ಯಾಹೂ !: ಕೋಟ್ಯಂತರ ಖಾತೆಗಳಿಗೆ ಕನ್ನ
ನ್ಯೂಯಾರ್ಕ್, ಸೆ.23: ತನ್ನ 50 ಕೋಟಿಗೂ ಅಧಿಕ ಖಾತೆಗಳನ್ನು 2014ರಲ್ಲಿ ಹ್ಯಾಕ್ ವಾಡಲಾಗಿದೆಯೆಂಬುದನ್ನು ಯಾಹೂ ದೃಢಪಡಿಸಿದೆ. ಇದು ಇತ್ತೀಚಿಗಿನ ವರ್ಷಗಳಲ್ಲಿಯೇ ನಡೆದ ಅತ್ಯಂ ದೊಡ್ಡ ಹ್ಯಾಕಿಂಗ್ ಆಗಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮುಂಚೆ 2012ರಲ್ಲಿ ಲಿಂಕ್ಡ್ ಇನ್ ಇದರ 11.7 ಕೋಟಿ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತಾದರೆ ಈ ವರ್ಷದಲ್ಲೇ ಸುಮಾರು 3.6 ಕೋಟಿ ಮೈಸ್ಪೇಸ್ ಅಕೌಂಟ್ ಗಳಿಗೆ ಕನ್ನ ಹಾಕಲಾಗಿದೆ.
ಯಾಹೂ ಖಾತೆಗಳಿಗೆ ಕನ್ನ ಹಾಕಿದವರು ಹೆಸರುಗಳು, ಇಮೇಲ್ ಅಡ್ರೆಸ್ ಗಳು, ಫೋನ್ ನಂಬರ್ ಗಳು, ಜನ್ಮ ದಿನಾಂಕ, ಕೆಲ ಪ್ರಕರಣಗಳಲ್ಲಿ ಸೆಕ್ಯುರಿಟಿ ಪ್ರಶ್ನೆಗಳು ಹಾಗೂ ಉತ್ತರಗಳನ್ನೂ ಹ್ಯಾಕ್ ಮಾಡಿರಬಹುದೆಂದು ಯಾಹೂ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಿಳಿಸಿದೆ.
ನಾರ್ವೆ ಮೂಲದ ಸೈಬರ್ ಸೆಕ್ಯುರಿಟಿ ಸಲಹೆಗಾರ ಪರ್ ಥೋರ್ಶೇಮ್ ಪ್ರಕಾರ ಯಾಹೂ ಖಾತೆಗಳನ್ನು ಹ್ಯಾಕ್ ಮಾಡಲಾಗಿರುವ ವಿಚಾರ ಮುಂದಿನ ಹಲವು ವರ್ಷಗಳ ತನಕ ಅಂತರ್ಜಾಲದಲ್ಲಿ ಪರಿಣಾಮ ಬೀರಬಹುದು. ಈ ಹ್ಯಾಕಿಂಗ್ ಹಿಂದೆ ಸರಕಾರಿ ಪ್ರೇರಿತ ಶಕ್ತಿಗಳಿರಬಹುದೆಂದು ಯಾಹೂ ಹೇಳಿಕೊಂಡಿದ್ದರೂ ತಜ್ಞರ ಪ್ರಕಾರ ಹ್ಯಾಕಿಂಗಿನಿಂದ ಸಂಗ್ರಹಿಸಲಾದ ಮಾಹಿತಿಯನ್ನು ಉಪಯೋಗಿಸಿ ಕೆಲವರನ್ನು ಬ್ಲ್ಯಾಕ್ ಮೇಲ್ ಕೂಡ ಮಾಡಬಹುದಾಗಿದೆ. ಆದರೆ ಯಾಹೂ ಖಾತೆಗಳಿಗೆ ಕನ್ನ ಹಾಕಿರುವುದರ ಹಿಂದಿರುವ ನಿಜವಾದ ಉದ್ದೇಶವೇನೆಂದು ಇನ್ನೂ ಸ್ಪಷ್ಟವಾಗಿಲ್ಲ.
ವಿವಿಧ ಇಮೇಲ್ ಖಾತೆಗಳಿಗೆ ಬೇರೆ ಬೇರೆ ಪಾಸ್ ವರ್ಡ್ ಹೊಂದುವ ಮುಖಾಂತರ ಹಾಗೂ ಇಮೇಲ್ ಪಾಸ್ ವರ್ಡ್ ಗಳನ್ನು ಆಗಾಗ ಬದಲಿಸುತ್ತಿರುವುದರಿಂದ ಖಾತೆ ಹ್ಯಾಕ್ ಆಗುವುದನ್ನು ತಪ್ಪಿಸಬಹುದು ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಹೇಳುತ್ತಾರೆ.