ಅಫ್ಘಾನ್: ಮಲಗಿದ್ದ ವೇಳೆ ಸಹೋದ್ಯೋಗಿಗಳಿಂದಲೇ ಹತ್ಯೆಯಾದರು ಸೈನಿಕರು
Update: 2016-09-27 22:09 IST
ಕುಂಡುಝ್ (ಅಫ್ಘಾನಿಸ್ತಾನ), ಸೆ. 27: ಅಫ್ಘಾನಿಸ್ತಾನದ ಉತ್ತರದ ನಗರ ಕುಂಡುಝ್‌ನಲ್ಲಿರುವ ಹೊರಠಾಣೆಯೊಂದರಲ್ಲಿ ನಿದ್ರಿಸುತ್ತಿದ್ದ 12 ಸೈನಿಕರನ್ನು ಅವರ ಇಬ್ಬರು ಸಹೋದ್ಯೋಗಿಗಳೇ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ತಾಲಿಬಾನ್ ಜೊತೆಗೆ ನಂಟು ಹೊಂದಿದ್ದಾರೆನ್ನಲಾದ ಆ ಇಬ್ಬರು ಸೈನಿಕರು ರಾತ್ರಿ ಹತ್ಯಾಕಾಂಡ ನಡೆಸಿದ ಬಳಿಕ ಹೊರಠಾಣೆಯಿಂದ ಪಲಾಯನ ಮಾಡಿ ತಾಲಿಬಾನ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಕುಂಡುಝ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕುಂಡುಝನ್ನು ಒಂದು ವರ್ಷದ ಹಿಂದೆ ಕಿರು ಅವಧಿಗೆ ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಅಲ್ಲಿ ಈ ಸೈನಿಕರನ್ನು ನಿಯೋಜಿಸಲಾಗಿತ್ತು.
ಅಫ್ಘಾನ್ ಮತ್ತು ವಿದೇಶಿ ಸೈನಿಕರನ್ನು ಗುರಿಯಿರಿಸಿ ಒಳಗಿನವರಿಂದಲೇ ದಾಳಿ ನಡೆಯುವ ಘಟನೆಗಳು ಅಫ್ಘಾನಿಸ್ತಾನದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ.