×
Ad

ಉರಿ ಸೇನಾ ನೆಲೆ ಸಂಭಾವ್ಯ ದಾಳಿ ಬಗ್ಗೆ ಮೂರು ದಿನ ಮೊದಲೇ ಸೇನೆಗೆ ಮಾಹಿತಿಯಿತ್ತು!

Update: 2016-09-22 08:46 IST

ಹೊಸದಿಲ್ಲಿ, ಸೆ.22: ಉರಿ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯಷ್ಟೇ ಭೀಕರ ಮಾಹಿತಿಯೊಂದು ಇದೀಗ ಸ್ಫೋಟಗೊಂಡಿದೆ. ಎಂಟು ಮಂದಿ ಲಷ್ಕರ್ ಎ ತೊಯ್ಬೋ ಉಗ್ರರು ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನ ಬದಿಯಲ್ಲಿ, ಗಡಿಯೊಳಗೆ ಉರಿ ಪ್ರದೇಶಕ್ಕೆ ನುಸುಳಿ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ನು ದಾಳಿ ನಡೆಯುವ ಮೂರು ದಿನ ಮುಂಚಿತವಾಗಿಯೇ ಅಂದರೆ ಸೆಪ್ಟೆಂಬರ್ 15ಕ್ಕೆ ಗುಪ್ತಚರ ವಿಭಾಗ ನೀಡಿತ್ತು ಎನ್ನುವ ಅಂಶ ಇದೀಗ ಬಹಿರಂಗವಾಗಿದೆ.
ಉರಿ ಪರ್ವತದಲ್ಲಿ ಎಂಟು ಮಂದಿ ಎಲ್‌ಇಟಿ ಉಗ್ರರು ಹಾಗೂ ವಿಭಿನ್ನ ಭಯೋತ್ಪಾದಕ ಸಂಘಟನೆಗಳ ಮತ್ತೊಂದು ಗುಂಪು ಆಗಸ್ಟ್ 28ರಿಂದಲೂ ಅಡಗಿದ್ದನ್ನು ಗುಪ್ತಚರ ವಿಭಾಗ ಪತ್ತೆ ಮಾಡಿತ್ತು. ಎಲ್ಲ ಏಜೆನ್ಸಿಗಳ ಜತೆ ಮತ್ತು ಸೇನೆ ಸೇರಿದಂತೆ ಭದ್ರತಾ ಪಡೆಗಳ ಜತೆ ಈ ಮಾಹಿತಿಯನ್ನು ಸೆಪ್ಟೆಂಬರ್ 15ರಂದು ಹಂಚಿಕೊಳ್ಳಲಾಗಿತ್ತು. ನಿರ್ದಿಷ್ಟವಾಗಿ ಉಗ್ರರು ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿತ್ತು ಎಂದು ಗುಪ್ತಚರ ಅಧಿಕಾರಿಯೊಬ್ಬರು ವಿವರಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದು ನಿಜವಾಗಿದ್ದರೆ, ಸೂಕ್ತ ಮಾಹಿತಿ ಇದ್ದರೂ ನಾಲ್ವರು ಉಗ್ರರು ನಿಷೇಧಿತ ಪ್ರವೇಶಕ್ಕೆ ನುಸುಳುವುದನ್ನು ತಡೆಯುವಲ್ಲಿ ಸೇನೆ ವಿಫಲವಾಗಿದೆ ಎಂದೇ ಪರಿಗಣಿಸಬೇಕಾಗುತ್ತದೆ. ಜಮ್ಮು ಕಾಶ್ಮೀರದ ಸೂಕ್ಷ್ಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದು ಗಂಭೀರ ಲೋಪ ಎನ್ನಬಹುದಾಗಿದೆ.
ಈ ಮಧ್ಯೆ ಗುಪ್ತಚರ ವಿಭಾಗ, ಜಮ್ಮು ಕಾಶ್ಮೀರದಲ್ಲಿರುವ ಭದ್ರತಾ ಪಡೆಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಅಧಿವೇಶದ ಬಳಿಕ ನೂರಾರು ಮಂದಿ ಉಗ್ರರನ್ನು ಗಡಿಯೊಳಕ್ಕೆ ನುಸುಳಿಸಲು ಪಾಕಿಸ್ತಾನ ಸಂಚು ರೂಪಿಸಿದೆ ಎಂದು ಹೇಳಿದೆ. ಮಹತ್ವದ ಅಂಶವೆಂದರೆ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಕೂಡಾ, "ಬಹುಶಃ ಆ ದುರದೃಷ್ಟಕರ ರಾತ್ರಿ ಯಾವುದೋ ಲೋಪ ಸಂಭವಿಸಿರಬೇಕು" ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News