ಬಿಜೆಪಿಯೊಳಗೆ ಭುಗಿಲೇಳುತ್ತಿದೆ ಇನ್ನೊಂದು ಬಂಡಾಯ ?

Update: 2016-09-23 16:22 GMT

ಹೊಸದಿಲ್ಲಿ, ಸೆ. 23 : ಉರಿ ಆತ್ಮಹತ್ಯಾ ದಾಳಿ ಸಹಿತ ಹಲವು ಸಮಸ್ಯೆಗಳನ್ನು ಪರಿಹರಿಸಲು ತಲೆಕೆಡಿಸಿಕೊಂಡಿರುವ ಪ್ರಧಾನಿ ಮೋದಿ ಹಾಗು ಪಕ್ಷವನ್ನು ಉತ್ತರ ಪ್ರದೇಶ ಚುನಾವಣೆಗೆ ಸಜ್ಜುಗೊಳಿಸಲು ಹರಸಾಹಸ ಮಾಡುತ್ತಿರುವ ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಪಕ್ಷದೊಳಗಿಂದಲೇ ದೊಡ್ಡ ಬಂದಾಯವೊಂದು ಭುಗಿಲೇಳುವ ಮುನ್ಸೂಚನೆಯೊಂದು  ಬಂದಿದೆ  ಎಂದು ಸ್ಕ್ರಾಲ್. ಇನ್ ವರದಿ ಮಾಡಿದೆ. 

ಈ ಬಾರಿ ಬಂಡಾಯದ ಬಾವುಟ ಹಾರಿಸಲಿರುವವರು ಈಗಾಗಲೇ ಮೋದಿ  - ಷಾ ಜೋಡಿಯ ವಿರುದ್ಧ ಬುಸುಗುಡುತ್ತಿರುವ ಪಕ್ಷದ ಹಿರಿಯರು ಎಂದು ಹೇಳಲಾಗಿದೆ. ತಮ್ಮನ್ನು ಮೂಲೆಗುಂಪು ಮಾಡಲೆಂದೇ ಮಾರ್ಗದರ್ಶಕ ಮಂಡಳಿ ರಚಿಸಲಾಗಿದೆ ಎಂದು ಅಸಮಾಧಾನದಲ್ಲಿರುವ ಈ ಹಿರಿಯರ ಪೈಕಿ ಒಬ್ಬರು ಈ ಮಂಡಳಿಯನ್ನೇ ಬರ್ಖಾಸ್ತು ಮಾಡುವಂತೆ ಕೋರಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾದಲ್ಲಿ ಅದು ಬಿಜೆಪಿ ಪಾಲಿಗೆ ದೊಡ್ಡ ಹಿನ್ನಡೆ ಹಾಗು ಮೋದಿ - ಷಾ ಪಾಲಿಗೆ ಇನ್ನೊಂದು ಅಗ್ನಿ ಪರೀಕ್ಷೆಯಾಗಲಿದೆ.
 
2014 ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಪಕ್ಷದ ಅತ್ಯುನ್ನತ ನೀತಿ ನಿರ್ಧಾರಕ ಸಮಿತಿಯಾದ ಸಂಸದೀಯ ಮಂಡಳಿಯಿಂದ ಹಿರಿಯ ನಾಯಕರಾದ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಕೈ ಬಿಟ್ಟು ಅವರನ್ನು ನೂತನ ಮಾರ್ಗದರ್ಶಕ ಮಂಡಳಿಗೆ ನೇಮಿಸಲಾಯಿತು. ಈ ನೂತನ ಮಂಡಳಿಗೆ ಮೋದಿ ಹಾಗು ರಾಜ್ ನಾಥ್ ಸಿಂಗ್ ಕೂಡ ಸದಸ್ಯರು. ಆದರೆ ಇದು ಹಿರಿಯರನ್ನು ಮೂಲೆಗುಂಪು ಮಾಡುವ ಸಮಿತಿಯೆಂದೇ ಕುಖ್ಯಾತಿ ಪಡೆಯಿತು. ಸಾಲದ್ದಕ್ಕೆ ಈ ಸಮಿತಿಗೆ ಪಕ್ಷದಲ್ಲಿ ಅಧಿಕೃತ ಮಾನ್ಯತೆಯನ್ನೂ ಅಂಗೀಕರಿಸಲಿಲ್ಲ. ಈವರೆಗೆ ಈ ಸಮಿತಿಯ ಒಂದೇ ಒಂದು ಸಭೆ ನಡೆದಿಲ್ಲ. 

ಬಿಹಾರ ಚುನಾವಣೆಯಲ್ಲಿ ಸೋಲಾದಾಗ ಈ ಮಂಡಳಿಯಿಂದ ಹೇಳಿಕೆ ನೀಡಿ ಪಕ್ಷದ ನಾಯಕತ್ವವನ್ನು ಟೀಕಿಸಲಾಗಿತ್ತು. ಈಗ ಮತ್ತೆ ಈ ಮಂಡಳಿಯ ಸದಸ್ಯರು ಮೋದಿ - ಷಾ ವಿರುದ್ಧ ಬಂಡಾಯದ ಬಾವುಟ ಹಾರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಭಾವ್ಯ ಬಂಡಾಯವನ್ನು ಈಗಲೇ ಶಮನ ಮಾಡದಿದ್ದರೆ ಪಕ್ಷದ ಪಾಲಿಗೆ ಇದು ದೊಡ್ಡ ಮುಜುಗರವಾಗುವುದರಲ್ಲಿ ಸಂಶಯವಿಲ್ಲ. 

Full View

Courtesy : Scroll.in 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News