ಜೈಲಿಗೆ ಹೋದರೂ ಬುದ್ಧಿ ಕಲಿಯದ 'ಸ್ಟಂಟ್ ಕಿಂಗ್' ದುರಂತ ಅಂತ್ಯ
ಜಿದ್ದಾ, ಸೆ.25: ಸೌದಿ ಅರೇಬಿಯಾದ ’ಸ್ಟಂಟ್ ಕಿಂಗ್ ’ ಖ್ಯಾತಿಯ ಯುವಕನೊಬ್ಬ ಡ್ರಿಫ್ಟ್ ಮಾಡಲು ಹೋಗಿ ಸಾವಿಗೀಡಾದ ಘಟನೆ ನಡೆದಿದೆ.
ಕಾರ್ ನಲ್ಲಿ ಡೇರ್‌ಡೆವಿಲ್ ಸ್ಟಂಟ್ ಮಾಡುವ ಕಾರಣಕ್ಕಾಗಿ ಕಿಂಗ್ ಅಲ್-ನಝೀಮ್ ಎಂಬ ಹೆಸರಿನಿಂದ ಈ ಯುವಕ ಗುರುತಿಸಿಕೊಂಡಿದ್ದನು.
ಅಲ್-ನಝೀಮ್ ಶುಕ್ರವಾರ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ.
ಶುಕ್ರವಾರ ಬೆಳಗ್ಗೆ ದೇಶ 86ನೆ ರಾಷ್ಟ್ರೀಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ಕಿಂಗ್ ಅಲ್-ನಝೀಮ್ ಹೈವೇಯಲ್ಲಿ ಕಪ್ಪು ಕಾರ‍್ ನಲ್ಲಿ ಡ್ರಿಫ್ಟಿಂಗ್ ಮಾಡುವ ಯತ್ನ ನಡೆಸಿದ್ದಾನೆ. ಆದರೆ ಆತನ ಕಾರು ನಿಯಂತ್ರಣ ತಪ್ಪಿ , ಹಲವರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ಅಪಘಾತದಲ್ಲಿ ಅಲ್ ನಝೀಮ್ ಮೃತಪಟ್ಟಿದ್ದಾನೆ.
’ಸ್ಟಂಟ್ ಕಿಂಗ್ ’ ಖ್ಯಾತಿಯ ಕಿಂಗ್ ಅಲ್-ನಝೀಮ್ ಒಂದೊಮ್ಮೆ ತನ್ನ ಸ್ನೇಹಿತನನ್ನು ಕಾರಿನಲ್ಲಿ ಕುಳ್ಳಿರಿಸಿ ಡ್ರಿಫ್ಟ್ ಮಾಡುವ ಯತ್ನ ನಡೆಸಿದ್ದನು. ಆದರೆ ಈ ಹಂತದಲ್ಲಿ ಅಪಘಾತ ಸಂಭವಿಸಿ ಆತನ ಸ್ನೇಹಿತ ಮೃತಪಟ್ಟಿದ್ದನು.
ಈ ಪ್ರಕರಣದ ಕಾರಣಕ್ಕಾಗಿ ಜೈಲಿಗೆ ಹೋದ ಅಲ್-ನಝೀಮ್ ಶಿಕ್ಷೆ ಅನುಭವಿಸಿ ಬರುವಾಗ ಜೀವಮಾನದಲ್ಲಿ ಮುಂದೆ ಎಂದೂ ಸ್ಟಂಟ್ ಮಾಡದಂತೆ ಎಚ್ಚರಿಕೆ ಪಡೆದಿದ್ದನು. ಆದರೆ ಆತನ ಬುದ್ಧಿ ಬದಲಾಗಲಿಲ್ಲ. ಇದರಿಂದ ದುರಂತ ಅಂತ್ಯ ಕಂಡಿದ್ದಾನೆ.