×
Ad

ಸಿರಿಯಾ ನಿರಾಶ್ರಿತನನ್ನು ತನ್ನ ಮನೆಗೆ ಕಳಿಸಿ ಎಂದ ಅಮೇರಿಕನ್ ಬಾಲಕ : ಒಬಾಮಾಗೆ ಬರೆದ ಪತ್ರ ವೈರಲ್

Update: 2016-09-22 21:46 IST

ನ್ಯೂಯಾರ್ಕ್, ಸೆ. 22: ಸಿರಿಯದ ನಿರಾಶ್ರಿತ ಬಾಲಕನೊಬ್ಬನಿಗೆ ತನ್ನ ಮನೆಯಲ್ಲಿ ಜಾಗ ನೀಡುತ್ತೇನೆ ಎಂಬುದಾಗಿ ಆರು ವರ್ಷದ ಅಮೆರಿಕನ್ ಬಾಲಕನೊಬ್ಬ ತನ್ನ ದೇಶದ ಅಧ್ಯಕ್ಷ ಬರಾಕ್ ಒಬಾಮಗೆ ಬರೆದ ಪತ್ರವೊಂದು ವ್ಯಾಪಕ ಪ್ರಚಾರ ಪಡೆದುಕೊಂಡಿದೆ.
ಸಿರಿಯದ ವಾಯು ದಾಳಿಯಿಂದ ತತ್ತರಿಸಿ ರಕ್ತಸಿಕ್ತನಾಗಿ ಕುಳಿತಿದ್ದ ಬಾಲಕ ಉಮ್ರಾನ್ ದಖ್‌ನೀಶ್‌ನ ಚಿತ್ರವನ್ನು ನೋಡಿದ ಬಳಿಕ ನ್ಯೂಯಾರ್ಕ್ ನಿವಾಸಿ ಅಲೆಕ್ಸ್ ಈ ಪತ್ರ ಬರೆದಿದ್ದಾನೆ. ಈ ಚಿತ್ರವು ಭಾರೀ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಸಿನಿಕತನ, ಶಂಕೆ ಮತ್ತು ಭಯವನ್ನು ಅರಿಯದ ಮಗು ಬರೆದ ಪತ್ರ ಇದಾಗಿದೆ ಎಂದು ಒಬಾಮ ಹೇಳಿದರು. ಪತ್ರದ ವೀಡಿಯೊ ಫೇಸ್‌ಬುಕ್‌ನಲ್ಲಿ 60,000ಕ್ಕೂ ಅಧಿಕ ಬಾರಿ ಶೇರ್ ಆಗಿದೆ.
‘‘ಪ್ರೀತಿಯ ಅಧ್ಯಕ್ಷ ಒಬಾಮ, ಸಿರಿಯದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋದ ಮಗುವಿನ ನೆನಪಿದೆಯಾ? ನೀವು ಆ ಬಾಲಕನನ್ನು ದಯವಿಟ್ಟು ಪತ್ತೆಹಚ್ಚಿ ನನ್ನ ಮನೆಗೆ ಕರೆತರುವಿರಾ? ನಿಮಗಾಗಿ ನಾವು ಧ್ವಜಗಳು, ಹೂಗಳು ಮತ್ತು ಬಲೂನುಗಳೊಂದಿಗೆ ಕಾಯುತ್ತಿರುತ್ತೇವೆ. ನಾವು ಅವನಿಗೆ ಕುಟುಂಬವೊಂದನ್ನು ನೀಡುತ್ತೇವೆ ಹಾಗೂ ಅವನು ನಮ್ಮ ಸಹೋದರನಾಗಿರುತ್ತಾನೆ’’ ಎಂಬುದಾಗಿ ಪತ್ರದಲ್ಲಿ ಬರೆದಿದೆ.
ಈ ಪತ್ರವನ್ನು ಒಬಾಮ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎರಡು ದಿನಗಳ ಹಿಂದೆ ನಡೆದ ನಿರಾಶ್ರಿತರ ಸಮ್ಮೇಳನದಲ್ಲಿ ಓದಿ ಹೇಳಿದ್ದಾರೆ.
‘‘ನಾವು ಅಲೆಕ್ಸ್ ನಂತೆ ಇರಬೇಕು. ಹಾಗೆ ಆದರೆ, ಜಗತ್ತು ಹೇಗಿರಬಹುದು ಎಂದು ಯೋಚಿಸಿ. ಎಷ್ಟು ಜನರ ದುಃಖವನ್ನು ನಿವಾರಿಸಬಹುದು ಹಾಗೂ ಎಷ್ಟು ಜೀವಗಳನ್ನು ರಕ್ಷಿಸಬಹುದು’’ ಎಂದು ಒಬಾಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News