ಪಾಕ್‌ಗೆ ರೋಚಕ ಜಯ, ಸರಣಿ ಕೈವಶ

Update: 2016-09-25 18:15 GMT

ದುಬೈ, ಸೆ.25: ಆಲ್‌ರೌಂಡ್ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ದ್ವಿತೀಯ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವನ್ನು 16 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

 ಶನಿವಾರ ರಾತ್ರಿ ಇಲ್ಲಿನ ದುಬೈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ನಾಯಕ ಸರ್ಫರಾಝ್ ಅಹ್ಮದ್ 32 ಎಸೆತಗಳಲ್ಲಿ ಔಟಾಗದೆ ಬಾರಿಸಿದ 46 ರನ್ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ವೇಗಿ ಸೊಹೈಲ್ ತನ್ವೀರ್(3-13) ಹಾಗೂ ಹಸನ್ ಅಲಿ(3-49) ವೆಸ್ಟ್‌ಇಂಡೀಸ್‌ನ್ನು 9 ವಿಕೆಟ್ ನಷ್ಟಕ್ಕೆ 144 ರನ್‌ಗೆ ನಿಯಂತ್ರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

 ಶುಕ್ರವಾರ ನಡೆದ ಮೊದಲ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದ್ದ ಪಾಕಿಸ್ತಾನ ತಂಡ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಹೀಗಾಗಿ ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿರುವ 3ನೆ ಹಾಗೂ ಅಂತಿಮ ಪಂದ್ಯ ಔಪಚಾರಿಕ ಪಂದ್ಯ ಎನಿಸಿಕೊಂಡಿದೆ.

ಗೆಲ್ಲಲು 161 ರನ್ ಗುರಿ ಪಡೆದಿದ್ದ ವಿಂಡೀಸ್‌ಗೆ ವೇಗಿ ತನ್ವೀರ್ ದುಃಸ್ವಪ್ನವಾದರು. ಎವಿನ್ ಲೂವಿಸ್(3) ಹಾಗೂ ಮರ್ಲಾನ್ ಸ್ಯಾಮುಯೆಲ್ಸ್(1) ವಿಕೆಟ್ ಕಬಳಿಸಿ ಅಗ್ರ ಸರದಿಯನ್ನು ಬೇಧಿಸಿದ ತನ್ವೀರ್ ನಿಕೊಲಸ್ ಪೂರನ್(4) ವಿಕೆಟ್ ಪಡೆದರು. ಈ ಮೂಲಕ 53 ಟ್ವೆಂಟಿ-20 ಪಂದ್ಯಗಳಲ್ಲಿ 52 ವಿಕೆಟ್ ಪಡೆದ ಸಾಧನೆ ಮಾಡಿದರು.

ಪಾಕ್‌ನ ಮಾಜಿ ನಾಯಕ ಶಾಹಿದ್ ಅಫ್ರಿದಿ ಟ್ವೆಂಟಿ-20ಯಲ್ಲಿ ಗರಿಷ್ಠ ವಿಕೆಟ್(97) ಪಡೆದಿದ್ದಾರೆ. ವೇಗದ ಬೌಲರ್ ಉಮರ್ ಗುಲ್ ಹಾಗೂ ಸ್ಪಿನ್ನರ್ ಸಯೀದ್ ಅಜ್ಮಲ್ ತಲಾ 85 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಸತತ 2ನೆ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ವಿಫಲವಾದ ವಿಂಡೀಸ್ ಇನಿಂಗ್ಸ್‌ನಲ್ಲಿ ಸುನೀಲ್ ನರೇನ್(30) ಸರ್ವಾಧಿಕ ರನ್ ಗಳಿಸಿದರು. ಆ್ಯಂಡ್ರೆ ಫ್ಲೆಚರ್(29) ಹಾಗೂ ಕೀರನ್ ಪೊಲಾರ್ಡ್(18) ಎರಡಂಕೆ ಸ್ಕೋರ್ ದಾಖಲಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನವನ್ನು ನಾಯಕ ಅಹ್ಮದ್(ಔಟಾಗದೆ 46) ಹಾಗೂ ಆಲ್‌ರೌಂಡರ್ ಶುಐಬ್ ಮಲಿಕ್(37 ರನ್, 28 ಎಸೆತ) 3ನೆ ವಿಕೆಟ್‌ಗೆ 69 ರನ್ ಗಳಿಸಿ ತಂಡವನ್ನು ಆಧರಿಸಿದರು. ಅಹ್ಮದ್ ಇನಿಂಗ್ಸ್‌ನಲ್ಲಿ 5 ಬೌಂಡರಿಗಳನ್ನು ಬಾರಿಸಿದರೆ, ಮಲಿಕ್ ಒಂದು ಸಿಕ್ಸರ್, 3 ಬೌಂಡರಿ ಬಾರಿಸಿದ್ದರು. ಆರಂಭಿಕ ಆಟಗಾರ ಖಲಿದ್ ಲತೀಫ್(36 ಎಸೆತ, 40 ರನ್) ಹಾಗೂ ಬಾಬರ್ ಆಝಂ(19) ಉತ್ತಮ ಆರಂಭ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News