ವಾಟ್ಸ್ಆ್ಯಪ್ ಗೆ ಹೈಕೋರ್ಟ್ ಮಹತ್ವದ ಆದೇಶ

Update: 2016-09-23 14:17 GMT

ಹೊಸದಿಲ್ಲಿ,ಸೆ.23: ಸೆ.25ಕ್ಕೆ ಮುನ್ನ ಆ್ಯಪ್ ಬಳಕೆಯನ್ನು ನಿಲ್ಲಿಸುವ ಬಳಕೆದಾರರ ಕುರಿತ ಮಾಹಿತಿಗಳು ಮತ್ತು ದತ್ತಾಂಶವನ್ನು ಅಳಿಸಿ ಹಾಕುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ವಾಟ್ಸ್ಆ್ಯಪ್ಗೆ ಆದೇಶಿಸಿದೆ. ವಾಟ್ಸ್ಆ್ಯಪ್ನ ನೂತನ ಗೋಪ್ಯತೆ ನೀತಿ ಸೆ.25ರಿಂದ ಜಾರಿಗೊಳ್ಳಲಿದ್ದು, ಈ ನೀತಿಯಡಿ ಅದು ತನ್ನ ಬಳಕೆದಾರರ ಮಾಹಿತಿಗಳನ್ನು ಮಾತೃಸಂಸ್ಥೆ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಿದೆ.

ನೂತನ ನೀತಿಯನ್ನು ಪ್ರಶ್ನಿಸಿ ದಿಲ್ಲಿಯ ಕರ್ಮಣ್ಯ ಸಿಂಗ್ ಸರೀನ್ ಮತ್ತು ಶ್ರೇಯಾ ಸೇಠಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿಗೊಳಿಸಿದ ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹೆಗಲ್ ಅವರ ಪೀಠವು, ವಾಟ್ಸ್ಆ್ಯಪ್ ತನ್ನ ಆ್ಯಪ್‌ನ್ನು ಪರಿಚಯಿಸುವಾಗ ಆರಂಭದಲ್ಲಿ ಒದಗಿಸಿದ್ದ ಖಾಸಗಿತನದ ಸಂಪೂರ್ಣ ಸುರತಕ್ಷತೆ ಮತು ರಕ್ಷಣೆಯನ್ನು ಪರಿಗಣಿಸಿ ಮತ್ತು ವ್ಯಕ್ತಿಯ ಖಾಸಗಿತನದ ಹ್ಕಕಿಗೆ ಸಂಬಂಧಿಸಿದ ವಿವಾದವೊಂದನ್ನು ಸರ್ವೋಚ್ಚ ನ್ಯಾಯಾಲಯದ ವಿಶಾಲ ಪೀಠವು ಇನ್ನಷ್ಟೇ ನಿರ್ಧರಿಸಬೇಕಾಗಿರುವುದರಿಂದ ವಾಟ್ಸ್ಆ್ಯಪ್ ಬಳಕೆದಾರರ ಹಿತಾಸಕ್ತಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅದರ ಬಳಕೆಯನ್ನು ನಿಲ್ಲಿಸಿರುವವರ ಮಾಹಿತಿಯನ್ನು ಫೇಸ್‌ಬುಕ್ ಅಥವಾ ಸಮೂಹದ ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳದಂತೆ ನಿರ್ದೇಶವನ್ನು ನೀಡುತ್ತಿದ್ದೇವೆ ಎಂದು ಹೇಳಿತು.

ವಾಟ್ಸ್ಆ್ಯಪ್ನಂತಹ ಇಂಟರ್‌ನೆಟ್ ಮೆಸೇಜ್ ಅಪ್ಲಿಕೇಶನ್‌ಗಳ ಕಾರ್ಯ ನಿರ್ವ ಹಣೆಗೆ ಸಂಬಂಧಿಸಿದ ವಿವಾದಗಳನ್ನು ಪರಿಶೀಲಿಸುವಂತೆ ಮತ್ತು ಅವುಗಳನ್ನು ಶಾಸನಬದ್ಧ ನಿಯಂತ್ರಣ ವ್ಯವಸ್ಥೆಯ ವ್ಯಾಪ್ತಿಗೊಳಪಡಿಸುವ ಕಾರ್ಯಸಾಧ್ಯತೆಯ ಬಗ್ಗೆ ಆದಷ್ಟು ಶೀಘ್ರ ಸೂಕ್ತ ನಿರ್ಧಾರವನ್ನು ಕೈಗೊಳ್ಳುವಂತೆ ನ್ಯಾಯಾಲಯವು ಟ್ರಾಯ್‌ಗೆ ನಿರ್ದೇಶ ನೀಡಿತು.

ಗೋಪ್ಯ ಮಾಹಿತಿಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ನೂತನ ನೀತಿಯು ಬಳಕೆದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಬಳಕೆದಾರ ತನ್ನ ಖಾತೆಯನ್ನು ಅಳಿಸಿಹಾಕಿದಾಗ ಆತನ ಕುರಿತ ಮಾಹಿತಿಯನ್ನು ತನ್ನ ಸರ್ವರ್‌ಗಳಲ್ಲಿ ಉಳಿಸಿಕೊಳ್ಳಲಾಗುವುದಿಲ್ಲ ಎಂದು ವಾಟ್ಸ್ಆ್ಯಪ್ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News