ಹೊರಗಿನವರಿಗೆ ತೆರೆದ ಬುರ್ಜ್ ಅಲ್ ಅರಬ್ ವಿಲಾಸಿ ಟೆರೇಸ್
ದುಬೈ, ಸೆ. 22 : ಬುರ್ಜ್ ಖಲೀಫಾ ನಿರ್ಮಾಣವಾಗುವುದಕ್ಕಿಂತ ಮೊದಲು ದುಬೈಯ ಹೆಗ್ಗುರುತಾಗಿದ್ದ ವಿಲಾಸಿ , ಆಕರ್ಷಕ ಹೋಟೆಲ್ ಬುರ್ಜ್ ಅಲ್ ಅರಬ್ ಇವತ್ತಿಗೂ ದುಬೈ ಪ್ರವಾಸಿಗರ ಪಾಲಿನ ಆಕರ್ಷಣೆಯ ಕೇಂದ್ರ. ಈಗ ಈ ಆಕರ್ಷಣೆಗೆ ಹೊಸ ಮೆರುಗು ಬಂದಿದೆ.
ಈಗ ಇದರ ಹೋಟೆಲ್ ನಲ್ಲಿ ತಂಗದವರಿಗೂ ಹೋಟೆಲ್ ನ ತುದಿಯಲ್ಲಿರುವ ಟೆರೇಸ್ ಗೆ ಪ್ರವೇಶ ಕಲ್ಪಿಸಲಾಗಿದೆ. ಇದು ಅಂತಿಂತಹ ಟೆರೇಸ್ ಅಲ್ಲ. ಫಿನ್ ಲ್ಯಾನ್ಡ್ ನಲ್ಲೆ ನಿರ್ಮಿಸಿ ಸಮುದ್ರ ಮಾರ್ಗದಲ್ಲಿ ತಂದು ಬುರ್ಜ್ ಅಲ್ ಅರಬ್ ಮೇಲೆ ಪ್ರತಿಷ್ಠಾಪಿಸಲಾಗಿರುವ 10,000 ಚದರ ಮೀಟರ್ ಗಳ ಅತ್ಯಂತ ವಿಲಾಸಿ ಟೆರೇಸ್ ಇದು. ಈ ವಿಶಾಲ ಟೆರೇಸ್ ಹೋಟೆಲ್ ಕಟ್ಟಡದಿಂದ 100 ಮೀಟರ್ ಹೊರಚಾಚಿ ಸಮುದ್ರದಲ್ಲೇ ಇರುವ ರೋಮಾಂಚನಕಾರಿ ಅನುಭವ ನೀಡುತ್ತದೆ. ಇದರಲ್ಲಿ ರೆಸ್ಟೋರೆಂಟ್ , ಪೂಲ್, ಬೀಚ್ ಹಾಗು ಕಬಾನ ( ಕ್ಯಾಬಿನ್ ಕೋಣೆ ), ಸನ್ ಬೆಡ್ ಇತ್ಯಾದಿ ಆಕರ್ಷಕ ಸೌಲಭ್ಯಗಳಿವೆ.
ಆದರೆ ಈ ಪ್ರವೇಶಕ್ಕೆ ನೀವು ಖರ್ಚು ಮಾಡಬೇಕಾಗುತ್ತದೆ. ವಾರದ ದಿನಗಳಲ್ಲಿ 1,800 ದಿರ್ಹಮ್ ಹಾಗು ವಾರಾಂತ್ಯದಲ್ಲಿ 2,200 ದಿರ್ಹಮ್ ಇದರ ಪ್ರವೇಶ ದರ. ಇಡೀ ದಿನಕ್ಕೆ ಕೋಣೆಯನ್ನು ಬಾಡಿಗೆಗೆ ಪಡೆಯಬಹುದು. ಈ ಕೋಣೆಯಲ್ಲಿ ತಾಜಾ ಹಣ್ಣುಗಳು , ಕಾಫಿ , ಭೋಜನ ವ್ಯವಸ್ಥೆ ಹಾಗು ಸ್ಪಾ ಸೌಲಭ್ಯಗಳು ಇವೆ.