ವಿಜಯದ ಹಾದಿಯಲ್ಲಿ ವಿರಾಟ್ ಪಡೆ

Update: 2016-09-25 18:20 GMT

ಕಾನ್ಪುರ, ಸೆ.25: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಎರಡನೆ ಇನಿಂಗ್ಸ್‌ನಲ್ಲಿ 107.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 377 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದು, ಪ್ರವಾಸಿ ನ್ಯೂಝಿಲೆಂಡ್‌ನ ಗೆಲುವಿಗೆ 434 ರನ್‌ಗಳ ಕಠಿಣ ಸವಾಲು ವಿಧಿಸಿದೆ.

ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತದ ಐನೂರನೆ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ಸೋಲಿನ ದವಡೆಗೆ ಸಿಲುಕಿದ್ದು, ದಿನದಾಟದಂತ್ಯಕ್ಕೆ 37 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿದೆ. ಇನ್ನೂ 341 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
 ಲ್ಯುಕ್ ರೊಂಚಿ 38 ರನ್ ಮತ್ತು ಸ್ಯಾಂಟ್ನೆರ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 68ಕ್ಕೆ 3 ವಿಕೆಟ್ ಉಡಾಯಿಸಿ ಭಾರತಕ್ಕೆ ಯಶಸ್ಸು ತಂದು ಕೊಟ್ಟಿದ್ದಾರೆ.
ಎರಡನೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ನಾಲ್ಕನೆ ಓವರ್‌ನಲ್ಲಿ ಆರಂಭಿಕ ದಾಂಡಿಗರನ್ನು ಕಳೆದುಕೊಂಡಿತು. ನ್ಯೂಝಿಲೆಂಡ್‌ನ ಆರಂಭಿಕ ದಾಂಡಿಗರು ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿದರು. ಆದರೆ 4ನೆ ಓವರ್‌ನ ಮೊದಲ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಐದು ಎಸೆತಗಳನ್ನು ಎದುರಿಸಿದ್ದರೂ ಗಪ್ಟಿಲ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
 ನಾಲ್ಕನೆ ಓವರ್‌ನ ಐದನೆ ಎಸೆತದಲ್ಲಿ ನ್ಯೂಝಿಲೆಂಡ್‌ಗೆ ಇನ್ನೊಂದು ಆಘಾತ ಕಾದಿತ್ತು. ಗಪ್ಟಿಲ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಲಥಾಮ್ (2) ಅವರನ್ನು ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು. ಆಗ ತಂಡದ ಸ್ಕೋರ್ 3.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 3.
ಮೂರನೆ ವಿಕೆಟ್‌ಗೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಜೊತೆಯಾಗಿ 40 ರನ್ ಜಮೆ ಮಾಡಿದರು. 25 ರನ್ ಗಳಿಸಿದ ವಿಲಿಯಮ್ಸನ್ ಅವರನ್ನು ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇದರೊಂದಿಗೆ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. 21.3ನೆ ಓವರ್‌ನಲ್ಲಿ ಲ್ಯೂಕ್ ರೊಂಚಿ ಅವರು ಟೇಲರ್ ಜೊತೆ ಒಂದು ರನ್ ಗಳಿಸಿದರು. ಎರಡನೆ ರನ್ ಗಳಿಸುವ ಯತ್ನದಲ್ಲಿದ್ದಾಗ ಉಮೇಶ್ ಯಾದವ್ ಚೆಂಡನ್ನು ಸ್ಟಂಪಿಗೆ ಗುರಿಯಿಟ್ಟು ಎಸೆದರು.ಅವರ ಗುರಿ ತಪ್ಪಲಿಲ್ಲ. ಅನುಭವಿ ದಾಂಡಿಗ ರಾಸ್ ಟೇಲರ್ ಕ್ರೀಸ್‌ಗೆ ತಲುಪಿದ್ದರೂ, ಬ್ಯಾಟ್ ಕ್ರೀಸ್‌ನ್ನು ಸ್ಪರ್ಶಿಸಲಿಲ್ಲ. ಇದರಿಂದಾಗಿ ರಾಸ್ ಟೇಲರ್(17) ರನೌಟಾಗಿ ಪೆವಿಲಿಯನ್ ಸೇರಿದರು.
ರಾಂಚಿ ಮತ್ತು ಸ್ಯಾಂಟ್ನೆರ್ ಐದನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 37 ರನ್ ಸೇರಿಸಿದ್ದಾರೆ. ಬ್ಯಾಟಿಂಗ್‌ನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ.
ಭಾರತ 377/5: ಭಾರತ ಎರಡನೆ ಇನಿಂಗ್ಸ್‌ನಲ್ಲಿ 107.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 377 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
 ಮೂರನೆ ದಿನದಾಟದಂತ್ಯಕ್ಕೆ 47 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 159 ರನ್ ಮಾಡಿದ್ದ ಭಾರತ ನಾಲ್ಕನೆ ದಿನದಾಟವನ್ನು ಮುಂದುವರಿಸಿ ಈ ಮೊತ್ತಕ್ಕೆ 218 ರನ್ ಸೇರಿಸಿತ್ತು. ಮೂರನೆ ದಿನದ ಆಟ ನಿಂತಾಗ ಮುರಳಿ ವಿಜಯ್ 64 ಮತ್ತು ಚೇತೇಶ್ವರ ಪೂಜಾರ 50 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅವರು ಜೊತೆಯಾಟವನ್ನು 133ಕ್ಕೆ ಏರಿಸಿದರು. ಇಬ್ಬರು ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಆದರೆ 56.2ನೆ ಓವರ್‌ನಲ್ಲಿ ಸ್ಯಾಂಟ್ನೆರ್ ಅವರು ಮುರಳಿ ವಿಜಯ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
 ಮುರಳಿ ವಿಜಯ್ 76 ರನ್(229ನಿ, 170ಎ, 8ಬೌ,1ಸಿ) ಗಳಿಸಿದರು. ನಾಯಕ ವಿರಾಟ್ ಕೊಹ್ಲಿ (18) ಅವರು ಕ್ರೇಗ್ ಎಸೆತದಲ್ಲಿ ಸೋಧಿಗೆ ಕ್ಯಾಚ್ ನೀಡಿದರು. ಅಷ್ಟು ಹೊತ್ತಿಗೆ ಭಾರತದ ಸ್ಕೋರ್ 67.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 214 ತಲುಪಿತ್ತು.ಚೇತೇಶ್ವರ ಪೂಜಾರ ಶತಕ ಬಾರಿಸಲಿಲ್ಲ. ಅವರ ಶತಕದ ಕನಸು 78ರಲ್ಲಿ ಕೊನೆಗೊಂಡಿತು. ಸೋಧಿ ಅವರ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.
ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮ ಐದನೆ ವಿಕೆಟ್‌ಗೆ 49 ರನ್ ಸೇರಿಸಿದರು. ರಹಾನೆ (40) ಅರ್ಧಶತಕ ದಾಖಲಿಸುವಲ್ಲಿ ಎಡವಿದರು. ಆರನೆ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜ ಮುರಿಯದ ಜೊತೆಯಾಟ ನೀಡಿ 100 ರನ್ ಜಮೆ ಮಾಡಿದರು. ರೋಹಿತ್ ಮತ್ತು ಜಡೇಜ ಅರ್ಧಶತಕಗಳನ್ನು ದಾಖಲಿಸಿದರು. 18ನೆ ಟೆಸ್ಟ್ ಆಡುತ್ತಿರುವ ಜಡೇಜ 2ನೆ ಅರ್ಧಶತಕ ದಾಖಲಿಸಿದ ಬೆನ್ನಲ್ಲೆ ನಾಯಕ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. 19ನೆ ಟೆಸ್ಟ್ ಆಡುತ್ತಿರುವ ರೋಹಿತ್ ಶರ್ಮ ಐದನೆ ಅರ್ಧಶತಕ ದಾಖಲಿಸಿ ಔಟಾಗದೆ ಉಳಿದರು.ಅವರು 68 ರನ್(93ಎ, 8ಬೌ) ಗಳಿಸಿದರು.

ನ್ಯೂಝಿಲೆಂಡ್‌ನ ಸ್ಯಾಂಟ್ನೆರ್ 79ಕ್ಕೆ2, ಸೋಧಿ 99ಕ್ಕೆ 2 ಮತ್ತು ಕ್ರೇಗ್ 80ಕ್ಕೆ 1 ವಿಕೆಟ್ ಪಡೆದರು.

ಹೈಲೈಟ್ಸ್
*200: ರವಿಚಂದ್ರನ್ ಅಶ್ವಿನ್ ಅವರು 37ನೆ ಟೆಸ್ಟ್‌ನಲ್ಲಿ 200ನೆ ವಿಕೆಟ್ ಸಂಪಾದಿಸಿದ್ದಾರೆ.
*10ನ್ಯೂಝಿಲೆಂಡ್‌ನ ಸ್ಪಿನ್ನರ್‌ಗಳು ಟೆಸ್ಟ್‌ನಲ್ಲಿ 10 ವಿಕೆಟ್ ಹಂಚಿಕೊಂಡಿದ್ದಾರೆ.
*593: ಚೇತೇಶ್ವರ ಪೂಜಾರ ಸೆಪ್ಟಂಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 593 ರನ್ ದಾಖಲಿಸಿದ್ದಾರೆ. ಅವರು ಟೆಸ್ಟ್‌ನ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 62 ಮತ್ತು 78 ರನ್ ಗಳಿಸಿದ್ದರು. ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ತಂಡದ ಪರ 166, 31 ಮತ್ತು ಔಟಾಗದೆ 256 ರನ್ ದಾಖಲಿಸಿದ್ದರು.
  *7: ರೋಹಿತ್ ಶರ್ಮ 68 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ಅವರು 7 ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿರಲಿಲ್ಲ.

ಸ್ಕೋರ್ ವಿವರ

 ಭಾರತ ಪ್ರಥಮ ಇನಿಂಗ್ಸ್: 318 ರನ್‌ಗೆ ಆಲೌಟ್

ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 262 ರನ್‌ಗೆ ಆಲೌಟ್

ಭಾರತ ದ್ವಿತೀಯ ಇನಿಂಗ್ಸ್: 107.2 ಓವರ್‌ಗಳಲ್ಲಿ 377/5

ಕೆಎಲ್ ರಾಹುಲ್ ಸಿ ಟೇಲರ್ ಬಿ ಸೋಧಿ 38

ಮುರಳಿ ವಿಜಯ್ ಎಲ್‌ಬಿಡಬ್ಲು ಬಿ ಸ್ಯಾಂಟ್ನರ್ 76

ಚೇತೇಶ್ವರ ಪೂಜಾರ ಸಿ ಟೇಲರ್ ಬಿ ಸೋಧಿ 78

ವಿರಾಟ್ ಕೊಹ್ಲಿ ಸಿ ಸೋಧಿ ಬಿ ಕ್ರೆಗ್18

ಅಜಿಂಕ್ಯ ರಹಾನೆ ಸಿ ಟೇಲರ್ ಬಿ ಸ್ಯಾಂಟ್ನರ್ 40

ರೋಹಿತ್ ಶರ್ಮ ಔಟಾಗದೆ 68

ರವೀಂದ್ರ ಜಡೇಜ ಔಟಾಗದೆ 50

ಇತರ 09

ವಿಕೆಟ್ ಪತನ: 1-52, 2-185, 3-214, 4-228, 5-277.

ಬೌಲಿಂಗ್ ವಿವರ:

ಟಿಮ್ ಬೌಲ್ಟ್ 9-0-34-0

ಸ್ಯಾಂಟ್ನರ್ 32.2-11-79-2

ಕ್ರೆಗ್ 23-3-80-1

ವಾಗ್ನರ್ 16-5-52-0

ಸೋಧಿ 20-2-99-2

ಗಪ್ಟಿಲ್ 4-0-17-0

ವಿಲಿಯಮ್ಸನ್ 3-0-7-0

ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್: 37 ಓವರ್‌ಗಳಲ್ಲಿ 93/4

ಲಥಾಮ್ ಎಲ್‌ಬಿಡಬ್ಲು ಅಶ್ವಿನ್ 02

ಗಪ್ಟಿಲ್ ಸಿ ವಿಜಯ್ ಬಿ ಅಶ್ವಿನ್ 00

ವಿಲಿಯಮ್ಸನ್ ಎಲ್‌ಬಿಡಬ್ಲು ಅಶ್ವಿನ್ 25

ರಾಸ್ ಟೇಲರ್ ರನೌಟ್ 17

ರೊಂಚಿ ಔಟಾಗದೆ 38

ಸ್ಯಾಂಟ್ನರ್ ಔಟಾಗದೆ 08

ಇತರ 03

ವಿಕೆಟ್ ಪತನ: 1-2, 2-3, 3-43, 4-56.

ಬೌಲಿಂಗ್ ವಿವರ

ಮುಹಮ್ಮದ್ ಶಮಿ 4-2-6-0

ಅಶ್ವಿನ್ 16-1-68-3

ರವೀಂದ್ರ ಜಡೇಜ 14-10-8-0

ಉಮೇಶ್ ಯಾದವ್ 3-0-9-0.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News