ಇದು ಯಾವ ನ್ಯಾಯ?

Update: 2016-09-26 10:23 GMT

 ಮಾನ್ಯರೆ, ಕಾವೇರಿಯ ಕುರಿತಂತೆ ರಾಜ್ಯ ಸರಕಾರ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ. ಸದನದಲ್ಲಿ ಒಮ್ಮತದ ತೀರ್ಮಾನ ಮಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದಿಲ್ಲ ಎಂದು ಘೋಷಿಸಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ನಮ್ಮ ಅಳಲನ್ನು ಕಿವಿಗೇ ಹಾಕುತ್ತಿಲ್ಲ ಎಂದೂ ರಾಜ್ಯ ಸರಕಾರ ಟೀಕಿಸುತ್ತಿದೆೆ. ಇದೆಲ್ಲವೂ ನಿಜವೇ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ಎತ್ತಿನಹೊಳೆಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ, ಕರಾವಳಿಯ ಜನರಿಗೆ ಮಾಡಿದ್ದೂ ಇದೇ ಅಲ್ಲವೇ?ಇರುವ ಒಂದು ನದಿ ಮೂಲವೇ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆಸರೆಯಾಗಿದೆ. ಕೃಷಿಕರಿಗೆ ಮಾತ್ರವಲ್ಲ, ಮಂಗಳೂರಿನಲ್ಲಿ ಕುಡಿಯುವ ನೀರಿಗೂ ಈ ನದಿಯೊಂದೇ ಆಧಾರ. ಪ್ರತಿ ಬೇಸಿಗೆಯಲ್ಲಿ ನಗರ ಭೀಕರ ಕುಡಿಯುವ ನೀರಿನ ಬರವನ್ನು ಎದುರಿಸುತ್ತದೆ. ಇದರ ಜೊತೆ ಜೊತೆಗೇ ಭಾರೀ ಯೋಜನೆಗಳು ಮಂಗಳೂರಿನಲ್ಲಿ ಬೇರು ಬಿಡುತ್ತಿವೆ. ಇವುಗಳು ತಮ್ಮ ನೀರಿನ ಮೂಲವನ್ನು ಹುಡುಕಿಕೊಂಡಿಲ್ಲ. ಬದಲಿಗೆ ಜನರ ಕುಡಿಯುವ ನೀರಿಗೇ ಈ ಕೈಗಾರಿಕೆಗಳೂ ಬಾಯಿ ಹಾಕಿವೆ. ಆದುದರಿಂದ, ಬೇಸಿಗೆಯಲ್ಲಿ ನೀರು ಬಹುಬೇಗ ಬತ್ತುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೀಗ ಎತ್ತಿನ ಹೊಳೆ ಯೋಜನೆ ಜಾರಿಗೆ ಬಂದರೆ, ಇಡೀ ಮಂಗಳೂರು ನೀರಿಗಾಗಿ ಹಪಹಪಿಸಬೇಕಾಗುತ್ತದೆ. ನೇತ್ರಾವತಿ ನದಿ ಪಾತ್ರದಲ್ಲಿರುವ ಕೃಷಿಕರಂತೂ ನೀರನ್ನು ಮುಟ್ಟಲು ಸಾಧ್ಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬಗೆ ಬಗೆಯಾಗಿ ರಾಜ್ಯದ ಸರಕಾರ ಮತ್ತು ಕೇಂದ್ರ ಸಚಿವರ ಬಳಿ ಮೊರೆಯಿಟ್ಟರೂ ಅವರು ಕಿವುಡರಾಗಿದ್ದಾರೆ. ಇದು ಎಷ್ಟರಮಟ್ಟಿಗೆ ನ್ಯಾಯ? ಕಾವೇರಿಯ ವಿಷಯದಲ್ಲಿ ಕರ್ನಾಟಕಕ್ಕಾದ ಅನ್ಯಾಯದ ಉದಾಹರಣೆಯನ್ನು ಇಟ್ಟುಕೊಂಡು ನಮ್ಮ ಮುಖ್ಯಮಂತ್ರಿ ಇನ್ನಾದರೂ ಕರಾವಳಿಯ ಜನರ ಅಳಲನ್ನು ಕಿವಿಗೆ ಹಾಕಿಕೊಂಡಾರೆ?

Writer - ರಾಜು.ವಿ ಬಂಟಕಲ್, ಸುಳ್ಯ

contributor

Editor - ರಾಜು.ವಿ ಬಂಟಕಲ್, ಸುಳ್ಯ

contributor

Similar News