ಕಾಸರಗೋಡು: ಸಮಸ್ಯೆಗಳ ಆಗರವಾದ ಹೊಸ ಬಸ್ ನಿಲ್ದಾಣ

Update: 2016-09-25 18:36 GMT


ಕಾಸರಗೋಡು, ಸೆ.25: ಇಲ್ಲಿನ ಹೊಸ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಸಂಚಾರಕ್ಕೆ ತೆರವು ಮಾಡಿಕೊಂಡಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದಾರೆ. ಬಸ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿಲ್ಲಿಸಲಾಗುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿದೆ. ಸ್ಥಳದ ಕೊರತೆಯೂ ಇರುವುದರಿಂದ ಬಸ್ ನಿಲುಗಡೆಗೂ ಸ್ಥಳಾವಕಾಶ ಇಲ್ಲ. ಅಪಘಾತಕ್ಕೂ ಇದು ಕಾರಣವಾಗಲಿದೆ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ.

ನಿಲ್ದಾಣದೊಳಗೆ ಬಸ್‌ಗಳು ಬರದಿ ರುವುದರಿಂದ ವ್ಯಾಪಾರಿಗಳಿಗೂ ಹೊಡೆತ ಬಿದ್ದಿದೆ. 150ಕ್ಕೂ ಅಧಿಕ ಮಳಿಗೆಗಳು ಈ ಬಸ್ಸು ನಿಲ್ದಾಣದ ಸಂಕೀರ್ಣದಲ್ಲಿದೆ. ಆದರೆ, ಕಳೆದ ಒಂದೂವರೆ ತಿಂಗಳಿನಿಂದ ಇವರ ವ್ಯಾಪಾರ ಕುಸಿದಿದೆ. ಹೊಂಡ ಗುಂಡಿಗಳಿಂದ ತುಂಬಿದ್ದ ಹೊಸ ಬಸ್ ನಿಲ್ದಾಣದೊಳಗೆ ಆಗಸ್ಟ್ ಮೊದಲ ವಾರದಲ್ಲಿ ಇಂಟರ್‌ಲಾಕ್ ಸೇರಿದಂತೆ ದುರಸ್ತಿ ಕಾಮಗಾರಿ ಆರಂಭಿಸಲಾಗಿತ್ತು. ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆದಿದೆ. ಕಾಮಗಾರಿ ಪೂರ್ಣಗೊಂಡು ಹತ್ತು ದಿನ ಕಳೆದರೂ ಇನ್ನೂ ಸಂಚಾರಕ್ಕೆ ತೆರೆದುಕೊಳ್ಳದಿರುವುದು ವಿಪರ್ಯಾಸ.

ಇದಲ್ಲದೆ ಕಾಮಗಾರಿ ಅಪೂರ್ಣ ಎಂಬ ಆರೋಪ ಕೇಳಿಬರುತ್ತಿದೆ. ಬಸ್ ನಿಲ್ದಾಣದೊಳಗೆ ಪ್ರವೇಶಿಸುವ ರಸ್ತೆ ಯಲ್ಲಿ ಭಾರೀ ಗಾತ್ರದ ಹೊಂಡಗಳು ಉಂಟಾಗಿದೆ. ಕಾಮಗಾರಿ ನಡೆಸಿ ಬಸ್ ನಿಲ್ದಾಣದೊಳಗೆ ಕಲ್ಲುಗಳ ರಾಶಿ ಹಾಕಿದ್ದು, ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಇದರಿಂದ ಬಸ್ ನಿಲ್ದಾಣದೊಳಗೆ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗವು ಹರಡುವ ಭೀತಿ ಉಂಟಾಗಿದೆ. ಒಟ್ಟಿನಲ್ಲಿ ಹೊಸ ಬಸ್ ನಿಲ್ದಾಣದ ಸಮಸ್ಯೆಗೆ ಕೊನೆ ಇಲ್ಲದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News