×
Ad

ಪಿಎಸ್‌ಎಲ್‌ವಿ-ಸಿ35 ಉಡಾವಕದಿಂದ ಇಂದು ವಿವಿಧ ಕಕ್ಷೆಗಳಿಗೆ ಎಂಟು ಉಪಗ್ರಹಗಳು

Update: 2016-09-25 23:33 IST

ಚೆನ್ನೈ, ಸೆ.25: ಭಾರತದ ಹೆಮ್ಮೆಯ ಉಪಗ್ರಹ ಉಡಾವಕ ಪಿಎಸ್‌ಎಲ್‌ವಿ, ಸೋಮವಾರ ಮೊದಲ ಬಾರಿ ಬಹು-ಕಕ್ಷಾ ಉಡಾವಣೆ ಸಾಹಸದಲ್ಲಿ, ದೇಶದ ಹವಾಮಾನ ಉಪಗ್ರಹ ಸ್ಕಾಟ್‌ಸ್ಯಾಟ್-1 ಹಾಗೂ ವಿದೇಶಗಳ 7 ಸೇರಿದಂತೆ ಒಂದೇ ಸಲ 8 ಉಪಗ್ರಹಗಳನ್ನು 2 ಪ್ರತ್ಯೇಕ ಕಕ್ಷೆಗಳಲ್ಲಿರಿಸಲು ಸಜ್ಜಾಗಿದೆ.
ಸಾಗರ ಹಾಗೂ ಹವಾಮಾನ ಸಂಬಂಧಿ ಅಧ್ಯಯನಕ್ಕಾಗಿ ಸ್ಕಾಟ್‌ಸ್ಯಾಟ್-1 ಹಾಗೂ ಇತರ 7 ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ ತೃಪ್ತಿಕರವಾಗಿ ಪ್ರಗತಿಯಲ್ಲಿದೆಯೆಂದು ಇಸ್ರೊದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 9:12ಕ್ಕೆ ಶ್ರೀಹರಿಕೋಟಾದ ಸತೀಶ್‌ಧವನ್ ಅಂತರಿಕ್ಷ ಕೇಂದ್ರದ ಮೊದಲ ಉಡಾವಣಾ ವೇದಿಕೆಯಿಂದ ಪಿಎಸ್‌ಎಲ್‌ವಿ-ಸಿ 35 371 ಕಿ.ಗ್ರಾಂ ಭಾರದ ಸ್ಕಾಟ್‌ಸ್ಯಾಟ್-1 ಹಾಗೂ ಅಮೆರಿಕ ಹಾಗೂ ಕೆನಡದ ಉಪಗ್ರಹಗಳ ಸಹಿತ ಇತರ 7 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೊಯ್ಯಲಿದೆ.
ಎಲ್ಲ ಉಪಗ್ರಹಗಳ ಒಟ್ಟು ಭಾರ ಸುಮಾರು 675 ಕಿ.ಗ್ರಾಂಗಳೆಂದು ಇಸ್ರೊ ತಿಳಿಸಿದೆ.
ನಿನ್ನೆ ಕ್ಷಣಗಣನೆ ಆರಂಭಿಸಲಾಗಿದೆ. ಎಲ್ಲವೂ ತೃಪ್ತಿಕರವಾಗಿ ನಡೆಯುತ್ತಿದೆ. ಪಿಎಸ್‌ಎಲ್‌ವಿ-ಸಿ35 ತಾನೊಯ್ಯುವ ಎಲ್ಲ 8 ಉಪಗ್ರಹಗಳನ್ನು 2 ಪ್ರತ್ಯೇಕ ಕಕ್ಷೆಗಳಲ್ಲಿರಿಸಲಿದೆಯೆಂದು ಇಸ್ರೊದ ಅಧ್ಯಕ್ಷ ಎ.ಎನ್. ಕಿರಣ್ ಕುಮಾರ್ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರಿಗೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News