ಪತ್ರಕರ್ತ ರಾಜದೀಪ್ ಸರ್ದೇಸಾಯಿಯನ್ನು ಶಂಕಿತ ಭಯೋತ್ಪಾದಕನೆಂದು ಚಿತ್ರಿಸಿದ ಒಡಿಯಾ ಪತ್ರಿಕೆ!

Update: 2016-09-23 14:50 GMT

ಮುಂಬೈ,ಸೆ.23: ಗುರುವಾರ ಮುಂಬೈನ ಉರಣ್ ಪ್ರದೇಶದಲ್ಲಿ ಶಂಕಿತ ಭಯೋತ್ಪಾ ದಕರನ್ನು ಕಂಡಿದ್ದಾಗಿ ಕೆಲವು ಶಾಲಾಮಕ್ಕಳು ನೀಡಿದ್ದ ಮಾಹಿತಿಯ ಮೇರೆಗೆ ಕಟ್ಟೆಚ್ಚರವನ್ನು ವಹಿಸಲಾಗಿತ್ತು. ಕಪ್ಪು ಪಠಾಣಿ ಸೂಟ್‌ಗಳನ್ನು ಧರಿಸಿದ್ದ ಈ ಗುಂಪು ಬ್ಯಾಕ್‌ಪ್ಯಾಕ್‌ಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದಂತೆ ಕಂಡುಬಂದಿದ್ದು, ಅಪರಿಚಿತ ಭಾಷೆಯನ್ನು ಮಾತನಾಡುತ್ತಿದ್ದ ಅವರು ‘ಶಾಲೆ’ ಮತ್ತು ‘ಒಎನ್‌ಜಿಸಿ’ಎಂಬ ಶಬ್ದಗಳನ್ನು ಉಚ್ಚರಿಸಿದ್ದರು ಎಂಬ ಮಾಹಿತಿ ಲಭಿಸಿದ್ದರಿಂದ ನೌಕಾಪಡೆ, ತಟ ರಕ್ಷಣಾ ಪಡೆ, ಎನ್‌ಎಸ್‌ಜಿ, ಐಬಿ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ನಿಗಾ ಇರಿಸಿದ್ದವು. ಶಂಕಿತ ಭಯೋತ್ಪಾದಕನೋರ್ವನ ರೇಖಾಚಿತ್ರವನ್ನೂ ಬಿಡುಗಡೆಗೊಳಿಸಲಾಗಿತ್ತು.

ಆದರೆ ವಿಲಕ್ಷಣ ಬೆಳವಣಿಗೆಯಲ್ಲಿ ಒಡಿಶಾದ ‘ಸಂವಾದ’ ಪತ್ರಿಕೆಯು ಪ್ರಕಟಿಸಿದ್ದ ಭಯೋತ್ಪಾದಕನ ರೇಖಾಚಿತ್ರ ಮಾತ್ರ ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇ ಸಾಯಿಯವರನ್ನೇ ಹೋಲುತ್ತಿತ್ತು. ಸ್ವತಃ ಸರ್ದೇಸಾಯಿ ಅವರೇ ಈ ವಿಷಯವನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸಂವಾದ ತನ್ನ ಟ್ವಿಟರ್ ಖಾತೆಯಲ್ಲಿ ಈ ತಪ್ಪಿನ ಬಗ್ಗೆ ಸರ್ದೇಸಾಯಿಯವರ ಕ್ಷಮೆಯನ್ನು ಯಾಚಿಸಿದ್ದು, ಅವರೂ ಉದಾರ ಮನಸ್ಸಿನಿಂದ ಅದನ್ನು ಕ್ಷಮಿಸಿದ್ದಾರೆ. ಆದರೆ ಕ್ಷಮಾಯಾಚನೆಯನ್ನು ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಮುಖಪುಟದಲ್ಲಿ ಪ್ರಕಟಿಸುವಂತೆ ತಾಕೀತು ಮಾಡಿದ್ದಾರೆ. ಜೊತೆಗೆ ಸಿಬ್ಬಂದಿಗಳಿಗಾಗಿ ಪುನಶ್ಚೇತನ ಕಾರ್ಯಾಗಾರವೊಂದನ್ನು ಹಮ್ಮಿಕೊಳ್ಳುವಂತೆ ಸಲಹೆಯನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News