ಸಿರಿಯದಲ್ಲಿ ನಾಗರಿಕರ ಮೇಲೆ ಭೀಕರ ಬಾಂಬ್ ದಾಳಿ
ವಿಶ್ವಸಂಸ್ಥೆ (ಅಮೆರಿಕ), ಸೆ. 26: ಸಿರಿಯದಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಗಳು ರವಿವಾರ ರಶ್ಯದ ವಿರುದ್ಧ ಕಿಡಿಗಾರಿವೆ. ಸಿರಿಯದ ನಗರ ಅಲೆಪ್ಪೊದ ಮೇಲೆ ಸಿರಿಯ ಮತ್ತು ರಶ್ಯ ಯುದ್ಧ ವಿಮಾನಗಳು ಇತ್ತೀಚಿನ ದಿನಗಳಲ್ಲಿ ಭೀಕರ ಬಾಂಬ್ ದಾಳಿಯನ್ನು ನಡೆಸುತ್ತಿರುವುದನ್ನು ಸ್ಮರಿಸಬಹುದಾಗಿದೆ.
ಸಿರಿಯದಲ್ಲಿ ನಡೆಯುತ್ತಿರುವ ನರಹತ್ಯೆಯ ಬಗ್ಗೆ ಚರ್ಚಿಸಲು ಕರೆಯಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಸಮಂತಾ ಪವರ್, ರಶ್ಯ ‘ಅನಾಗರಿಕ ಕ್ರೌರ್ಯ’ದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದರು.
ಸಿರಿಯದ ಅಧ್ಯಕ್ಷ ಹಾಗೂ ರಶ್ಯದ ಮಿತ್ರ ಬಶರ್ ಅಲ್ ಅಸಾದ್‌ರನ್ನು ನಿಯಂತ್ರಿಸುವಂತೆ ಹಾಗೂ ಭೀಕರ ವಾಯುದಾಳಿಯನ್ನು ನಿಯಂತ್ರಿಸುವಂತೆ ಭದ್ರತಾ ಮಂಡಳಿಯ ಸದಸ್ಯರು ರಶ್ಯವನ್ನು ಒತ್ತಾಯಿಸಿದರು.
‘‘ಶಾಂತಿಯನ್ನು ನೆಲೆಗೊಳಿಸುವ ಬದಲು, ರಶ್ಯ ಮತ್ತು ಅಸಾದ್ ಯುದ್ಧದಲ್ಲಿ ತೊಡಗಿದ್ದಾರೆ’’ ಎಂದು ಪವರ್ ಹೇಳಿದರು. ‘‘ರಶ್ಯ ನಡೆಸುತ್ತಿರುವುದು ಮತ್ತು ಪ್ರಾಯೋಜಿಸುತ್ತಿರುವುದು ಭಯೋತ್ಪಾದನೆ ನಿಗ್ರಹವಲ್ಲ. ಅದು ನಡೆಸುತ್ತಿರುವುದು ಅನಾಗರಿಕ ಕ್ರೌರ್ಯ’’ ಎಂದರು.
ಬಂಡುಕೋರರ ನಿಯಂತ್ರಣದಲ್ಲಿರುವ ಪೂರ್ವ ಅಲೆಪ್ಪೊವನ್ನು ಸ್ವಾಧೀನಪಡಿಸುವುದಕ್ಕಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂಬುದಾಗಿ ಸಿರಿಯ ಸೇನೆ ಗುರುವಾರ ಘೋಷಿಸಿದ ಬಳಿಕ ಕನಿಷ್ಠ 124 ಮಂದಿ ಮೃತಪಟ್ಟಿದ್ದಾರೆ ಹಾಗೂ ಅವರ ಪೈಕಿ ಹೆಚ್ಚಿನವರು ನಾಗರಿಕರು ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
‘‘ಅಲೆಪ್ಪೊದಲ್ಲಿ ಯುದ್ಧಾಪರಾಧಗಳು ನಡೆಯುತ್ತಿವೆ’’ ಎಂದು ಫ್ರಾನ್ಸ್ ರಾಯಭಾರಿ ಫ್ರಾಂಕೋಯಿಸ್ ಡೆಲಟರ್ ಹೇಳಿದ್ದಾರೆ. ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಶಿಕ್ಷೆಯಾಗುವುದನ್ನು ಖಾತರಿಪಡಿಸುವಂತೆ ಅವರು ಕರೆ ನೀಡಿದ್ದಾರೆ.
‘ಬಂಕರ್ ಬಸ್ಟಿಂಗ್’ ಬಾಂಬ್‌ಗಳು ಮತ್ತು ಇತರ ಆಧುನಿಕ ಶಸ್ತ್ರಗಳನ್ನು ಬಳಸಿ ವಾಯು ದಾಳಿ ನಡೆಸಲಾಗುತ್ತಿದ್ದು, ನಾಗರಿಕರ ವಾಸ ಸ್ಥಾನಗಳನ್ನು ಪುಡಿಗೈಯಲಾಗುತ್ತಿದೆ ಹಾಗೂ ಸಿರಿಯನ್ನರ ಬದುಕನ್ನು ನರಕ ಸದೃಶ ಮಾಡಲಾಗುತ್ತಿದೆ ಎಂದು ಬ್ರಿಟನ್ ಪ್ರತಿನಿಧಿ ಹೇಳಿದರು.