ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸುವುದನ್ನು ನಿಲ್ಲಿಸದವರು ಇದನ್ನೊಮ್ಮೆ ಓದಿ
ಹೊಸದಿಲ್ಲಿ, ಸೆ.22: ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಫೋನ್ ಬಳಸಿದರೆ ಪ್ರಸ್ತುತ ಇರುವ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 184ರ ಅನ್ವಯ, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಿ ಸಿಕ್ಕಿಬಿದ್ದರೆ, 1,000 ರೂಪಾಯಿ ದಂಡ ಹಾಗೂ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ, ಇತರರ ಸಾವಿಗೆ ಕಾರಣರಾದರೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸುವುದನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದ ವರ್ಷದ ಬಳಿಕ ಇದೀಗ ಈ ಸೂಚನೆ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಹಾಗೂ ಸಿ.ನಾಗಪ್ಪ ಅವರನ್ನೊಳಗೊಂಡ ಪೀಠ, ಈ ಸಂಬಂಧ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ "ಕೆಲವರು ವಾಹನ ಚಲಾವಣೆ ಮಾಡುವ ವೇಳೆ ಫೋನನ್ನು ಕಿವಿಯಲ್ಲೇ ಇಟ್ಟುಕೊಂಡಿರುತ್ತಾರೆ. ಇದು ಆಘಾತಕಾರಿ ಪರಿಣಾಮಗಳಿಗೆ ಕಾರಣವಾಗುತ್ತದೆ" ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, "ಎರಡನೆ ಬಾರಿ ಇದು ಪುನರಾವರ್ತನೆಯಾದರೆ, ಎರಡು ವರ್ಷ ಜೈಲು ಹಾಗೂ 2,000 ರೂಪಾಯಿ ದಂಡ ವಿಧಿಸಿದರೆ ಸಾಕೇ" ಎಂದು ಪ್ರಶ್ನಿಸಿದರು. ಇದಕ್ಕೆ ಅಟಾರ್ನಿ ಜನರಲ್, ಸಾಲದು ಎಂಬ ಉತ್ತರ ನೀಡಿದರು.
ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಕಠಿಣ ಶಿಕ್ಷೆ ವಿಧಿಸುವ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ ನ್ಯಾಯಮೂರ್ತಿಗಳು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದರು.