ಪಾಕ್ ಗೆ ಮತ್ತೆ ಕುಟುಕಿದ ಭಾರತದ ಈನಮ್
ಸೆ. 27: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ದೊಡ್ಡದಾಗಿ ಹಾಗೂ ಸ್ಪಷ್ಟವಾಗಿ ನೀಡಲಾಗಿದೆ ಎಂದು ಭಾರತ ಇಂದು ಪಾಕಿಸ್ತಾನಕ್ಕೆ ತಿಳಿಸಿದೆ. ಅದೇ ವೇಳೆ, ಪಾಕಿಸ್ತಾನವು ತನ್ನದೇ ಜನರ ಮೇಲೆ ದೌರ್ಜನ್ಯಗಳನ್ನು ನಡೆಸುವ ಹಾಗೂ ಸಹಿಷ್ಣುತೆ, ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳ ಬಗ್ಗೆ ಉಪದೇಶ ನೀಡುವ ‘‘ಜಡ್ಡುಗಟ್ಟಿದ ದೇಶ’’ವಾಗಿದೆ ಎಂದು ಬಣ್ಣಿಸಿದೆ.
ಸೋಮವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮಾಡಿದ ಭಾಷಣಕ್ಕೆ ಪಾಕಿಸ್ತಾನ ನೀಡಿರುವ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಭಾರತ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಸಾವಿರಾರು ಬಿಲಿಯ ಡಾಲರ್ ನೆರವು ಪಡೆಯುವ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಸುರಕ್ಷಿತ ಆಶ್ರಯ ತಾಣಗಳು ಹೇಗೆ ನೆಲೆಸಿವೆ ಎಂಬುದಕ್ಕೆ ಪಾಕಿಸ್ತಾನ ವಿವರಣೆ ನೀಡಬಲ್ಲುದೇ ಎಂದು ಪ್ರಶ್ನಿಸಿದೆ.
ಸುಶ್ಮಾ ಸ್ವರಾಜ್‌ರ ಭಾಷಣಕ್ಕೆ ಉತ್ತರಿಸುವ ಹಕ್ಕನ್ನು ಚಲಾಯಿಸಿದ ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋದಿ, ಭಾರತದ ವಿದೇಶ ಸಚಿವೆ ಮಾಡಿರುವ ಎಲ್ಲ ‘‘ಆಧಾರರಹಿತ ಆರೋಪ’’ಗಳನ್ನು ಪಾಕಿಸ್ತಾನ ತಿರಸ್ಕರಿಸುವುದಾಗಿ ಹೇಳಿದ್ದರು. ಕಾಶ್ಮೀರ ಯಾವತ್ತೂ ಭಾರತದ ಸಮಗ್ರ ಭಾಗವಾಗಿರಲಿಲ್ಲ, ಆಗುವುದೂ ಇಲ್ಲ ಎಂದಿದ್ದರು.
ಕಾಶ್ಮೀರ ‘‘ವಿವಾದಿತ ಭೂಭಾಗವಾಗಿದೆ’’ ಎಂದು ಹೇಳಿದ ಅವರು, ಅದರ ಅಂತಿಮ ಸ್ಥಿತಿಗತಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗನುಗುಣವಾಗಿ ಇನ್ನಷ್ಟೇ ನಿರ್ಧರಿಸಬೇಕಾಗಿದೆ ಎಂದು ಮಲೀಹಾ ಹೇಳಿದರು.
ಮಲೀಹಾರ ಹೇಳಿಕೆಗೆ ಪ್ರತಿಕ್ರಿಯಿಸುವ ಹಕ್ಕನ್ನು ಚಲಾಯಿಸಿದ ವಿಶ್ವಸಂಸ್ಥೆಯ ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿ ಈನಮ್ ಗಂಭೀರ್, ‘‘ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವೆ ಏನು ಹೇಳಿದರು ಎನ್ನುವುದನ್ನು ಪಾಕಿಸ್ತಾನದ ರಾಯಭಾರಿ ಸರಿಯಾಗಿ ಕೇಳಿಸಿಕೊಂಡಂತೆ ಕಾಣಿಸುತ್ತಿಲ್ಲ’’ ಎಂದರು.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಮುಂದೆಯೂ ಆಗಿರುತ್ತದೆ ಎಂಬ ಸುಶ್ಮಾರ ಮಾತುಗಳನ್ನು ಉಲ್ಲೇಖಿಸಿದ ಈನಮ್, ‘‘ಈ ಸಂದೇಶ ಸ್ಪಷ್ಟ ಮತ್ತು ದಿಟ್ಟವಾಗಿದೆ ಎಂದು ನಾವು ನಂಬುತ್ತೇವೆ’’ ಎಂದರು.