ಸಮನ್ವಯತೆಯ ಕೊರತೆ ಉರಿ ದಾಳಿಗೆ ಮೂಲ ಕಾರಣ: ಎನ್‌ಐಎ ತನಿಖಾ ವರದಿಯಲ್ಲಿ ಉಲ್ಲೇಖ

Update: 2016-09-23 14:36 GMT

ಹೊಸದಿಲ್ಲಿ, ಸೆ.23: ಕಾಶ್ಮೀರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಭಯೋತ್ಪಾದಕರ ದಾಳಿ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಎರಡು ಕಾವಲು ಠಾಣೆಗಳ ನಡುವಿನ ಸಮನ್ವಯತೆಯ ಕೊರತೆಯೂ ಸೇರಿದಂತೆ ಹಲವು ವಿಧಿವಿಧಾನಗಳ ಲೋಪಗಳತ್ತ ಬೊಟ್ಟು ಮಾಡಿದೆ.

ಈ ಮಧ್ಯೆ ಪ್ರಕರಣದ ದಾಖಲೀಕರಣ ಮತ್ತು ಸಾಕ್ಷಗಳ ಸಂಗ್ರಹ ಕಾರ್ಯವನ್ನು ಮುಗಿಸಿರುವ ಐಎನ್‌ಎ ಅಧಿಕಾರಿಗಳು , ಅತೀ ಸೂಕ್ಷ್ಮ ಪ್ರದೇಶವಾಗಿರುವ ಸೇನಾ ಪ್ರಧಾನ ನೆಲೆಯ ವ್ಯಾಪ್ತಿ ಪ್ರದೇಶದ ಕೆಲವೆಡೆ ಸರಿಯಾಗಿ ಬೇಲಿ ಹಾಕದಿರುವುದನ್ನು ಉಲ್ಲೇಖಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ಉಗ್ರರು ಪಾಲ್ಗೊಂಡಿರುವ ಸಂಭವವಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಿಂದ ಹಾಜಿ ಪೀರ್ ಪಾಸ್ ಮೂಲಕ ಸೆ.16 ಮತ್ತು 17ರ ನಡುರಾತ್ರಿ ಒಳನುಸುಳಿದ ಉಗ್ರರು, ಸುಖ್‌ದರ್ ಎಂಬಲ್ಲಿ ಅವಿತು ಕುಳಿತು ಸೇನಾ ಪ್ರಧಾನ ನೆಲೆಯನ್ನು ಗಮನಿಸುತ್ತಿದ್ದರು. ಈ ಸ್ಥಳದಿಂದ ಸೇನಾ ನೆಲೆ ಮತ್ತು ಅದರೊಳಗಿನ ಸೈನಿಕರ ಚಟುವಟಿಕೆಯನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಸೇನಾ ಕೇಂದ್ರದ ಆವರಣ ಬೇಲಿಗೆ ತಾಗಿಕೊಂಡಂತೆ ಹುಲ್ಲು ಮತ್ತು ಪೊದೆಗಳು ಬೆಳೆದಿದ್ದು, ಇದು ಉಗ್ರರು ಯಾರ ಕಣ್ಣಿಗೂ ಬೀಳದಂತೆ ಸುಲಭವಾಗಿ ಸೇನಾ ಕೇಂದ್ರದ ಬಳಿ ಸಾಗಲು ನೆರವಾಯಿತು. ಬಳಿಕ ಬೇಲಿಯ ತಂತಿ ಕತ್ತರಿಸಿ ಉಗ್ರರು ಸೇನಾ ಕೇಂದ್ರದ ಒಳನುಸುಳಿದರು ಎಂದು ಮೂಲಗಳು ತಿಳಿಸಿವೆ. ಪ್ರಮುಖ ಭದ್ರತಾ ನೆಲೆಗಳ ಸುತ್ತಮುತ್ತ ಹುಲ್ಲು ಮತ್ತು ಗಿಡಗಂಟಿಗಳನ್ನು ಕಟಾವು ಮಾಡುವ ನಿಟ್ಟಿನಲ್ಲಿ ರೂಪಿಸಲಾದ ನಿರ್ದಿಷ್ಟ ಭದ್ರತಾ ಪ್ರಕ್ರಿಯೆಯನ್ನು ಇಲ್ಲಿ ಪಾಲಿಸಲಾಗಿಲ್ಲ . ಅಲ್ಲದೆ ಸುಮಾರು 150 ಅಡಿಗಳ ಅಂತರದಲ್ಲಿರುವ ಎರಡು ಸಿಬಂದಿ ಸಹಿತ ಕಾವಲು ಠಾಣೆಗಳ ವೈಫಲ್ಯದಿಂದ ಉಗ್ರರು ಸೇನಾ ಕೇಂದ್ರದ ಒಳನುಸುಳುವಂತಾಯಿತು ಎಂದು ತನಿಖೆಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News