ಒಬಿಸಿ ಕೋಟಾದಡಿ ಅನಾಥರಿಗೆ ಮೀಸಲಾತಿಗೆ ಎನ್‌ಸಿಬಿಸಿ ಒಲವು
Update: 2016-09-23 23:27 IST
ಹೊಸದಿಲ್ಲಿ, ಸೆ.23: ಸಾಮಾನ್ಯ ವರ್ಗಗಳಿಗೆ ಸೇರಿದ ಪರಿತ್ಯಕ್ತ ಅನಾಥ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಪ್ರವೇಶ ಮತ್ತು ಉದ್ಯೋಗಗಳಲ್ಲಿ ಇತರ ಹಿಂದುಳಿದ ಜಾತಿಗಳ(ಒಬಿಸಿ) ಕೋಟಾದಲ್ಲಿ ಮೀಸಲಾತಿ ದೊರೆಯಬೇಕೆಂಬ ನಿರ್ಣಯವನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‌ಸಿಬಿಸಿ)ವು ಅಂಗೀಕರಿಸಿದೆ.
ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿರುವ, ನೋಡಿಕೊಳ್ಳುವ ಪೋಷಕರಿಲ್ಲದ ಮತ್ತು ಹತ್ತು ವರ್ಷಗಳ ವಯೋಮಿತಿಯೊಳಗಿನ ಮಕ್ಕಳನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಒಬಿಸಿಗಳಿಗೆ ಸಮನಾದ ಮೀಸಲಾತಿಯನ್ನು ಒದಗಿಸಬೇಕು ಎಂದು ಆಯೋಗವು ಕಳೆದ ವಾರ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಅದರ ಪ್ರತಿಯನ್ನು ಸಾಮಾಜಿಕ ನ್ಯಾಯ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಎನ್‌ಸಿಬಿಸಿ ಸದಸ್ಯ ಅಶೋಕ ಸೈನಿ ಅವರು ಸುದ್ದಿಗಾರರಿಗೆ ತಿಳಿಸಿದರು.