು. ನಂತರ ಮನೆಯವರು ಶನಿವಾರ ಬಂದರು. ಕಳೆದೆರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು" ಎಂದು ಹನುಮಂತನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ದಿಲೀಪ್ ಕುಮಾರ್ ಕೆ.ಎಚ್. ತಿಳಿಸಿದ್ದಾರೆ.

ಯುವಕನಾಗಿದ್ದಾಗ ಮನೆಬಿಟ್ಟು ಹೋಗಿದ್ದ ಜಯರಾಮ ಭಟ್ 25 ವರ್ಷಗಳ ನಂತರ ಮನೆಯವರಿಗೆ ಸಿಕ್ಕರೂ ಆ ಸಂಭ್ರಮ ಕ್ಷಣಿಕವಾಗಿತ್ತೇ ಹೊರತು ಸಂತೋಷ ಹೆಚ್ಚು ಸಮಯ ಮನೆ ಮಾಡದೇ ದುರಂತ ಅಂತ್ಯ ಕಂಡಿತು. ಆದರೂ ಫೇಸ್ ಬುಕ್ ಮೂಲಕ ಪತ್ತೆಯಾದ ಕಾರಣ ಸಾಮಾಜಿಕ ಜಾಲದ ಕಾರ್ಯವೈಖರಿಗೆ ಹ್ಯಾಟ್ಸಪ್ ಅನ್ನಲೇಬೇಕು.

-ರಶೀದ್ ವಿಟ್ಲ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News