ಆಂಧ್ರ, ತೆಲಂಗಾಣಗಳಲ್ಲಿ ಭಾರೀ ಮಳೆ: ಐವರ ಮೃತ್ಯು

Update: 2016-09-23 11:36 GMT

ಹೈದರಾಬಾದ್,ಸೆಪ್ಟಂಬರ್ 23: ಕಳೆದ ನಾಲ್ಕು ದಿವಸಗಳಿಂದ ತೆಲಂಗಾಣ,ಆಂಧ್ರಪ್ರದೇಶಗಳಲ್ಲಿ ನಿರಂತರ ಭಾರೀ ಮಳೆ ಸುರಿಯುತ್ತಿದೆ. ಇಬ್ಬರು ಮಕ್ಕಳು,ಓರ್ವ ಮಹಿಳೆ ಸಹಿತ ಐದು ಮಂದಿ ಮೃತರಾಗಿದ್ದಾರೆಂದು ವರದಿಯಾಗಿದೆ. ಭಾರೀ ಮಳೆಯಿಂದಾಗಿ ಎರಡು ರಾಜ್ಯಗಳ ರಾಜಧಾನಿಯಾದ ಹೈದರಾಬಾದ್‌ನ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೈದರಾಬಾದ್‌ನಲ್ಲಿ ಜನವಾಸಸ್ಥಳಗಳಿಗೆ ನೆರೆ ನೀರು ನುಗ್ಗಿದೆ. ಪ್ರದೇಶದ ಕಾಲನಿಗಳಲ್ಲಿ ಹೆಚ್ಚಿನ ಮನೆಗಳು ಜಲಾವೃತವಾಗಿವೆ.

ಕಳೆದ ಹನ್ನೆರಡು ಗಂಟೆಗಳಲ್ಲಿ 22ಸೆ.ಮೀ. ಮಳೆಯಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರಿಯಲಿದ್ದು ಎಚ್ಚರಿಕೆಯಲ್ಲಿರುವಂತೆ ತೆಲಂಗಾಣ ಸರಕಾರ ಘೋಷಿಸಿದೆ. ಎರಡು ದಿನ ಶಾಲೆಗಳಿಗೆ ರಜೆಘೋಷಿಸಲಾಗಿದೆ. ಸಾಫ್ಟ್‌ವೇರ್ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಎರಡು ದಿವಸ ಮನೆಯಲ್ಲೇ ಕುಳಿತು ಕೆಲಸಮಾಡಲು ಅವಕಾಶ ಒದಗಿಸಬೇಕೆಂದು ಸರಕಾರವೇ ವಿನಂತಿಸಿಕೊಂಡಿದೆ.

ರಾಜ್ಯಸರಕಾರದ ಮನವಿಮೇರೆಗೆ ರಾಷ್ಟ್ರೀಯ ದುರಂತ ನಿವಾರಣಾ ಸೇನೆ ಮತ್ತು ಸೈನ್ಯ ಪರಿಹಾರ ಕಾರ್ಯಕೈಗೊಂಡಿದೆ. ಐನೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಾಗುತ್ತಿರುವುದರಿಂದ ವಿಮಾನದ ವೇಳಾ ಪಟ್ಟಿ ಪರಿಷ್ಕರಿಸಲಾಗಿದೆ. ಹುಸೈನ್ ಸಾಗರ ತಟಾಕದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಅಶೋಕ್ ನಗರ, ಗಾಂಧಿನಗರ, ನಾರಾಣಗುಡ, ಬಾಗ್ ಲಿಂಗಂಪಳ್ಳಿ, ನಲ್ಲಕುಂಡ ಎಂಬಲ್ಲಿನ ವಸತಿ ಪ್ರದೇಶಗಳಲ್ಲಿ ನೆರೆ ಹೆಚ್ಚಾಗುವ ಸಾಧ್ಯತೆ ಇದೆಯೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News