ಚರ್ಮದ ಬೂಟಿನೊಳಗೆ ಬೆಚ್ಚಗೆ ಅಡಗಿತ್ತು ವಿಶ್ವದ ಅತ್ಯಂತ ವಿಷಕಾರಿ ಹಾವು !
ಅಡಿಲೇಡ್ , ಸೆ.23: ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ಪಟ್ಟಣದ ನಿವಾಸಿಯಾಗಿರುವ ಮಹಿಳೆಯ ಚರ್ಮದ ಬೂಟಿನೊಳಗೆ ಬೆಚ್ಚಗೆ ಅಡಗಿ ಕುಳಿತಿದ್ದ ವಿಶ್ವದ ಅತ್ಯಂತ ವಿಷಕಾರಿ ಹಾವೆಂದು ಪರಿಗಣಿತವಾದ ಈಸ್ಟರ್ನ್ ಬ್ರೌನ್ ಸ್ನೇಕ್ ಅನ್ನು ಹಾವು ಹಿಡಿಯುವುದರಲ್ಲಿ ಪರಿಣತಿ ಹೊಂದಿರುವ ರೋಲ್ಲಿ ಬರೆಲ್ ಇತ್ತೀಚೆಗೆ ಹಿಡಿದಿದ್ದಾರೆ.
ಮಹಿಳೆ ನಗರದ ಹೊರವಲಯದಲ್ಲಿರುವ ತನ್ನ ಮನೆಯಿಂದ ಹೊರಬಂದು ತನ್ನ ಶೂ ಹಾಕಬೇಕೆನ್ನುವಷ್ಟರಲ್ಲ್ಲಿ ಅದರೊಳಗೆ ಬಾಲವೊಂದು ಇಣುಕುತ್ತಿರುವುದನ್ನು ಗಮನಿಸಿ ಅದು ಹಾವೇ ಆಗಿರಬೇಕೆಂದು ಊಹಿಸಿ ಕೂಡಲೇ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದಳು. ಈ ಜಾತಿಯ ವಿಷಕಾರಿ ಹಾವು ಆಸ್ಟ್ರೇಲಿಯಾದ ಕರಾವಳಿ ಹಾಗೂ ಒಳನಾಡು ಪ್ರದೇಶಗಳಲ್ಲಿ ಕಂಡು ಬರುತ್ತವೆ.
ಮಹಿಳೆಯ ಬೂಟಿನಲ್ಲಿದ್ದ ಸುಮಾರು ಒಂದು ಮೀಟರ್ ಉದ್ದದ ಹಾವನ್ನು ನಂತರ ಅರಣ್ಯದಲ್ಲಿ ಬಿಡಲಾಯಿತು. ಬುರೆಲ್ ಒಂದು ವರ್ಷದ ಹಿಂದೆ ಇದೇ ಜಾತಿಯ ಇನ್ನೊಂದು ಹಾವನ್ನು ಹಿಡಿದಿದ್ದರು.
ಕುರಿಯ ಚರ್ಮದಿಂದ ಮಾಡಲಾಗಿದ್ದ ಮಹಿಳೆಯ ಬೂಟಿನ ಒಳಗೆ ಮೆತ್ತನೆಯ ಉಣ್ಣೆ ಇದ್ದುದರಿಂದ ಹಾವು ಅಲ್ಲಿ ಹಾಯಾಗಿ ನಿದ್ರಿಸುವ ಇಚ್ಛೆಯಿಂದ ನುಸುಳಿರಬೇಕೆಂದು ಅಂದಾಜಿಸಲಾಗಿದೆ.