×
Ad

ಕಾಶ್ಮೀರ ವಿಷಯದಲ್ಲಿ ಪಾಕ್ ಒಂಟಿ: ವಿಶ್ವಸಂಸ್ಥೆಗೆ ಭಾರತದ ರಾಯಭಾರಿ

Update: 2016-09-24 19:40 IST

ವಿಶ್ವಸಂಸ್ಥೆ, ಸೆ. 24: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯಗೊಳಿಸುವ ಪಾಕಿಸ್ತಾನದ ತಿಂಗಳುಗಳ ಅವಧಿಯ ಪ್ರಯತ್ನಗಳಿಗೆ ವಿಶ್ವಸಂಸ್ಥೆಯ ಸದಸ್ಯ ದೇಶಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ, ಬದಲಿಗೆ, ಈ ದೇಶಗಳು ಬೆಳೆಯುತ್ತಿರುವ ಭಯೋತ್ಪಾದನೆ ಪಿಡುಗಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಭಾರತ ಎದುರಿಸುತ್ತಿರುವ ಭಯೋತ್ಪಾದನೆಯ ಬೆದರಿಕೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಕಳವಳಗೊಂಡಿದೆಯೇ ಹೊರತು, ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದ ಕಾಶ್ಮೀರ ವಿಷಯದ ಬಗ್ಗೆ ಅಲ್ಲ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಈ ವಾರ ನಡೆದ ವಿಶ್ವಸಂಸ್ಥೆಯ 71ನೆ ಮಹಾಧಿವೇಶನದಲ್ಲಿ ಮಾತನಾಡಿದ 90 ಶೇಕಡದಷ್ಟು ದೇಶಗಳು, ಭಯೋತ್ಪಾದನೆ ತಮ್ಮ ಆದ್ಯ ಕಳವಳವಾಗಿದೆ ಎಂದು ಹೇಳಿವೆ ಎಂದರು. ಭಯೋತ್ಪಾದನೆ ಪಿಡುಗಿನೊಂದಿಗೆ ದೃಢವಾಗಿ ವ್ಯವಹರಿಸಲು ದೇಶಗಳು ವ್ಯಕ್ತಪಡಿಸುತ್ತಿರುವ ಬೆಂಬಲಕ್ಕೆ ಭಾರತ ಕೃತಜ್ಞವಾಗಿದೆ ಎಂದು ಅಕ್ಬರುದ್ದೀನ್ ನುಡಿದರು.

ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಎಂ.ಜೆ. ಅಕ್ಬರ್ ನಡೆಸಿದ ಸರಣಿ ದ್ವಿಪಕ್ಷೀಯ ಮಾತುಕತೆಗಳು ಮತ್ತು ಬಹುಪಕ್ಷೀಯ ಕೂಟಗಳಲ್ಲಿ, ಭಾರತ ಭಯೋತ್ಪಾದನೆಯ ಬಲಿಪಶು ಎಂಬ ಅಭಿಪ್ರಾಯ ಹೊರಹೊಮ್ಮಿತು ಹಾಗೂ ಭಾರತಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು ಎಂದು ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ತಿಳಿಸಿದರು.

ಭಾರತದಿಂದ ಬಹುದೂರದಲ್ಲಿರುವ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳೊಂದಿಗೆ ಅಕ್ಬರ್ ನಡೆಸಿದ ಮಾತುಕತೆಗಳ ವೇಳೆ, ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಆ ದೇಶಗಳ ನಾಯಕರು ಕಳವಳ ವ್ಯಕ್ತಪಡಿಸಿದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News