ಕೊಲಿಜಿಯಂ ವಿರುದ್ಧ ನ್ಯಾ. ಚಲಮೇಶ್ವರ್ ಪತ್ರ ಬರೆಯುವ ಮುನ್ನ ಏನಾಗಿತ್ತು ?

Update: 2016-09-23 15:21 GMT

ಹೊಸದಿಲ್ಲಿ, ಸೆ. 23 : ನ್ಯಾಯಾಧೀಶರನ್ನು ನೇಮಿಸುವ ಉನ್ನತ ಮಟ್ಟದ ಸಮಿತಿ ( ಕೊಲಿಜಿಯಂ) ಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿ ತಾನು ಅದರ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ. ಜೆ. ಚಲಮೇಶ್ವರ್ ಅವರು  ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವ ಹಿಂದೆ ಬೇರೊಂದು ಕಾರಣವಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 

ತನ್ನ ಪುತ್ರನ ಜೊತೆ ವಕೀಲಿ ವೃತ್ತಿ ಮಾಡುತ್ತಿದ್ದು ಬಳಿಕ ನ್ಯಾಯಾಧೀಶರಾಗಿ ನೇಮಕವಾದವರೊಬ್ಬರ ವರ್ಗಾವಣೆಯ ಕುರಿತ ಕೊಲಿಜಿಯಂ ಸಭೆಯಲ್ಲಿ ನ್ಯಾ ಚಲಮೇಶ್ವರ್ ಅವರು ಈ ಪತ್ರ ಬರೆಯುವ ಕೆಲವು ವಾರಗಳ ಹಿಂದೆ ಭಾಗವಹಿಸಿದ್ದರು  ಎಂದು ಎಕ್ಸ್ ಪ್ರೆಸ್ ವರದಿ ಮಾಡಿದೆ. 

ಆ ಸಭೆಯಲ್ಲಿ ವರ್ಗಾವಣೆ ವಿಷಯವನ್ನು ಮುಂದೂಡಲಾಗಿತ್ತು. ಮುಖ್ಯ ನ್ಯಾಯಾಧೀಶರು ಹಾಗು ನಾಲ್ಕು ಹಿರಿಯ ನ್ಯಾಯಾಧೀಶರು ಇರುವ ಈ ಉನ್ನತ ಮಟ್ಟದ ಸಮಿತಿಯಲ್ಲಿ ನ್ಯಾ. ಚಲಮೇಶ್ವರ್  ಸದಸ್ಯರಾಗಿದ್ದಾರೆ. 

ಸದ್ಯ ಕೇರಳ ಹೈಕೋರ್ಟ್ ನ್ಯಾಯಾಧೀಶರಾಗಿರುವ ದಮ ಶೇಷಾದ್ರಿ ನಾಯ್ಡು ಅವರು ತಮ್ಮ ತವರು ರಾಜ್ಯ ಆಂಧ್ರ ಪ್ರದೇಶಕ್ಕೆ ವರ್ಗಾವಣೆ ಕೋರಿದ್ದರು. ಈ ಕುರಿತು ಕೊಲಿಜಿಯಂ ಸಭೆಯಲ್ಲಿ ನಿರ್ಧರಿಸಬೇಕಿತ್ತು. ಆಗ ಕೊಲಿಜಿಯಂ ನ ಓರ್ವ ಸದಸ್ಯ ಶೇಷಾದ್ರಿ ಹಾಗು ನ್ಯಾ. ಚಲಮೇಶ್ವರ್ ಅವರ ಪುತ್ರನ ನಂಟಿನ ಬಗ್ಗೆ ಪ್ರಸ್ತಾಪಿಸಿದರು. ಆಗ ನ್ಯಾ. ಚಲಮೇಶ್ವರ್  ಅವರು ಆ ಸಭೆಯಿಂದ ತಾನು ಹಿಂದೆ ಸರಿಯುವುದಾಗಿ ಘೋಷಿಸಿದರು. ಆದರೆ ಹೀಗೆ ಘೋಷಿಸಿದ ಬಳಿಕ ಸಂಪ್ರದಾಯದಂತೆ ಅವರು ಅಲ್ಲಿಂದ ನಿರ್ಗಮಿಸಲಿಲ್ಲ. ಬದಲಾಗಿ ಇಡೀ ಸಭೆ ನಡೆಯುತ್ತಿರುವಾಗ ಆ ಕೊಠಡಿಯಲ್ಲಿ ಇದ್ದರು. ಬಳಿಕ ಸಭೆಯಲ್ಲಿ ನ್ಯಾ. ಶೇಷಾದ್ರಿ  ವರ್ಗಾವಣೆ ಕುರಿತ ನಿರ್ಧಾರವನ್ನು ಮುಂದೂಡಲಾಯಿತು. 

ನ್ಯಾ.ಶೇಷಾದ್ರಿ ಅವರನ್ನು ನ್ಯಾಯಾಧೀಶರಾಗಿ ನೇಮಿಸಿದ ಸಮಿತಿಯ ಇಬ್ಬರು ನ್ಯಾಯಾಧೀಶರ ಜೊತೆ ಎಕ್ಸ್ ಪ್ರೆಸ್ ಮಾತನಾಡಿದೆ. ಚಲಮೇಶ್ವರ್  ಅವರ ಪುತ್ರನ ಜೊತೆ ವೃತ್ತಿ ಸಂಬಂಧ ಹೊಂದಿರುವ ಹಾಗು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಂಬಂಧಿಕರಾಗಿರುವ ನ್ಯಾ. ಶೇಷಾದ್ರಿ ಅವರನ್ನು ನ್ಯಾಯಾಧೀಶರಾಗಿ ನೇಮಿಸಿ ಅವರನ್ನು ನ್ಯಾಯದ ಹಿತಾಸಕ್ತಿಯಲ್ಲಿ  ಕೇರಳಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿತ್ತು.  
ಈ ಬಗ್ಗೆ ಪ್ರತಿಕ್ರಿಯೆ ನೀಡಲು ನ್ಯಾ. ಚಲಮೇಶ್ವರ್ ನಿರಾಕರಿಸಿದ್ದಾರೆ. ಆದರೆ ಅವರ ಸಮೀಪದ ಮೂಲಗಳು ಅವರ ಪುತ್ರ ಹಾಗು ನ್ಯಾ. ಶೇಷಾದ್ರಿ ಜೊತೆಗೆ ಕಾನೂನು ವೃತ್ತಿ ಮಾಡುತ್ತಿದ್ದರು ಎಂದು ಖಚಿತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನ್ಯಾ. ಶೇಷಾದ್ರಿ ನಿರಾಕರಿಸಿದ್ದಾರೆ. 

ಈ ಹಿಂದೆ ಕೊಲಿಜಿಯಂ ವ್ಯವಸ್ಥೆಯನ್ನು ಕೈಬಿಡುವಂತೆ ಆದೇಶ ನೀಡಿದ ಏಕೈಕ ನ್ಯಾಯಾಧೀಶ ನ್ಯಾ . ಚಲಮೇಶ್ವರ್ ಅವರು. ಆದರೆ ಉಳಿದ ನ್ಯಾಯಾಧೀಶರು ಬಹುಮತದ ತೀರ್ಮಾನದ ಮೂಲಕ ಅದರ ವಿರುದ್ಧ ತೀರ್ಪು ನೀಡಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಅಸಂವಿಧಾನಿಕ ಎಂದು ಹೇಳಿದ್ದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News