×
Ad

ಕಾವೇರಿ ಸಮಸ್ಯೆ: ಉಮಾಭಾರತಿ ಭೇಟಿಯಾದ ಸಿಎಂ

Update: 2016-09-22 16:34 IST

ಹೊಸದಿಲ್ಲಿ/ಬೆಂಗಳೂರು, ಸೆ.22: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಜೊತೆ ಮಾತುಕತೆ ನಡೆಸಿದರು.
ಗುರುವಾರ ಹೊಸದಿಲ್ಲಿಯಲ್ಲಿ ಉಮಾಭಾರತಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಉಭಯ ರಾಜ್ಯಗಳ ಪೈಕಿ ಯಾರೂ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿರಲಿಲ್ಲ. ಆದರೂ, ಈ ಸಂಬಂಧ ಆದೇಶ ನೀಡಲಾಗಿದೆ ಎಂದರು.
ಸೆ.27ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್, ಕಾವೇರಿ ನಿರ್ವಹಣೆ ಮಂಡಳಿ ರಚನೆ ಸಂಬಂಧ ನೀಡಿರುವ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಉಮಾಭಾರತಿಗೆ ಮನವಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸೆ.21 ರಿಂದ 27ರವರೆಗೆ ಪ್ರತಿನಿತ್ಯ ಆರು ಸಾವಿರ ಕ್ಯೂಸೆಕ್ ನೀರನ್ನು ತಮಿಳು ನಾಡಿಗೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡುವುದು ಕಷ್ಟಕರ. ಈ ಹಿಂದೆ 12 ಸಾವಿರ ಕ್ಯೂಸೆಕ್ ನೀರನ್ನು 14 ದಿನಗಳ ಕಾಲ ನೀಡಲಾಗಿದೆ. ಆದರೆ, ಈಗ ಜಲಾಶಯಗಳಲ್ಲಿ ನೀರು ಇಲ್ಲ ಎಂದು ಅವರು ಹೇಳಿದರು.

ಬೆಂಗಳೂರು, ಮೈಸೂರು, ಮಂಡ್ಯ ಸೇಂದಂತೆ ಇನ್ನಿತರ ನಗರಗಳಿಗೆ ಕುಡಿಯುವ ನೀರು ಪೂರೈಸಲು 27 ಟಿಎಂಸಿ ನೀರಿನ ಅಗತ್ಯವಿದೆ. ಆದರೆ, ಕಾವೇರಿ ಕಣಿವೆ ಭಾಗದಲ್ಲಿನ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಇರುವುದು ಕೇವಲ 26 ಟಿಎಂಸಿ ನೀರು ಮಾತ್ರ. ಈ ವಿಚಾರವನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಬುಧವಾರ ನಡೆದಂತಹ ಸರ್ವಪಕ್ಷಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹಾಗೂ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆಯೂ ಉಮಾಭಾರತಿಗೆ ಮುಖ್ಯಮಂತ್ರಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ, ಕಾವೇರಿ ನಿರ್ವಹಣೆ ಮಂಡಳಿ ರಚನೆಗೆ ರಾಜ್ಯ ವಿರೋಧಿಸಲು ಇರುವಂತಹ ಕಾರಣ ಗಳ ಕುರಿತು ಮಾತುಕತೆ ನಡೆಸಲಾಗಿದೆ.
ಮುಖ್ಯಮಂತ್ರಿಯೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಗೋವಿಂದ ರಾಜು, ಮಾಜಿ ಸಚಿವ ಕೆ.ಜೆ.ಜಾರ್ಜ್, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News