ತೆರಿಗೆ ಪಾವತಿಸಿಲ್ಲವೆಂದು ಹಿಲರಿ ಮಾಡಿದ ಆರೋಪಕ್ಕೆ ಟ್ರಂಪ್ ಹೇಳಿದ್ದೇನು?
ವಾಷಿಂಗ್ಟನ್, ಸೆ.27: ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಇತ್ತೀಚೆಗೆ ತಮ್ಮ ರಿಪಬ್ಲಿಕನ್ ಪಕ್ಷದ ಎದುರಾಳಿ ಡೊನಾಲ್ಡ್ ಟ್ರಂಪ್ ಹಲವು ವರ್ಷಗಳಿಂದ ಆದಾಯ ತೆರಿಗೆ ಪಾವತಿಸಿಲ್ಲವೆಂದು ದೂರಿದ್ದರೆ, ಅದನ್ನು ಟ್ರಂಪ್ ನಿರಾಕರಿಸಿಲ್ಲ. ಬದಲಾಗಿ ‘‘ದ್ಯಾಟ್ ಮೇಕ್ಸ್ ಮಿ ಸ್ಮಾರ್ಟ್’’ ಎಂದು ಪ್ರತಿಕ್ರಿಯಿಸಿದ್ದಾರೆ.
ನಂತರ ಸಿಎನ್‌ಎನ್ ಚಾನಲ್ ನ ಜಿಮ್ ಅಕೋಸ್ಟ ಅವರೊಂದಿಗೆ ಮಾತನಾಡುತ್ತಾ ‘‘ಖಂಡಿತವಾಗಿಯೂ ನಾನು ತೆರಿಗೆ ಪಾವತಿಸುತ್ತಿದ್ದೇನೆ’’ಎಂದು ಹೇಳಿದ್ದಾರೆ.
ತಮ್ಮ ತೆರಿಗೆ ರಿಟರ್ನ್ಸ್ ಬಗೆಗಿನ ಮಾಹಿತಿಯನ್ನು ಟ್ರಂಪ್ ಸಾರ್ವಜನಿಕರ ಮುಂದಿಡದೇ ಇರುವುದಕ್ಕೆ ಕ್ಲಿಂಟನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಟ್ರಂಪ್ ಮಾತ್ರ ಆಡಿಟ್ ಪ್ರಕ್ರಿಯೆ ಸಂಪೂರ್ಣಗೊಳ್ಳದೆ ತಮ್ಮ ತೆರಿಗೆ ಪಾವತಿ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲವೆಂದು ಹೇಳಿಕೊಂಡಿದ್ದಾರೆ. ಆದರೆ ಕಳೆದ 40 ವರ್ಷಗಳಿಂದ ಪ್ರಮುಖ ಪಕ್ಷದ ಪ್ರತಿಯೊಬ್ಬ ಅಧ್ಯಕ್ಷೀಯ ಅಭ್ಯರ್ಥಿ ತಮ್ಮ ತೆರಿಗೆ ಪಾವತಿ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುತ್ತಿದ್ದರು.
’’ಅವರು ಏನನ್ನೋ ಮುಚ್ಚಿಡುತ್ತಿದ್ದಾರೆ,’’ ಎಂದು ಇತ್ತೀಚೆಗೆ ನಡೆದ ಸಂವಾದದ ಸಂದರ್ಭ ಹಿಲರಿ ಸಂಶಯ ವ್ಯಕ್ತ ಪಡಿಸಿದ್ದರಲ್ಲದೆ ‘‘ತಾವು ಆದಾಯ ತೆರಿಗೆ ಪಾವತಿಸಿಲ್ಲವೆಂದು ಅಮೆರಿಕದ ಜನರು ತಿಳಿಯಬಾರದೆಂದು ಅವರ ಭಾವನೆಯಾಗಿರಬಹುದು. ಅವರು ಕೆಲ ಸಮಯದ ಹಿಂದೆ ಕ್ಯಾಸಿನೋ ಪರವಾನಿಗೆ ಪಡೆಯಲು ಯತ್ನಿಸುತ್ತಿರುವಾಗ ಆದಾಯ ತೆರಿಗೆ ಪಾವತಿಸಿಲ್ಲವೆಂದು ತಿಳಿದು ಬಂದಿತ್ತು,’’ ಎಂದು ಹಿಲರಿ ಹೇಳಿದ್ದರು.