×
Ad

ಹತ್ಯೆ ಆರೋಪಿ ಆರ್ಜೆಡಿ ನಾಯಕನ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಧೀಶನ ಎತ್ತಂಗಡಿ

Update: 2016-09-22 00:23 IST

ಞಪಾಟ್ನಾ, ಸೆ.21: ಆರ್‌ಜೆಡಿ ಮುಖಂಡ ಮುಹಮ್ಮದ್ ಶಹಾಬುದೀನ್ ಅವರನ್ನು 2004ರ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದ ಸಿವಾನ್ ಕೋರ್ಟ್‌ನ ನ್ಯಾಯಾಧೀಶ ಅಜಯ್ ಕುಮಾರ್ ಶ್ರೀವಾಸ್ತವ ಅವರನ್ನು 9 ತಿಂಗಳ ಬಳಿಕ ಕೋರಿಕೆಯ ಮೇಲೆ ಪಾಟ್ನಾಕ್ಕೆ ವರ್ಗಾಯಿಸಲಾಗಿದ್ದು, ಈ ಪ್ರಕರಣ ಇದೀಗ ಜಾಮೀನು ಮೇಲೆ ಬಿಡುಗಡೆಗೊಂಡಿರುವ ಮಾಜಿ ಸಂಸದ ಶಹಾಬುದೀನ್ ಕುರಿತಂತೆ ರಾಜ್ಯ ಸರಕಾರದ ಮೃದು ಧೋರಣೆ ತಳೆದಿದೆಯೇ ಎಂಬ ಸಂಶಯ ಮೂಡಿಸಿದೆ.

  ಈ ಕುರಿತ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತುಕೊಂಡ ಆಡಳಿತಾರೂಢ ಜನತಾದಳ (ಸಂಯುಕ್ತ), ಈ ಆರೋಪವನ್ನು ತಳ್ಳಿಹಾಕಿದೆ. ಭಾಗಲ್‌ಪುರದಲ್ಲಿ ಜೈಲಿನಲ್ಲಿರುವ ಶಹಾಬುದೀನ್ ಜಾಮೀನಿನ ಮೇಲೆ ಬಿಡುಗಡೆಗೊಳ್ಳುವ ಮುಂದಿನ ದಿನ ತನ್ನನ್ನು ವರ್ಗಾಯಿಸಿರುವ ಬಗ್ಗೆ ಶ್ರೀವಾಸ್ತವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶ್ರೀವಾಸ್ತವ ಅವರು ಪಾಟ್ನಾ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾಗಿ ಬುಧವಾರ ಸೇರ್ಪಡೆಯಾಗುವ ನಿರೀಕ್ಷೆಯಿದೆ.

            30ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಹಾಬುದೀನ್ 11 ವರ್ಷಗಳ ಸೆರೆವಾಸದ ಬಳಿಕ ಸೆ.10ರಂದು ಭಾಗಲ್‌ಪುರ ಜೈಲಿನಿಂದ ಬಿಡುಗಡೆಗೊಂಡಿದ್ದ. ಸಿವಾನ್‌ನಲ್ಲಿ ಆ್ಯಸಿಡ್ ಎರಚಿದ್ದ ಪ್ರಕರಣದ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿದ್ದ ರಾಜೀವ್ ರೋಶನ್ ಎಂಬಾತನನ್ನು ಕೊಲೆಗೈದ ಆರೋಪದ ಮೇಲೆ ಬಂಧಿತನಾಗಿದ್ದ ಶಹಾಬುದೀನ್‌ನನ್ನು ಸಾಕ್ಷಾಧಾರದ ಕೊರತೆಯ ಕಾರಣ ಜೆ.ಎಂ.ಶರ್ಮ ಅವರಿದ್ದ ಹೈಕೋರ್ಟ್ ಪೀಠವು ಸೆ.7ರಂದು ಜಾಮೀನು ಮೇಲೆ ಬಿಡುಗಡೆ ಮಾಡಿತ್ತು. ‘ಆ್ಯಸಿಡ್ ಸ್ನಾನ ಪ್ರಕರಣ’ ಎಂದೇ ಕರೆಯಲಾಗಿದ್ದ 2004ರ ಡಿಸೆಂಬರ್ 1ರಂದು ನಡೆದಿದ್ದ ಈ ಪ್ರಕರಣದಲ್ಲಿ ರಾಜೀವ್ ರೋಶನ್‌ನ ಇಬ್ಬರು ಸೋದರರಾದ ಗಿರೀಶ್ ರಾಜ್ ಮತ್ತು ಸತೀಶ್ ರಾಜ್‌ರನ್ನು ಆ್ಯಸಿಡ್ ಸುರಿದು ಹತ್ಯೆ ಮಾಡಲಾಗಿತ್ತು. ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವಿಶ್ಲೇಷಿಸಿದ್ದ ನ್ಯಾಯಮೂರ್ತಿ ಶ್ರೀವಾಸ್ತವ ಅವರು, ಶಹಾಬುದೀನ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರು. ಶಹಾಬುದೀನ್‌ಗೆ ಜಾಮೀನು ದೊರೆತ ಎರಡು ದಿನದ ಬಳಿಕ ಶ್ರೀವಾಸ್ತವ ಅವರನ್ನು ಪಾಟ್ನಾಕ್ಕೆ ವರ್ಗಾವಣೆ ಮಾಡಲಾಗಿದೆ. ಶ್ರೀವಾಸ್ತವ ಅವರು ವರ್ಗಾವಣೆ ಕೋರಿ ಪತ್ರ ಬರೆದ ಕಾರಣ ಅವರನ್ನು ಪಾಟ್ನಾ ನ್ಯಾಯಾಲಯದಲ್ಲಿ ಅದೇ ಹುದ್ದೆಗೆ ವರ್ಗಾಯಿಸಲಾಗಿದೆ. ಇದೊಂದು ಮಾಮೂಲಿ ವರ್ಗಾವಣೆಯಾಗಿದೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News