ಎಂಎನ್‌ಎಸ್ ಬೆದರಿಕೆ ಹಿನ್ನೆಲೆ ಪಾಕ್ ನಟರಿಗೆ ಭದ್ರತೆ: ದೆವೇನ್ ಭಾರ್ತಿ
ಮುಂಬೈ, ಸೆ.23: ಭಾರತ ಸರಕಾರ ಹಾಗೂ ಮಹಾರಾಷ್ಟ್ರ ಸರಕಾರ ನೀಡಿರುವ ಪ್ರಮಾಣ ಪತ್ರದೊಂದಿಗೆ ಭಾರತದ ನೆಲಕ್ಕೆ ಬಂದಿಳಿಯುವ ಯಾವ ವಿದೇಶೀಯರೂ ಕಳವಳ ಪಡುವ ಅಗತ್ಯವಿಲ್ಲ ಎಂದು ಮುಂಬೈ ಪೊಲೀಸ್ ಜಂಟಿ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೆವೇನ್ ಭಾರ್ತಿ ಹೇಳಿದ್ದಾರೆ.
ಉರಿ ದಾಳಿಯ ಬಳಿಕ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಕ್ಷಣ ದೇಶದಿಂದ ಹೊರ ಹೋಗುವಂತೆ ಪಾಕಿಸ್ತಾನದ ನಟ ಫವಾದ್‌ಖಾನ್ ಹಾಗೂ ಇತರರಿಗೆ ಎಂಎನ್‌ಎಸ್ ತಿಳಿಸಿತ್ತು. ಇಲ್ಲವಾದರೆ ಇವರು ನಟಿಸುತ್ತಿರುವ ಸಿನೆಮಾದ ಶೂಟಿಂಗ್‌ಗೆ ತೊಂದರೆ ನೀಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಮಹೀರಾ ಖಾನ್(ಶಾರುಖ್ ಖಾನ್ ನಟಿಸಿದ್ದ ‘ರಯೀಸ್’ ಸಿನಿಮಾದಲ್ಲಿ ನಟಿಸಿದ್ದರು), ಫವಾದ್‌ಖಾನ್ ( ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದರು) ರಂತಹ ನಟರು ಭಾರತೀಯ ಕಲಾವಿದರ ಅವಕಾಶವನ್ನು ಕಿತ್ತುಕೊಳ್ಳುತ್ತಿದ್ದಾರೆ. ಇವರಿಗೆ ದೇಶ ತೊರೆಯಲು ಅಂತಿಮ ಸೂಚನೆ ನೀಡಲಾಗಿದೆ ಎಂದು ಎಂಎನ್‌ಎಎಸ್ ಪ್ರಧಾನ ಕಾರ್ಯದರ್ಶಿ ಶಾಲಿನಿ ಥ್ಯಾಕರೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.