×
Ad

ಹಸಿವಿನಿಂದ ಸಾವು: ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ

Update: 2016-09-22 08:51 IST
ಸಾಂದರ್ಭಿಕ ಚಿತ್ರ 

ಮುಂಬೈ, ಸೆ.22: ಮಹಾರಾಷ್ಟ್ರದ ಬುಡಕಟ್ಟು ಪ್ರದೇಶದ ಪಾಲ್ಗರ್ ಸೇರಿದಂತೆ 11 ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹಾಗೂ ಹಸಿವಿನಿಂದ ಜನ ಸಾಯುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಡಲು ಕಾರಣವಾದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಪರಿಸ್ಥಿತಿ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಅಪರಾಧ ಕೃತ್ಯ ಎಂದು ಚಾಟಿಯೇಟು ನೀಡಿದೆ. "ಇದು ನಿಜಕ್ಕೂ ಆಘಾತಕಾರಿ" ಎಂದು ನ್ಯಾಯಮೂರ್ತಿ ವಿದ್ಯಾಸಾಗರ ಕಾನಡೆ ಹಾಗೂ ನ್ಯಾಯಮೂರ್ತಿ ಸ್ವಪ್ನಾ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ಅರ್ಜಿದಾರ ಸಂಸ್ಥೆಯಾದ ಕಸ್ತೂರ್ಬಾ ಆದಿವಾಸಿ ಮಹಿಳಾ ಸಂಘದ ಪರವಾಗಿ ವಾದ ಮಂಡಿಸುವ ವೇಳೆ ವಕೀಲ ಉದಯ ವರೂಂಜಿಕರ್, "2015-16ನೆ ಹಣಾಸು ವರ್ಷದಲ್ಲಿ ಸುಮಾರು 18 ಸಾವಿರ ಮಕ್ಕಳು ರಾಜ್ಯದಲ್ಲಿ ಅಪೌಷ್ಟಿಕತೆ ಹಾಗೂ ಹಸಿವಿನಿಂದ ಮೃತಪಟ್ಟಿದ್ದಾರೆ" ಎಂದು ತಿಳಿಸಿದರು. ಈ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠ ವಿಚಾರಣೆ ನಡೆಸುತ್ತಿದೆ.

ಬುಡಕಟ್ಟು ಅಭಿವೃದ್ಧಿಗಾಗಿ ದೊಡ್ಡ ಮೊತ್ತದ ನಿಧಿ ನಿಗದಿಪಡಿಸಿದ್ದರೂ, ಅಪೌಷ್ಟಿಕತೆಯಿಂದ ಸಾವು ಸಂಭವಿಸುತ್ತಿವೆ. "ಇದು ಅಪರಾಧಕ್ಕೆ ಸಮಾನವಾದ ನಿರ್ಲಕ್ಷ್ಯ. ಈ ನಿರ್ಲಕ್ಷ್ಯದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಪ್ರತಿ ವರ್ಷವೂ ಸಾಯುತ್ತಿದ್ದಾರೆ" ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ 2010ರ ಮೇ ಬಳಿಕ ನೀಡಿದ ಯಾವ ಆದೇಶಗಳನ್ನು ಕೂಡಾ ಸರ್ಕಾರ ಪಾಲಿಸುತ್ತಿಲ್ಲ ಎಂದೂ ಸರ್ಕಾರಕ್ಕೆ ಮಂಗಳಾರತಿ ಮಾಡಿದೆ. "ನಮಗೆ ತೀವ್ರ ಹತಾಶೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಖ್ಯ ಕಾರ್ಯದರ್ಶಿಯನ್ನು ಇಲ್ಲಿಗೆ ಕರೆಸಬೇಕಾಗುತ್ತದೆ. ಹಾಗೆ ಮಾಡಿದರೆ ಮಾತ್ರ ಇಡೀ ವ್ಯವಸ್ಥೆ ಕೆಲಸ ಮಾಡಬಹುದು" ಎಂದು ನ್ಯಾಯಮೂರ್ತಿ ಕಾನಡೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News