ಕೆಪಿಎಲ್: ಬಳ್ಳಾರಿ, ಬಿಜಾಪುರಕ್ಕೆ ಭರ್ಜರಿ ಜಯ
ಹುಬ್ಬಳ್ಳಿ, ಸೆ.24: ಇಲ್ಲಿ ಶನಿವಾರ ನಡೆದ ಮಳೆಬಾಧಿತ ಕೆಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್ ಹಾಗೂ ಬಿಜಾಪುರ ಬುಲ್ಸ್ ತಂಡಗಳು ಭರ್ಜರಿ ಜಯ ದಾಖಲಿಸಿವೆ.
ಇಲ್ಲಿನ ಕೆಎಸ್‌ಸಿಎ ರಾಜ್‌ನಗರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯ 16ನೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ತಲಾ 7 ಓವರ್‌ಗೆ ಕಡಿತಗೊಳಿಸಲಾಯಿತು. ಗೆಲ್ಲಲು 49 ರನ್ ಸುಲಭ ಸವಾಲು ಪಡೆದಿದ್ದ ಬಳ್ಳಾರಿ 5.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು.
ನಾಯಕ ಅಮಿತ್ ವರ್ಮಾ(ಔಟಾಗದೆ 26) ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಮಂಗಳೂರು ಯುನೈಟೆಡ್ ತಂಡ 7 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಕೇವಲ 48 ರನ್ ಗಳಿಸಿತು. ನಾಯಕ ಕರುಣ್ ನಾಯರ್(ಔಟಾಗದೆ 25) ಅಗ್ರ ಸ್ಕೋರರ್ ಎನಿಸಿಕೊಂಡರು. ಉಳಿದವರು ಒಂದಂಕೆಯ ಸ್ಕೋರ್ ದಾಖಲಿಸಲಷ್ಟೇ ಶಕ್ತರಾದರು.
ತಲಾ ಎರಡು ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ(11-2) ಹಾಗೂ ಅನಿಲ್(2-7) ಮಂಗಳೂರು ತಂಡಕ್ಕೆ ಮೂಗುದಾರ ತೊಡಿಸಿದರು.
ಸಂಕ್ಷಿಪ್ತ ಸ್ಕೋರ್
ಮಂಗಳೂರು ಯುನೈಟೆಡ್: 7 ಓವರ್‌ಗಳಲ್ಲಿ 48/6
(ಕರುಣ್ ನಾಯರ್ ಔಟಾಗದೆ 25, ಪಿ.ಕೃಷ್ಣ 2-11, ಅನಿಲ್ 2-7)
ಬಳ್ಳಾರಿ ಟಸ್ಕರ್ಸ್: 5.5 ಓವರ್‌ಗಳಲ್ಲಿ 52/3
(ಅಮಿತ್ ವರ್ಮ ಔಟಾಗದೆ 26, ಕದಂ 11, ಗುಲೆಚಾ 2-4)
ಬಿಜಾಪುರಕ್ಕೆ ಜಯ: ಕೆಪಿಎಲ್‌ನ 17ನೆ ಪಂದ್ಯ ಕೂಡ ಮಳೆ ಬಾಧಿತಗೊಂಡಿದ್ದು 13 ಓವರ್‌ಗೆ ಕಡಿತಗೊಂಡ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ ನಮ್ಮ ಶಿವಮೊಗ್ಗ ತಂಡವನ್ನು ವಿಜೆಡಿ ಪದ್ಧತಿಯನ್ವಯ 65 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಬಿಜಾಪುರ ತಂಡ ಆರಂಭಿಕ ಬ್ಯಾಟ್ಸ್‌ಮನ್ ಆರ್.ಸಮರ್ಥ್(51ರನ್, 25 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ರಾಬಿನ್ ಉತ್ತಪ್ಪ(67 ರನ್, 37 ಎಸೆತ, 6 ಬೌಂಡರಿ, 4 ಸಿಕ್ಸರ್) ಆಕರ್ಷಕ ಅರ್ಧಶತಕದ ನೆರವಿನಿಂದ 13 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಲು ಶಕ್ತವಾಯಿತು.
ಗೆಲ್ಲಲು 160 ರನ್ ಗುರಿ ಪಡೆದಿದ್ದ ಶಿವಮೊಗ್ಗ 13 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 94 ರನ್ ಗಳಿಸಲಷ್ಟೇ ಶಕ್ತವಾಯಿತು. ಶಿವಮೊಗ್ಗ 3.4 ಓವರ್‌ಗಳಲ್ಲಿ 14 ರನ್ ಗಳಿಸುವಷ್ಟರಲ್ಲಿ ವೇಗಿ ಅಭಿಮನ್ಯು ಮಿಥುನ್(3-2) ಅಮೋಘ ಬೌಲಿಂಗ್‌ಗೆ ತತ್ತರಿಸಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ಸಿದ್ದಾರ್ಥ್(ಔಟಾಗದೆ 44) ಹಾಗೂ ಪವನ್ ದೇಶಪಾಂಡೆ(ಔಟಾಗದೆ 34) ಆರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 80 ರನ್ ಸೇರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಬಿಜಾಪುರದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದ ನಾಯಕ ರಾಬಿನ್ ಉತ್ತಪ್ಪ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ಬಿಜಾಪುರ ಬುಲ್ಸ್: 13 ಓವರ್‌ಗಳಲ್ಲಿ 159/3
(ರಾಬಿನ್ ಉತ್ತಪ್ಪ 67, ಸಮರ್ಥ್ 51, ಅರ್ಶ್‌ದೀಪ್ ಸಿಂಗ್ ಔಟಾಗದೆ 21)
ನಮ್ಮ ಶಿವಮೊಗ್ಗ: 13 ಓವರ್‌ಗಳಲ್ಲಿ 94/5
(ಸಿದ್ದಾರ್ಥ್ ಔಟಾಗದೆ 44, ಪವನ್ ದೇಶಪಾಂಡೆ ಔಟಾಗದೆ 34, ಅಭಿಮನ್ಯು ಮಿಥುನ್ 3-2)
ಪಂದ್ಯಶ್ರೇಷ್ಠ: ರಾಬಿನ್ ಉತ್ತಪ್ಪ.
ಮೈಸೂರು ವಾರಿಯರ್ಸ್‌ಗೆ ಸತತ 5ನೆ ಜಯ
ಹುಬ್ಬಳ್ಳಿ, ಸೆ.24: ಭರ್ಜರಿ ಪ್ರದರ್ಶನ ನೀಡುತ್ತಿರುವ ಮೈಸೂರು ವಾರಿಯರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 34 ರನ್ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆಪಿಎಲ್ ಟೂರ್ನಿಯಲ್ಲಿ ಸತತ 5ನೆ ಗೆಲುವು ಸಾಧಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮೈಸೂರು ತಂಡ ನಾಯಕ ಮನೀಷ್ ಪಾಂಡೆ(44) ಹಾಗೂ ಜೋನಾಥನ್(43) ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 142 ರನ್‌ಗೆ ಸರ್ವಪತನಗೊಂಡಿತು.
ಟಿ.ಪ್ರದೀಪ್(4-18) ಮೈಸೂರು ವಾರಿಯರ್ಸ್‌ನ ಬೆವರಿಳಿಸಿದರು. ನಾಯಕ ವಿನಯಕುಮಾರ್(2-17) ಹಾಗೂ ಎಸ್.ಶಿಂಧೆ(2-30) ತಲಾ 2 ವಿಕೆಟ್ ಪಡೆದು ಪ್ರದೀಪ್‌ಗೆ ಸಾಥ್ ನೀಡಿದರು.
ಬೆಳಗಾವಿ ತಂಡ ಮೈಸೂರು ತಂಡದ ಸ್ಪಿನ್ನರ್ ಸುಚಿತ್(4-26) ಹಾಗೂ ಎಸ್.ಯಾದವ್(3-19) ದಾಳಿಗೆ ನಿರುತ್ತರವಾಗಿ 17.2 ಓವರ್‌ಗಳಲ್ಲಿ 108 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.