ಮೆವಾತ್ ಅವಳಿ ಕೊಲೆ-ಅತ್ಯಾಚಾರ ಪ್ರಕರಣ ಸಿಬಿಐಗೆ ಹಸ್ತಾಂತರ
ಮೆವಾತ್, ಸೆ.21: ಹರ್ಯಾಣ ಸರಕಾರವು ಮೆವಾತ್ ಅವಳಿ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮಂಗಳವಾರ ಸಿಬಿಐಗೆ ಒಪ್ಪಿಸಿದೆ.
ಸಂತ್ರಸ್ತರ ಬೇಡಿಕೆ ಹಾಗೂ ಭಾವನೆಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಮ್ ನಿವಾಸ್ ತಿಳಿಸಿದ್ದಾರೆ.
ಸರಕಾರವು ನ್ಯಾಯಕ್ಕಾಗಿ ಹೋರಾಡಲು ಬದ್ಧವಾಗಿದೆ. ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಆರೋಪವಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ತಪ್ಪಿತಸ್ಥರನ್ನು ಕಟಕಟೆಗೆ ತರುವ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದೇವೆಂದು ಅವರು ಹೇಳಿದ್ದಾರೆ. ಮನೇಸರ್-ಪಲ್ವಾ ಎಕ್ಸ್‌ಪ್ರೆಸ್ ವೇಗೆ ಸಮೀಪದ ಮನೆಯೊಂದರಲ್ಲಿ ತಂದೆ-ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ರಾತ್ರಿ ಮಲಗಿದ್ದ ವೇಳೆ, ಆ.25ರ ನಸುಕಿನಲ್ಲಿ ಮನೆಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು ಮೊದಲ ಹೆತ್ತವರನ್ನು ಕೊಂದು ಹುಡುಗಿಯರಿಬ್ಬರ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಮನೆಯೊಳಗೆ ದಾಂಧಲೆ ನಡೆಸಿದ ಅವರು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದರು.