ಪಂಜಾಬ್‌ನಲ್ಲಿ ಶತಾಯುಷಿ ಮಹಿಳೆ ಮೇಲೆ ಅತ್ಯಾಚಾರ, ಕೊಲೆ ...!
ಪಟಿಯಾಲ, ಸೆ.27: ನೂರರ ಹರೆಯದ ಮಹಿಳೆಯ ಮೃತದೇಹ ಭತ್ತದ ಗದ್ದೆಯೊಂದರಲ್ಲಿ ಪಂಜಾಬ್ ನ ಪಟಿಯಾಲದ ಗ್ರಾಮವೊಂದರಲ್ಲಿ ಸೋಮವಾರ ಪತ್ತೆಯಾಗಿದ್ದು, ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವ ಬಗ್ಗೆ ಆಕೆಯ ಕುಟುಂಬದ ಸದಸ್ಯರು ಗುಮಾನಿ ವ್ಯಕ್ತಪಡಿಸಿದ್ದಾರೆ.
ದಾಬ್ ಕಲಾನ್ ಗ್ರಾಮದ ಗದ್ದೆಯಲ್ಲಿ ವೃದ್ಧೆಯ ಮೃತದೇಹ ರಕ್ತದ ಮಡುವಿನಲ್ಲಿ ಕಂಡು ಬಂದಿದೆ. ಆಕೆಯ ತಲೆ ಸೇರಿದಂತೆ ದೇಹದ ಮೇಲೆ ಹಲವು ಇರಿತದ ಗಾಯಗಳು ಪತ್ತೆಯಾಗಿದೆ.
ಮನೆಯ ಹೊರ ಜಗಲಿಯಲ್ಲಿ ನಿದ್ರಿಸುತ್ತಿದ್ದ ವೃದ್ಧೆ ಬೆಳಗ್ಗೆ ಕಾಣೆಯಾಗಿದ್ದರು. ಮನೆ ಮಂದಿ ಹುಡುಕಾಡಿದಾಗ ಆಕೆಯ ಮೃತದೇಹ ಬೆಳಗ್ಗೆ ಹೊಲದಲ್ಲಿ ಪತ್ತೆಯಾಗಿತ್ತು. ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಮಾರಕಾಯುಧ ಬಳಸಿ ಆಕೆಯನ್ನು ಕೊಂದಿರುವ ಗುಮಾನಿಯನ್ನು ಮನೆ ಮಂದಿ ವ್ಯಕ್ತಪಡಿಸಿದ್ದಾರೆ.
ಆಸ್ತಿಗಾಗಿ ವೃದ್ಧೆಯನ್ನು ಕೊಲೆಗೈದಿರುವ ಸಾಧ್ಯತೆಯನ್ನು ಪೊಲೀಸರು ನಿರಾಕರಿಸಿದ್ದಾರೆ. ಮಾದಕ ವ್ಯಸನಿಗಳು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿ ಹರ್ವಿಂದರ‍್ ವಿರ್ಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅಕಾಲಿ ದಳ-ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಆರೋಪಿರುವ ಕಾಂಗ್ರೆಸ್ ವೃದ್ಧೆಯನ್ನು ಭೀಕರವಾಗಿ ಕೊಲೆಗೈದಿರುವುದು ಇದಕ್ಕೊಂದು ನಿದರ್ಶನವಾಗಿದೆ ಎಂದು ಹೇಳಿದೆ. ಈ ಸಂಬಂಧ ಕಾಂಗ್ರೆಸ್ ಪಕ್ಷದ ನಿಯೋಗವೊಂದು ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಲಿದೆ ಎಂದು ಸ್ಥಳೀಯ ಕಾಂಗ್ರೆಸ್ ಧುರೀಣರು ಮಾಹಿತಿ ನೀಡಿದ್ದಾರೆ.