ಬಡ್ಡಿದರ ನಿಗದಿ ಸಮಿತಿಗೆ ಮೂವರು ಸದಸ್ಯರ ನೇಮಕ
ಹೊಸದಿಲ್ಲಿ,ಸೆ.22: ಸರಕಾರವು ಗುರುವಾರ ಹಣಕಾಸು ನೀತಿ ಸಮಿತಿ(ಎಂಪಿಸಿ)ಗೆ ಮೂವರು ಸದಸ್ಯರನ್ನು ನೇಮಕಗೊಳಿಸಿದೆ. ಈ ಸದಸ್ಯರು ಚಿಲ್ಲರೆ ಹಣದುಬ್ಬರವನ್ನು ಶೇ.4ರ ಗುರಿಯೊಳಗೆ ನಿಯಂತ್ರಿಸುವ ನಿಟ್ಟಿನಲ್ಲಿ ಆರ್‌ಬಿಐ ಪ್ರತಿನಿಧಿಗಳೊಂದಿಗೆ ಸೇರಿ ಮುಂಬರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಪ್ರಮುಖ ಬಡ್ಡಿದರವನ್ನು ನಿಗದಿಗೊಳಿಸುವ ಸಾಧ್ಯತೆಯಿದೆ.
ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅಧ್ಯಕ್ಷತೆಯ ಎಂಪಿಸಿಗೆ ಆರ್ಥಿಕ ತಜ್ಞರಾದ ಚೇತನ ಘಾಟೆ,ಪಮಿ ದುವಾ ಮತ್ತು ರವೀಂದ್ರ ಎಚ್.ಧೋಲಾಕಿಯಾ ಅವರು ಸರಕಾರದಿಂದ ನಾಮಕರಣಗೊಂಡ ಸದಸ್ಯರಾಗಿದ್ದಾರೆ. ಇವರ ಅಧಿಕಾರಾವಧಿ ನಾಲ್ಕು ವರ್ಷಗಳದ್ದಾಗಿದೆ.
ಗವರ್ನರ್,ಡೆಪ್ಯುಟಿ ಗವರ್ನರ್ ಮತ್ತು ಆರ್‌ಬಿಐನ ಇನ್ನೋರ್ವ ಪ್ರತಿನಿಧಿ ಸಮಿತಿಯಲ್ಲಿ ರಿಜರ್ವ ಬ್ಯಾಂಕ್‌ನ್ನು ಪ್ರತಿನಿಧಿಸುತ್ತಾರೆ.
2016-17ನೇ ಸಾಲಿನ ಆರ್‌ಬಿಐನ ನಾಲ್ಕನೇ ದ್ವೈಮಾಸಿಕ ಹಣಕಾಸು ಪರಾಮರ್ಶೆ ನೀತಿಯು ಅ.4ರಂದು ಪ್ರಕಟಗೊಳ್ಳಲಿದೆ. ಆರ್‌ಬಿಐ ಗವರ್ನರ್ ಒಬ್ಬರೇ ಬಡ್ಡಿದರದ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವ ಪ್ರಚಲಿತ ಪದ್ಧತಿಯ ಬದಲು ಸಮಿತಿಯು ಆ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.