ಸ್ಪ್ಲೆಂಡರ್ ಗೆ ಅನ್ವರ್ಥನಾಮ ಈ ದ್ವಿಚಕ್ರ ವಾಹನ!
ಇಂಗ್ಲಿಷ್ ನ ಸ್ಪ್ಲೆಂಡರ್ (Splendour) ಅಂದರೆ ಕನ್ನಡದಲ್ಲಿ ಭವ್ಯತೆ, ರಂಗು ಅಂತ ಅರ್ಥ. ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್ ಬೈಕ್ ಒಂದು ಕಾಲದ ಸುಪ್ರಸಿದ್ಧ ದ್ವಿಚಕ್ರ ವಾಹನ. ಈಗಲೂ ಬಹುತೇಕ ಜನರಲ್ಲಿ ಈ ಬೈಕ್ ಇದೆ. ಅದು ಕೂಡಾ 1998ರ ಸ್ಪ್ಲೆಂಡರ್ ಬೈಕ್ ಗೆ ಎಲ್ಲಿಲ್ಲದ ಬೇಡಿಕೆ. ಆ ವರ್ಷದ ಬೈಕ್ ನ ಎಂಜಿನ್ ಶಬ್ದ ಮತ್ತು ಪಿಕಪ್ ಉತ್ತಮ ಹಾಗೂ ಬಿಡಿಭಾಗಗಳು ಗಟ್ಟಿ ಎಂಬ ನಂಬಿಕೆಯಿದೆ.
ಶ್ರೀಮಂದಾರ ಜೈನ್ ವಿಟ್ಲದ ಸರಕಾರಿ ಪಶು ಆಸ್ಪತ್ರೆಯ ಪಶುವೈದ್ಯ. ಹಿರಿಯ ಪರಿವೀಕ್ಷಕ. ಅಳಕೆಮಜಲು ನಿವಾಸಿ. ಸದಾ ಬ್ಯುಸಿಯಿರುವ ಮನುಷ್ಯ. ಸರಕಾರಿ ಕೆಲಸಕ್ಕೆ ನ್ಯಾಯ ಒದಗಿಸುವ ನೌಕರ. ರಾತ್ರಿ ಹಗಲೆನ್ನದೆ ಹಳ್ಳಿಗಾಡಿನ ಹೈನುಗಾರರಿಗೆ ಆಪತ್ಬಾಂಧವ ವ್ಯಕ್ತಿ. ವಿಟ್ಲದ ಸಾಮಾಜಿಕ, ಧಾರ್ಮಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು. ಮಂದಾರ ಹೂವಿನಂತಹ ನಾಜೂಕಾದ ಮನಸ್ಸು ಅವರದ್ದು. ಇಲ್ಲಿ ಕೆಳಗೆ ನೀಡಿರುವ ಫೋಟೋದಲ್ಲಿರುವ ವ್ಯಕ್ತಿ ಮತ್ತು ಆ ಬೈಕ್ ಕೂಡಾ ಅವರದ್ದೇ. ಬೈಕ್ ನ ಫೋಟೋ ಝೂಮ್ ಮಾಡಿ ನೋಡುವಾಗ ಇಂದು ಶೋರೂಮ್ ನಿಂದ ಖರೀದಿಸಿದ ಬೈಕ್ ನಂತೆ ಪಳಪಳನೆ ಮಿನುಗುತ್ತಿದೆ. ಅಷ್ಟೊಂದು ಕ್ಲೀನ್ ಮತ್ತು ನೀಟಾಗಿದೆ. ಪ್ರತಿಯೊಂದು ಬಿಡಿಭಾಗಗಳು ಕೂಡಾ ಅಚ್ಚುಕಟ್ಟು. ಕಲೆ, ಸ್ಕ್ರಾಚು, ಡೆಂಟ್ ಅನ್ನೋದು ಈ ಬೈಕ್ ನಲ್ಲಿಲ್ಲ. ಆದರೆ ಇದು ಹೊಸ ಮಾಡೆಲ್ ಬೈಕ್ ಅಲ್ಲ. ಶ್ರೀಮಂದಾರರ ಈ ಬೈಕ್ ನ ಪ್ರಾಯ ಬರೋಬ್ಬರಿ 18 ವರ್ಷ..! ಅಂದರೆ 1998 ರ ಇಸವಿಯ ರಿಜಿಸ್ಟ್ರೇಶನ್ ಬೈಕಿದು. 2 ಲಕ್ಷಕ್ಕೂ ಅಧಿಕ ಕಿಲೋಮೀಟರ್ ಕ್ರಮಿಸಿದೆ. ಆದರೆ ದನಿವಾಗಿಲ್ಲ. ಯಾಕೆಂದರೆ ಬೈಕ್ ನ್ನು ಆ ರೀತಿ ಜೋಪಾನವಾಗಿ ಮಗುವಿನಂತೆ ನೋಡಿಕೊಳ್ಳಲಾಗಿದೆ. ಒಂದು ಕಿಕ್ ಹೊಡೆದು ಎರಡನೇ ಕಿಕ್ ಲ್ಲೂ ಸ್ಟಾರ್ಟ್ ಆಗದೇ ಇದ್ರೆ ಮತ್ತೆ ಪುನಃ ಒದ್ದು ಕಿಕ್ ಮಾಡಲ್ಲ. ಬೈಕ್ ಗೆ ನೋವು ನೀಡಲ್ಲ. ಮೆಕಾನಿಕ್ ನ್ನೇ ಕರೆಸಿ ಚೆಕ್ ಮಾಡಿಸ್ತಾರೆ ಶ್ರೀಮಂದಾರ್. ಅಷ್ಟೊಂದು ಪ್ರೀತಿ, ಮಮತೆ ಬೈಕ್ ಮೇಲೆ. ಅದಕ್ಕಾಗಿಯೇ ಈಗಲೂ ಹೊಸತಾಗಿಯೇ ಇದೆ. "ಸ್ಪ್ಲೆಂಡರ್" ಗೆ ಅನ್ವರ್ಥನಾಮ ಈ ಬೈಕ್ ಆದರೆ "ಸೇವೆ" ಗೆ ಅನ್ವರ್ಥನಾಮ ಇದರ ಮಾಲಕರಾದ ಶ್ರೀಮಂದಾರರೆಂಬ ನಾಣ್ಣುಡಿ ವಿಟ್ಲ ಪರಿಸರದಲ್ಲಿದೆ.
ಶ್ರೀಮಂದಾರ್ ಜೈನ್ ಅವರು ಪಶುವೈದ್ಯರಾಗಿರುವುದರಿಂದ ಸಹಜವಾಗಿಯೇ ಊರೂರು ಸುತ್ತಬೇಕಾಗುತ್ತದೆ. ವಿಟ್ಲ ಪ್ರಾಂತ್ಯದಲ್ಲಿ ಇವರ ಬೈಕ್ ಸುತ್ತದ ಊರು ಕೇರಿಗಳಿಲ್ಲ. ಚಕ್ರದ ಅಚ್ಚೊತ್ತದ ಕಾಲುದಾರಿಗಳಿಲ್ಲ. ಎಷ್ಟೇ ಓಡಿದರೂ ಈತನಕ ಬಾಡಿಲ್ಲ. ದಿನಗಳೆದಂತೆ ಬೈಕ್ ಇನ್ನಷ್ಟು ರಂಗು ರಂಗಾಗಿ, ಸುಂದರವಾಗಿ ಗೋಚರಿಸುತ್ತಿದೆ. 18 ವರ್ಷ ಸಂದರೂ, ಎರಡು ಲಕ್ಷ ಕ್ರಮಿಸಿದರೂ ಹೊಸತನದಲ್ಲೇ ಇರುವ ಶ್ರೀಮಂದಾರರ ಬೈಕ್ ಇತರ ದ್ವಿಚಕ್ರ ವಾಹನ ಸವಾರರಿಗೆ ಮಾದರಿ. ಅದಕ್ಕೇ ಹೇಳೋದು ಶ್ರೀಮಂದಾರರ ಬೈಕ್ ಮಂದಾರ ಪುಷ್ಪದಂತೆ ಭವ್ಯವಾಗಿದೆಯೆಂದು.